ಬುಧವಾರ, ಜುಲೈ 11, 2012

ಬಸಳೆ ಲಾಭದಾಯಕ ಉಪ ಕೃಷಿ


ಬಸಳೆ ಆರೋಗ್ಯಕ್ಕೆ ಹಿತಕರವಾದ ಒಂದು ಸೊಪ್ಪು ತರಕಾರಿ. ಇದಕ್ಕೆ ಬೇಡಿಕೆ ಹೆಚ್ಚು. ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿ ಸಿಗುತ್ತದೆ. ಆದರೆ ಪಟ್ಟಣಗಳಲ್ಲಿ ದೊರೆಯುವುದು ವಿರಳ. ಇದರ ಸೇವನೆಯಿಂದ ನಮ್ಮ ದೇಹ ಬಲವು ಹೆಚ್ಚುವುದು. ಬಸಳೆಯನ್ನು ಉಪ ಅಥವಾ ಮಿಶ್ರ ಬೆಳೆಯಾಗಿಯೂ ಮಾಡಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ಬಸಳೆಯ ಕಟ್ಟೊಂದಕ್ಕೆ ಸುಮಾರು ಹತ್ತರಿಂದ ಇಪ್ಪತು ರೂಪಾಯಿ ಬೆಲೆ ಇರುತ್ತದೆ.
 ಇದೊಂದು ಭಾರತೀಯ ಮೂಲದ ಸೊಪ್ಪು ತರಕಾರಿ. ಬಳ್ಳಿಯಂತೆ ಹಬ್ಬಿ ಬೆಳೆಯುವು ಗಿಡವಾಗಿದ್ದು, ಇದರ ಎಲೆ, ಬಳ್ಳಿ ಎಲ್ಲವನ್ನು ಪದಾರ್ಥ ಮಾಡಲು ಬಳಸುತ್ತಾರೆ. ಬಸಳೆ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದೆ.
ಔಷಧೀಯ ಗುಣ: ಬಸಳೆಯಲ್ಲಿ ಹೇರಳವಾಗಿ ಔಷಧೀಯ ಗುಣವಿದೆ. ಬಸಳೆ ಸೇವನೆಯಿಂದ ರೋಗ ನಿರೋಧಕ ಗುಣ ವೃದ್ಧಿ. ಇದರ ದಡಿಯನ್ನು ಜಗಿಯುವುದರಿಂದ ಬಾಯಿ ಹಣ್ಣು, ಮಲಬದ್ಧತೆ ಕಡಿಮೆಯಾಗುವುದು. ಬಸಳೆಯ ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪತ್ರಹರಿತು ಅಂಶ ಲಭಿಸುವುದು. ಅಡುಗೆ:
ಬಸಳೆ ಬಳಸಿ ಬಹು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ. ಬಸಳೆಯೊಂದಿಗೆ ಪಚ್ಚೆ ಹೆಸರು, ಹಲಸಿನ ಬೇಳೆ, ಹುರುಳಿ, ಅಲಸಂಡೆ ಕಾಳು ಇತ್ಯಾದಿಗಳನ್ನು ಬಳಸಿ ಸಾಂಬಾರು ಹಾಗೂ ಬೇರೆ ಬೇರೆ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತದೆ.
ಬಸಳೆ ನಾಟಿ:  ಬಸಳೆ ಬೆಳೆ ಒಂದು ಲಾಭದಾಯಕ ಉಪ ಕೃಷಿ. ಇದನ್ನು ಬೆಳೆಯಲು ಎಕರೆ ಗಟ್ಟಲೆ ಜಾಗದ ಅವಶ್ಯವಿಲ್ಲ. ಮನೆ ಅಂಗಳ, ಗದ್ದೆ, ತೋಟ ಹಿತ್ತಿಲು ಹೀಗೆ ಎಲ್ಲಿ ಬೇಕಾದರು ಬಸಳೆ ಬೆಳೆಯ ಬಹುದು. ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲಿನ ನೀರು ಹೋಗುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಆದರೆ ಬಿಸಿಲು ಅಗತ್ಯ. ಮರದ ನೆರಳಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುವುದಿಲ್ಲ. ಬಸಳೆ ಕೃಷಿಗೆ ಕೂಲಿಯಾಳುಗಳ ಅಗತ್ಯವೂ ಇಲ್ಲ. ಮನಸ್ಸು ಮಾಡಿದರೆ ಗೃಹಿಣಿಯರೇ ಬಿಡುವಿನ ವೇಳೆಯಲ್ಲಿ ಬಸಳೆ ಬೆಳೆಯಬಹುದು. ಮುಂಗಾರು ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾದಾಗ ಬಸಳೆ ನಾಟಿ ಮಾಡಲು ಸೂಕ್ತ ಸಮಯ. ಬಸಳೆಯನ್ನು ಬಳ್ಳಿ ನೆಡುವ ಮೂಲಕವೇ ಬೆಳೆಸಲಾಗುತ್ತದೆ. ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಬಸಳೆ ಕೃಷಿಗೆ ನೆಲವನ್ನು ಅಗೆದು ಸೂಲುಗಳನ್ನು ಮಾಡಿದರೆ ಉತ್ತಮ. ಯಾಕೆಂದರೆ ಅದರ ಬುಡದಲ್ಲಿ ನೀರು ನಿಂತು ಇಂಗುವುಂತಿರಬೇಕು. ಒಂದರಿಂದ ಒಂದೂವರೆ ಅಡಿ ಆಳದ ಸಾಲುಗಳನ್ನು ತಯಾರಿಸಿ ಅದರಲ್ಲಿ ಸುಮಾರು ಎರಡರಿಂದ ಮೂರು ಅಡಿ ಅಂತರದಲ್ಲಿ ಗೂಟ ಹಾಕಿ ಬಳ್ಳಿಯನ್ನು ನಡಬೇಕು. ಒಂದೆರಡು ವಾರಗಳ ಅನಂತರ ನಾಲ್ಕರಿಂದ ಐದು ಅಡಿ ಎತ್ತರದ ಚಪ್ಪರ ನಿರ್ಮಿಸಿದರೆ ಬಳ್ಳಿ ಹಬ್ಬಲು ಸಹಕಾರಿಯಾಗುವುದು.
ಗೊಬ್ಬರ: ಬಳ್ಳಿ ನಾಟಿ ಮಾಡಿದಾಗಲೇ ನೀರಿನಾಂಶ ಉಳಿದುಕೊಳ್ಳಲು ದನ ಸಗಣಿ, ಸೊಪ್ಪು, ತರಗೆಲೆ, ಅಡಿಕೆ ಸಿಪ್ಪೆ ಇತ್ಯಾದಿಗಳನ್ನು ಹಾಕಬಹುದು. ಬಳ್ಳಿ ಚೆನ್ನಾಗಿ ಚಿಗುರಲಾರಂಭಿಸಿದಾಗ ಬೂದಿ, ಹಟ್ಟಿಗೊಬ್ಬರ, ಸುಡುಮಣ್ಣು ನೀಡಬೇಕು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನೀರು ಸುರಿಯಬೇಕು. ಮುಂಜಾನೆ ಗಿಡದ ಮೇಲೆ ನೀರು ಚಿಮುಕಿಸಿ ಇಬ್ಬನಿ ಬಿದ್ದಿರುವುದನ್ನು ತೆಗೆಯುವುದರಿಂದ ಬಸಳೆ ರೋಗ ಮುಕ್ತ, ಸ್ವಚ್ಛವಾಗಿರುತ್ತವೆ. ಕೊಯ್ಲು: ಬಸಳೆ ನಾಟಿ ಮಾಡಿ ಸುಮಾರು ಐದರಿಂದ ಆರು ವಾರಗಳಲ್ಲಿ ಕಟಾವು ಮಾಡಬಹುದು. ಬಸಳೆ ದಡಿ, ಸೊಪ್ಪು ಎಳತಾಗಿರುವಾಗಲೇ ಕಟಾವು ಮಾಡಿದರೆ ಅಡುಗೆಗೆ ಉತ್ತಮವಾಗಿರುತ್ತವೆ. ಕಟವು ಪ್ರಾರಂಭವಾದ ಮೇಲೆ ನಿರಂತರ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ಮಾಡಬಹುದು.

ಸೋಮವಾರ, ಜುಲೈ 2, 2012

ಕನಸು


ಕನಸು ಕನಸು
ಯಾಕಿಂಗಾಡ್ತಿ?
ಮನಸಲಿ ನಿಲ್ಲದೆ
ಹಿಂಗ್ಯಾಕೋಡ್ತಿ?
ನಿದ್ರೆಲಿ ಇರಲು
ಅರೆ ಕ್ಷಣ ಬಂದು
ಎಚ್ಚರವಾಗಲು ನೀನೋಡ್ತಿ
ಕೆಲವೊಮ್ಮೆ ಬಂದು
ಹೆದರಿಸಿ ಹೋಗ್ತಿ
ಇನ್ನು ಕೆಲವೊಮ್ಮೆ ಬಂದು
ಖುಷಿ ಪಡಿಸಿ ಹೋಗ್ತಿ
ಕನಸು ಕನಸು
ಯಾಕಿಂಗಾಡ್ತಿ?
ಮನಸಲಿ ನಿಲ್ಲದೆ
ಹಿಂಗ್ಯಾಕೋಡ್ತಿ?

ಸ್ವತಂತ್ರ ಭಾರತದ ವೈಭವ


ಭ್ರಷ್ಟಾಚಾರದ ರಕ್ಕಸ ನರ್ತನ
ಶ್ರೀಸಾಮಾನ್ಯರ ಮರ್ದನ
ಸ್ವೇಚ್ಛ ರಾಜಕಾರಣಿಗಳಿಗೆ
ಸ್ವರ್ಗ ದರ್ಶನ

ಅಂದು ವಿದೇಶಿ
ಆಕ್ರಮಿಗಳ ಕಾಟ
ಇಂದು ನಮ್ಮಲೇ ಇರುವ
ತಿಗಣೆ, ಹೇನುಗಳ ಹೀರಾಟ

ಹಿಂದಿನವರು ಸ್ವಾತಂತ್ರ್ಯಕ್ಕಾಗಿ
ಹೋರಾಡಿದರು
ಈಗಿನವರು ಕುರ್ಚಿಗಾಗಿ
ಬಡಿದಾಡಿದರು

ಬಿಗಿಯುವರು ಭಾಷಣ
ನಾವೆಲ್ಲರೊಂದೆಯೆಂದು
ಸಭೆ ಮುಗಿದೊಡನೆ
ಎಲ್ಲರು ಒಂದು... ಒಂದು... ಇಂದು

ನಂಬಿಕೆಗೆ ಬೆಲೆಯಿಲ್ಲ
ಇದು ನಯವಂಚಕರ ಕಾಲ
ಸ್ವಾಭಿಮಾನಿಗಳಿಗೆ,
ಸತ್ಯನಿಷ್ಠರಿಗಿಲ್ಲಿ ಕೊನೆಗಾಲ

ಕಾಳಧನದ ಮದವೇರಿ
ರಾಮ ರಾಜ್ಯದ ಕನಸು ಮರೆಯಾಗಿ
ಸ್ವಾ(ರ್ಥ)ರಾಜ್ಯ ಮೆರೆಯುತಿದೆ
ಇದು ಸ್ವತಂತ್ರ ಭಾರತದ ವೈಭವ

ಟಿವಿ, ಕಂಪ್ಯೂಟರ್ ಬಳಕೆ ವೇಳೆ ಸುರಕ್ಷತೆ ಬಗ್ಗೆ ಗಮನಿಸಿ


ಇಂದು ಟಿವಿ. ಕಂಪ್ಯೂಟರ್ಗಳನ್ನು ಬಳಕೆ ಮಾಡದವರು ಬಹಳ ವಿರಳ. ಪಕ್ಕದ ಮನೆಯಯವರು 32 ಇಂಚಿನ ಟಿವಿ, ಎಲ್ಸಿಡಿ ಕಂಪ್ಯೂಟರ್ ತಂದಿದ್ದಾರೆಂದು ಸಾವಿರೂರು ರೂಪಾಯಿ ವೆಚ್ಚ ಮಾಡಿ ಟಿವಿ, ಕಂಪ್ಯೂಟರ್ ಖರೀದಿಸುವ ಮೊದಲು ಅದರ ನಿರ್ವಹಣೆ ನಮ್ಮಿಂದ ಸಾಧ್ಯವೇ ಎಂದು ಯೋಚಿಸಿ. ಅದರ ಜತೆಗೆ ಸುರಕ್ಷತಾ ಕ್ರಮಗಳ ಬಗೆಗೂ ಗಮನ ಹರಿಸುವುದು ಅತ್ಯಗತ್ಯ. ಟೀವಿಯನ್ನು ಹತ್ತಿರದಿಂದ ವೀಕ್ಷಿಸಿದರೆ ಕಣ್ಣು ಹಾಳಾಗುತ್ತದೆ. ಆದ್ದರಿಂದ ದೂರ ಕುಳಿತು ನೋಡಿ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಆದರೆ ಟಿವಿ ನೋಡಿದರೆ ಒಮ್ಮೆಲೆ ಕಣ್ಣು ಕಳೆದುಕ್ಳೊುವುದಿಲ್ಲ. ಬದಲಿಗೆ ಕಣ್ಣಿಗೆ ಆಯಾಸವಾಗುತ್ತದೆ. ಶ್ರೀಘ್ರವಾಗಿ ನಿದ್ದೆ ಬರುತ್ತದೆ. ಸುಸ್ತಾದ ಕಣ್ಣುಗಳಿಗೆ ಆಕ್ಷಣ ಕೊಂಚ ದೃಷ್ಟಿದೋಷ ಉಂಟಾಗುತ್ತದೆ. ನಿರಂತರ ಟಿವಿ ನೋಡುವುದರಿಂದ ಅಂತಹ ಅನುಭವವಾಗಬಹುದು. ಸ್ವಲ್ಪ ಕಣ್ಣು ಮುಚ್ಚಿ ಕುಳಿತರೆ ಸರಿಹೋಗುವುದು.
ಅದೇ ರೀತಿ ಟೀವಿಯನ್ನು ಕತ್ತಲ ಕೋಣೆಯಲ್ಲೂ ನೋಡಬಾರದು ಹಾಗೂ ಅತೀ ಹೆಚ್ಚು ಬೆಳಕಿನಲ್ಲೂ ನೋಡಬಾರದು. ಆದರೆ, ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಟೆಲಿವಿಷನ್ ಮೇಲೆ ನೇರವಾಗಿ ಬೆಳಕು ಬೀಳುವಂತಿರಬಾರದು. ನಿಮ್ಮ ಕಣ್ಣಿನ ದೃಷ್ಟಿಗೂ ನೇರವಾಗಿ ಬೆಳಕು ಇರಬಾರದು ಹಾಗೂ ಸನ್ಗ್ಲಾಸ್ ಹಾಕಿಕೊಂಡು ಟೀವಿ ನೋಡಬಾರದು. ಟೀವಿ ನೋಡುವುದರಿಂದ ಕಣ್ಣಿಗೆ ಯಾವುದೇ ತೊಂದರೆ ಆಗದಂತೆ ರಕ್ಷಿಸಿಕೊಳ್ಳಬೇಕಾದರೆ ನಿಮ್ಮ ಟೀವಿ ಸ್ಕ್ರೀನ್ ಅಗಲದ ಮೂರರಿಂದ ನಾಲ್ಕು ಪಟ್ಟು ದೂರದಲ್ಲಿ ಕುಳಿತು ನೋಡಬೇಕು. ಟೀವಿಯನ್ನು ಕನಿಷ್ಠ 30 ಡಿಗ್ರಿ ಕೋನದಲ್ಲಿ ನೋಡಿದರೆ ಉತ್ತಮ ಎಂದು ಖ್ಯಾತ ವಿದ್ಯುನ್ಮಾನ ತಂತ್ರಜ್ಞ ಬೆರ್ನಾಡ್ ಲೆಚ್ನೆರ್ ತನ್ನ ‘ಲೆಚ್ನೆರ್ ಡಿಸ್ಟೆನ್ಸ್ ಸೂತ್ರ’ದಲ್ಲಿ ಹೇಳಿದ್ದಾರೆ. ಕೆನಡಿಯನ್ ಅಸೋಸಿಯೇಷನ್ ಆ್ ಆಪ್ತೊಮೆಟ್ರಿಸ್ಟ್ ಸಲಹೆ ಪ್ರಕಾರ ಟ್ವೆಂಟಿ-20 ಸೂತ್ರದಲ್ಲಿ ಇಪ್ಪತ್ತು ನಿಮಿಷ ಟೀವಿ ನೋಡಿದರೆ, 20 ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು ಎಂದಿದೆ.
ಕಂಪ್ಯೂಟರ್ ಬಳಕೆ ರೀತಿ
ಇಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಇಲ್ಲದ ಕ್ಷೇತ್ತವೆ ಇಲ್ಲ ಎನ್ನಬಹುದು. ಆದರೆ ಬಹಳ ಮಂದಿಗೆ ಕಂಪ್ಯೂಟರ್ ಬಳಕೆ ಹೇಗೆ ಮಾಡಬೇಕು, ಮಾನಿಟರ್ಗೂ ಕಣ್ಣಿನ ದೃಷ್ಟಿಗೂ ಎಷ್ಟು ಅಂತರವಿರಬೇಕು, ಹೇಗೆ ಮಾನಿಟರ್ ಇಡಬೇಕು, ಬೆಳಕು ಎಷ್ಟಿರಬೇಕು ಹಾಗೂ ಯಾವ ಕಡೆಯಿಂದ ಬರಬೇಕು ಎಂಬ ಬಗ್ಗೆ ತಿಳಿದಿಲ್ಲ.
ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಕನಿಷ್ಠ 25 ಇಂಚ್ಗಳ ದೂರದಲ್ಲಿರಬೇಕು. ನೀವು ಕುಳಿತಿರುವ ಸ್ಥಳದಿಂದ ನಿಮ್ಮ ದೃಷ್ಟಿಗೆ ಸಮಾನಾಂತರ ಅಥವಾ 15ರಿಂದ 20 ಡಿಗ್ರಿ ಕೆಳಗಿರಬೇಕು ಇಲ್ಲವೆ ನಿಮ್ಮ ಅಡ್ಡವಾದ ದೃಷ್ಟಿಯ 15 ಡಿಗ್ರಿ ಮತ್ತು 50 ಡಿಗ್ರಿ ಕೆಳಗೂ ಮಾನಿಟರ್ ಇಡಬಹುದು.
ಸ್ವಚ್ಛವಾಗಿಡಿ  
ಎಲ್ಸಿಡಿ, ಎಲ್ಇಡಿ ಹಾಗೂ ಪ್ಲಾಸ್ಮಾ ಟೀವಿಗಳ ಸ್ಕ್ರೀನ್ಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ಮಾಡಿರುವುದರಿಂದ ಅವುಗಳು ಬೇಗನೆ ಧೂಳನ್ನು ಆಕರ್ಷಿಸುತ್ತವೆ. ಆದ್ದರಿಂದ ಅವುಗಳ ಸ್ಕ್ರೀನ್ಗಳನ್ನು ಸ್ವಚ್ಛಗೊಳಿಸಲು ಮೈಕ್ರೋ ೈಬರ್ಯುಕ್ತ ಬಟ್ಟೆಗಳನ್ನು ಹಾಗೂ ಪ್ರತ್ಯೇಕ ಸ್ಪ್ರೇ ಅನ್ನು ಟೀವಿ ಕೊಳ್ಳುವಾಗ ಜತೆಯಲ್ಲಿ ನೀಡಿರುತ್ತಾರೆ. ಅದನ್ನು ಮಾತ್ರವೇ ಬಳಸಿ ಸ್ವಚ್ಛ ಮಾಡುವುದು ಒಳ್ಳೆಯದು. ಒದ್ದೆ ಬಟ್ಟೆ, ಸೋಪ್ ನೀರು ಇತ್ಯಾದಿ ಬಳಕೆ ಸಮಂಜಸವಲ್ಲ.

ಹಾಗಲ: ಬಾಯಿಗೆ ಕಹಿ; ದೇಹಕ್ಕೆ ಸಿಹಿ


ಹಾಗಲ ಕಾಯಿ ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿ. ಇದು ಔಷಧೀಯ ಗುಣ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದಿರುವ ತರಕಾರಿ. ಹಾಗಲಕಾಯಿಯ ಹೊರಮೈ ಮುಳ್ಳಿನಂತಹ ರಚನೆಯಿಂದ ಕೂಡಿದ್ದು, ಕಡುಹಸುರು ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೂಲ: ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ. ಪ್ರಪಂಚದ ಹೆಚ್ಚಿನ ಎಲ್ಲೆಡೆ ಇದರ ಬೇಸಾಯ, ಬಳಕೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ಆದ್ಯತೆ ಹೆಚ್ಚು. ಹಾಗಲ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಬಳ್ಳಿಯಾಗಿ ಹಬ್ಬುವ ವರ್ಗಕ್ಕೆ ಸೇರಿದ್ದು, ಈ ಗಿಡ ಬೆಳೆಯಲು ಆಸರೆಯ ಅಗತ್ಯವಿದೆ. ಇದರ ಎಲೆ ಮತ್ತ ಕಾಯಿಯ ಬಣ್ಣ ಹಸುರು. ಎಲೆಗಳು ಕೈಯ ಆಕಾರ ಹೊಂದಿದ್ದು ಸೀಳುಗಳನ್ನು ಒಳಗೊಂಡಿರುತ್ತವೆ. ಕಾಡುಗಳಲ್ಲಿ ಹಾಗಲವನ್ನೇ ಹೋಲುವ ಇತರ ಕಾಯಿಗಳು ಕಾಣಸಿಗುತ್ತವೆ.
ಪೌಷ್ಟಿಕಾಂಶ  
ಹಾಗಲ ಕಾಯಿ ರುಚಿ ಕಹಿಯಾದರೂ ಒಂದು ಪೌಷ್ಟಿಕಾಂಶಯುಕ್ತ ತರಕಾರಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ‘ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಥಯಮಿನ್, ಕ್ಯಾಲಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.
  ಔಷಧೀಯ ಗುಣ
ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಚರ್ಮದ ಕಾಯಿಲೆಗಳಿರುವವರು ಇದನ್ನ ಸೇವಿಸಿದರೆ ಉತ್ತಮ. ಹಾಗಲ ಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಇದರ ಬಳಕೆಯಿಂದ ರೋಗ ನಿರೊಧಕ ಶಕ್ತಿ ವೃದ್ಧಿಸುವುದು. ಜಂತುನಾಶಕ, ಜೀರ್ಣಕಾರಕ, ಜ್ವರ ಪೀಡಿತರಿಗೆ ಬಾಯಿ ರುಚಿ ಹೆಚ್ಚಲು, ಮಲಬದ್ಧತೆಗೂ ಒಳ್ಳೆಯದು. ಹಾಗಲ ಕಾಯಿ ರಸ ಮೊಡವೆ ನಿವಾರಕ ಕೂಡ ಹೌದು. ಅಡುಗೆ: ಹಾಗಲ ಕಾಯಿಯಿಂದ ರುಚಿ ರುಚಿಯಾದ ನಾನಾ ತರದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಹಾಗಲ ಕಾಯಿ ಗೊಜ್ಜು, ಮೆಣಸುಕಾಯಿ, ಸಾಂಬಾರು, ಸೆಂಡಿಗೆ ಇತ್ಯಾದಿ. ಹಾಗಲ ತಳಿ: ಹಾಗಲದಲ್ಲಿ ಸ್ಥಳೀಯ ತಳಿಗಳಲ್ಲದೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಕೆಲವೊಂದು ಉತ್ತಮ ತಳಿಗಳನ್ನು ಸಂಶೋಧಿಸಿವೆ. ಮುಖ್ಯವಾಗಿ ಅರ್ಕಾಹರಿತ್, ಪೂಸಾದೋಮೌಸವಿ, ಕೊಯಮತ್ತೂರು ಲಾಂಗ್ ಮೊದಲಾದವುಗಳು.
ಕೃಷಿ
ಇದಕ್ಕೆ ಬೆಚ್ಚಗಿನ ಹವಾಗುಣ ಉತ್ತಮವಾಗಿರುತ್ತದೆ. ಆದರೆ ಸುಡು ಬಿಸಿಲು ಹಾಗೂ ತೀರಾ ಚಳಿಯ ವಾತಾವರಣ ಈ ಬೆಳೆಗೆ ಸರಿಹೊಂದುವುದಿಲ್ಲ. ಮುಂಗಾರಿನ ಬೆಳೆ ಜೂನ್-ಜುಲೈ ಹಾಗೂ ಬೇಸಗೆ ಬೆಳೆ ಜನವರಿ-ಫೆಬ್ರವರಿ ತಿಂಗಳಲ್ಲಿ ಮಾಡಿದರೆ ಇಳುವರಿ ಅಧಿಕ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಗೊಡ್ಡು ಮಣ್ಣು ಹಾಗೂ ರೇವೆಗೋಡು ಮಣ್ಣು ಹಾಗಲ ಕೃಷಿಗೆ ಉತ್ತಮ. ಕೆಂಪು ಮಣ್ಣಿನಲ್ಲೂ ಕೃಷಿ ಮಾಡಬಹುದು. ಹುಳಿ, ಕ್ಷಾರಯುತ ಮಣ್ಣು, ಜೌಗುಪೀಡಿತ ಮಣ್ಣು, ತಗ್ಗು ಪ್ರದೇಶ ಇದರ ಕೃಷಿಗೆ ಯೋಗ್ಯವಲ್ಲ. ಸುಮಾರು 3 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆ ಬರಲಾರದು. ಅದಕ್ಕಾಗಿ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ.
ಬೀಜ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಳದಿಯಾದಂತೆ ಅದು ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ
 ಹಾಗಲ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಅಗತ್ಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುಣಿಸಬೇಕು.

ಬೆಂಡೆ ಪುರಾಣ


ಇದೇನು ಬೆಂಡೆ ಪುರಾಣ ! ಎಂದು ಆಶ್ಚರ್ಯ ಪಡಬೇಡಿ. ನಾವು - ನೀವು ಹೆಚ್ಚಾಗಿ ಅಡುಗೆಗೆ ಬಳಸುವ ಬೆಂಡೆಕಾಯಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬೆಂಡೆಕಾಯಿಯನ್ನು ನೋಡಿದ ತತ್ಕ್ಷಣ ಮಹಿಳೆಯರ ಕೈ ಬೆರಳು ನೆನಪಿಗೆ ಬರುವವುದರಿಂದ ಬ್ರಿಟಿಷರು ಇದಕ್ಕೆ ‘ಲೇಡಿಸ್ ಫಿಂಗರ್’ ಎಂದು ಹೆಸರಿಟ್ಟಿದ್ದಾರೆ. ಸಸ್ಯ ಶಾಸ್ತ್ರದ ಪ್ರಕಾರ ಇದು ‘ಮಲ್ವೇಸಿ’ ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದೆ. ಇದು ದಕ್ಷಿಣ ಆಫ್ರಿಕಾ ಅಥವಾ ಏಷ್ಯಾ ಮೂಲದಿಂದ ಬಂದಿದೆ ಎನ್ನಲಾಗುತ್ತಿದೆ. ಸುಮಾರು 10 - 12ನೇ ಶತಮಾನಗಳಲ್ಲಿ ಅರಬ್ಬಿ ಜನಾಂಗದವರ ಸಂಚಾರದ ಮೂಲಕ ಮೆಡಿಟರೇನಿಯನ್ ರಾಷ್ಟ್ರಗಳಿಗೆ ಪಸರಿಸಿರಬೇಕು ಎಂದು ಪ್ರತೀತಿ. ಸುಮಾರು 16ನೇ ಶತಮಾನದ ಮೊದಲೇ ಇದು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿರಬೇಕು. ಆಫ್ರಿಕಾ, ಯುಎಸ್ಎ ಹಾಗೂ ಮೆಡಿಟರೇನಿಯನ್ ರಾಷ್ಟ್ರಗಳಲ್ಲಿ ಬೆಂಡೆ ‘ಓಕ್ರ’ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇದು ಉತ್ತರ ಆಫ್ರಿಕಾ ಖಂಡದ ಭಾಷ ವರ್ಗಕ್ಕೆ ಸೇರಿದ ಪದ. ಆ ಪ್ರದೇಶದ ಆದಿವಾಸಿಗಗಳು ತರಕಾರಿಯಾಗಿ ಇದನ್ನು ಬಳಸುತ್ತಿದ್ದರು.
ಪೌಷ್ಟಿಕಾಂಶ 
ಬೆಂಡೆಕಾಯಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ. ಆದರೆ ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮುಖ್ಯವಾಗಿ ಅದರಲ್ಲಿ ಪಿಷ್ಟ, ಸಾರಜನಕ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಮ್ಯಾಗ್ನೀಷಿಯಂ, ‘ಎ’ ಜೀವಸತ್ವ, ‘ಬಿ1’ ಜೀವಸತ್ವ, ‘ಬಿ2’ ಜೀವಸತ್ವ, ನಯಾಸಿನ್, ‘ಸಿ’ ಜೀವಸತ್ವ, ಪೊಟ್ಯಾಷಿಯಂ, ಆಕ್ಯಾಲಿಕ್ ಆಮ್ಲ,ಗಳಂತಹ ಪೌಷ್ಟಿಕಾಂಶಗಳಿವೆ.
ಔಷಧಿಯಾಗಿ ಬೆಂಡೆ
ಬೆಂಡೆ ಒಂದು ತಂಪು, ಪಿತ್ತ ಶಮನ ಹಾಗೂ ಉರಿಯನ್ನು ಕಡಿಮೆ ಮಾಡಬಲ್ಲ ಆಹಾರ. ಶೀತ, ಕೆಮ್ಮು ಇರುವವರು ಬೆಂಡೆಕಾಯಿಯೊಂದಿಗೆ ಶುಂಠಿ ಮತ್ತು ಮೆಣಸು ಸೇರಿಸಿ ಸೇವಿಸುವುದು ಉತ್ತಮ. ಬಲಿತ ಬೆಂಡೆಯನ್ನು ಎಸೆಯದೆ ತೊಳೆದು ಒಣಗಿಸಿಟ್ಟು, ದೊಸೆ ಹಿಟ್ಟಿನೊಂದಿಗೆ ಸೇರಿತಿರುವಿದರೆ ದೋಸೆ ಮೃದುವಾಗುವುದು. ಸ್ಥೂಲ ಕಾಯದವರಿಗೆ, ಮಧುಮೇಹಿಗಳಿಗೆ ಇದು ಉತ್ತಮ ತರಕಾರಿ. ಇದನ್ನು ತಿನ್ನುವುದರಿಂದ ಮಲವಿಸರ್ಜನೆ ಸುಲಭ. ಬೆಂಡೆಕಾಯಿಯಿಂದ ತಯಾರಿಸಿದ ಜ್ಯೂಸ್, ದಾಹವನ್ನು ಬಲುಬೇಗ ನಿವಾರಿಸುವುದು.
ಬೆಂಡೆ ಪದಾರ್ಥ
ಬೆಂಡೆಕಾಯಿಂದ ಹಲವಾರು ವಿಧವಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಪಲ್ಯ, ಸಂಬಾರು, ಬೆಂಡೆಗೊಜ್ಜು, ಬೆಂಡೆಕಾಯಿ ರಸಂ, ಬೆಂಡೆಕಾಯಿ ಸಾಸಿವೆ, ಬೆಂಡೆಕಾಯಿ ಫ್ರೈ, ಬೆಂಡೆ ಬಜೆ, ಬೆಂಡೆಕಾಯಿ ಬಾಳಕ, ಬೆಂಡೆ ಹುಳಿ ಇತ್ಯಾದಿ.
ಬೆಂಡೆ ಕೃಷಿ
ಬೆಂಡೆ ಕೃಷಿಗೆ ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಉತ್ತಮ. ಈ ಬೆಳೆಗೆ ಸರಿಯಾದ ಬಿಸಿಲು ಬೇಕು. ಇದು ಉಷ್ಣ ವಲಯದ ತರಕಾರಿ ಆದ್ದರಿಂದ ಕನಿಷ್ಟ 17 ಡಿಗ್ರಿ ಸೆ.ನಿಂದ 33 ಡಿಗ್ರಿ ಸೆ. ವರೆಗೆ ಉಷ್ಣತೆ ಇರುವ ಪ್ರದೇಶಗಳಲ್ಲಿ ಎಲ್ಲೆಡೆ ಬೆಳೆಯ ಬಹುದಾಗಿದೆ. ಬೆಂಡೆಯನ್ನು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದು. ಹೆಚ್ಚಾಗಿ ಜನವರಿ-ಫೆಬ್ರವರಿ ಹಾಗೂ ಜೂನ್-ಜುಲೈ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡಲಾಗುತ್ತದೆ.
ಕೊಯ್ಲು
ಬೆಂಡೆ ಗಿಡವಾಗಿ 40-45 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸಸಿ ಹೂ ಬಿಟ್ಟ ಅನಂತರ 3ರಿಂದ 7 ದಿನಗಳಲ್ಲಿ ಕಾಯಿಗಳು ಮೂಡುತ್ತವೆ. ನಾರಿಲ್ಲದ ಎಳೆಯ ಕಾಯಿಗಳನ್ನು 3-4 ದಿಗನಗಳಿಗೊಮ್ಮೆ ಕೊಯ್ಯಬಹುದು. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆಯ ಸಮಯ ಕೊಯ್ಲಿಗೆ ಸೂಕ್ತ. ಆಗಿಂದಾಗೆಗ್ಗೆ ಅನೇಕ ಬಾರಿ ಕೊಯ್ಲು ಮಾಡುವುದರಿ,ದ ಕಾಯಿಯ ಇಳುವರಿ ಹಾಗೂ ಗುಣಮಟ್ಟ ಹೆಚ್ಚುತ್ತದೆ. ಹಟ್ಟಿ ಗೊಬ್ಬರ ಅಥವಾ ಸಾವಯವ ಗೊಬ್ಬರಗಳನ್ನು ಬಲಸುವುದೇ ಉತ್ತಮ. ಇದರಿಂದ ಬಹುಕಾಲ ಕೊಯ್ಲುಲು ಸಾಧ್ಯ. ಇದಲ್ಲದೆ ಸುಡುಮಣ್ಣು ಅಥವಾ ಬೂದಿ, ಸೊಪ್ಪುನ್ನು ಗೊಬ್ಬರವಾಗಿ ಬಳಸಬಹುದು. ನೆಲಗಡಲೆ, ಕಹಿಬೇವಿನ ಹಿಂಡಿಯನ್ನು ನೀರಿನಲ್ಲಿ ನೆನೆಸಿ ಬೂದಿಯೊಂದಿಗೆ ಮಿಶ್ರಮಾಡಿ ಹಾಕಬಹುದು.
ರಕ್ಷಣೆ
ಕ್ರಿಮಿಕೀಟಗಳ, ರೋಗ ಬಾಧೆಗಳಿಂದ ಬೆಂಡೆ ಕೃಷಿಯನ್ನು ರಕ್ಷಿಸಲು ರಾಸಾಯನಿಕ ವಸ್ತುಗಳ ಸಿಂಪಡಣೆಗಿಂತ ಗೋಮೂತ್ರದ ಔಷಧವನ್ನು ತಯಾರಿಸಿ ಬಳಸಿದರೆ ಉತ್ತಮ.
 ಗೋಮೂತ್ರದ ಔಷಧ ತಯಾರಿ: ಒಂದು ಕೊಡ ನೀರಿಗೆ ಒಂದು ಕೇಜಿ ಹುಳಿ ಬೆಲ್ಲ, ಎರಡು ಲೀಟರ್ ಗೋಮೂತ್ರ ಮಿಶ್ರಮಾಡಿ ಒಂದು ದಿವಸ ಹಾಗೇ ಬಿಟ್ಟು ಮಾರನೇ ದಿನ ಗಿಡಗಳ ಮೇಲೆ, ಬುಡ ಹಾಗೂ ಸುತ್ತಲೂ ಸಿಂಪಡಿಸಬೇಕು. ತಿಂಗಳಲ್ಲಿ ಮೂರು ಬಾರಿ ಈ ರೀತಿ ಸಿಂಪಡಿಸುವುದರಿಂದ ಕೀಟ, ವಿವಿಧ ರೋಗಗಳಿಂದ ದೂರವಿರಬಹುದು.

ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ



ಕತ್ತಲಲ್ಲೇ ಅರಳಿ ಕತ್ತಲಲ್ಲೇ ಅಂತ್ಯಕಾಣುವ ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ. ಅರಳಿದ ಅಲ್ಪಕಾಲದಲ್ಲೇ ಸುವಾಸನೆ ಬೀರುತ್ತಾ, ತನ್ನ ಸೌಂದರ್ಯ ರಾಶಿಯಿಂದ ಕಣ್ಮನಸೂರೆಗೊಳ್ಳುವ ಈ ಹೂ ಅರಳುವದು ವರ್ಷಕ್ಕೊಮ್ಮೆ. ಅದರಂತೆ ಇದರ ಆಯಸ್ಸು ಕೂಡ ಕೆಲವೇ ಗಂಟೆಗಳು. ಕೇವಲ ಎಲೆಯಲ್ಲೇ ಹೂ ಬಿಟ್ಟು ಆಕರ್ಷಿಸುವ ಈ ಬ್ರಹ್ಮಕಮಲಕ್ಕೆ ಸರಿಸಾಟಿ ಹೂ ಮತ್ತೊಂದಿಲ್ಲ.