ಮಂಗಳವಾರ, ಮಾರ್ಚ್ 15, 2022

ಮಕ್ಕಳ ಚಿಂತನ ಶೀಲ ಗುಣ ವೃದ್ಧಿಸಿ

ಕ್ಕಳ ಚಿಂತನ ಶೀಲ ಮತ್ತು ಸೃಜನಾತ್ಮಕ ಗುಣವನ್ನು ವೃದ್ಧಿಸಲು ಪೂರಕ ಕ್ರಮಗಳನ್ನು ಶಿಕ್ಷಕರು, ಹೆತ್ತವರು ಕೈಗೊಳ್ಳಬೇಕು.

ಮಕ್ಕಳ ಮನಸ್ಸು ಹಸಿ ಮಣ್ಣು ಇದ್ದಂತೆ. ಕ್ಷಣಕ್ಕೆ ಅಂಟಿಕೊಳ್ಳುತ್ತದೆ. ಆದ್ದರಿಂದ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ನವೀನ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮತ್ತು ಅವುಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು.


ಚಿಂತನೆಗೆ ಅವಕಾಶ
ಚಿತ್ರಕಲೆಯು
ಮಕ್ಕಳು ಹೇಗೆ ಚಿಂತಿಸುತ್ತಾರೆ ಎಂಬುದಕ್ಕೆ ಪ್ರಮುಖವಾದ ಒಳನೋಟವನ್ನು ಒದಗಿಸುತ್ತದೆ. ಮಕ್ಕಳ ಚಿತ್ರಕಲೆಯನ್ನು ಸಂಭಾಷಣೆಗೆ ಆಧಾರವನ್ನಾಗಿ ಬಳಸಿಕೊಳ್ಳುವುದರಿಂದ ಅವರ ಚಿಂತನೆಯನ್ನು ವೃದ್ಧಿಸಿಕೊಳ್ಳಲು ಅವಕಾಶ ಲಭಿಸುತ್ತದೆ. ಹಾಗೇ ಚೆಸ್ಆಡುವುದು, ಸುಡೊಕು, ಪದಬಂಧ ತುಂಬಿಸುವುದು, ಜಾಣ್ಮೆಯ ಲೆಕ್ಕಗಳನ್ನು ಮಾಡುವುದು, ಗಣಿತದ ಸಮಸ್ಯೆಗಳನ್ನು ಬಗೆಹರಿಸುವುದು ಕೂಡ ಯೋಚನ ಲಹರಿಯನ್ನು ವಿಸ್ತರಿಸಲು ಅವಕಾಶ ಒದಗಿಸುತ್ತದೆ.
ಶಾಲಾ ಶೈಕ್ಷಣಿಕ ವ್ಯವಸ್ಥೆಯು ಸಾಮೂಹಿಕವಾಗಿ ಕಲಿಕಾ ವಿಧಾನಗಳನ್ನು ಅನುಸರಿಸುತ್ತದೆ. ಅದು ವ್ಯಕ್ತಿಗತವಾದ ಸಾಮರ್ಥ್ಯ ಮತ್ತು ಆಸಕ್ತಿಗಳ ಬಗ್ಗೆ ಮತ್ತು ಭಿನ್ನತೆಯ ಕಡೆಗೆ ಗಮನ ಹರಿಸುವುದಿಲ್ಲ. ಇಂದಿನ ವಿದ್ಯಾಭ್ಯಾಸದ ಪರಿಯು ಮುದ್ರಿತ ಜ್ಞಾನಭಂಡಾರವನ್ನು ಸ್ವಾಧೀನ ಪಡಿಸಿಕೊಳ್ಳವುದಕ್ಕೆ ಸೀಮಿತವಾಗಿದ್ದು, ವಿದ್ಯಾರ್ಥಿಯು ಹೊಂದಿರಬಹುದಾದ ನೋಡಿ, ಕೇಳಿ ಅಥವಾ ಅನುಭವದಿಂದ ಪಡೆದ ಜ್ಞಾನ ಅಥವಾ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ.
ಸ್ವತಂತ್ರವಾಗಿ ಆಲೋಚಿಸುವುದು, ಪ್ರಯೋಗಗಳನ್ನು ಮಾಡುವುದು, ಆತ್ಮವಿಶ್ವಾಸ, ಧನಾತ್ಮಕ ಚಿಂತನೆ ಮಕ್ಕಳನ್ನು ಸೃಜನಶೀಲ ವ್ಯಕ್ತಿಗಳಾಗುವತ್ತ ಮುನ್ನಡೆಸುತ್ತವೆ. ಸೃಜನಶೀಲ ಗುಣ ಮಕ್ಕಳ ಕೌಶಲ್ಯ ಮತ್ತು ಪ್ರತಿಭೆ ವ್ಯಕ್ತಪಡಿಸುತ್ತದೆ. ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಹೊಸವಸ್ತುಗಳ ತಯಾರಿ ಅಥವಾ ಸಂಶೋಧನೆಗೆ ಮುಂದಾಗುವಂತೆ ಹೆತ್ತವರು, ಶಿಕ್ಷಕರು ಪ್ರೋತ್ಸಾಹಿಸಬೇಕು ಮತ್ತು ಅವುಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕು.

ಕಲೆ, ವಿಜ್ಞಾನ-ತಂತ್ರಜ್ಞಾನ, ಗಣಿತ ಇತ್ಯಾದಿಗಳ ಬಗೆಗಿನ ಹೊಸ ಹೊಸ ಚಿಂತನೆ ಕಲ್ಪನೆಗಳನ್ನು ಹೊಂದಿರುವ ಸೃಜನಶೀಲ ವೀಡಿಯೋಗಳನ್ನು ಮಕ್ಕಳಿಗೆ ತೋರಿಸಿ ಸದ್ಬಳಕೆ ಮಾಡುವಂತೆ ಹುರಿದುಂಬಿಸಬೇಕು.

ಪ್ರವಾಸ ಹೋಗಿ
ಸುತ್ತಮುತ್ತಲಿನ ಸ್ಥಳ, ದೇಶ-ವಿದೇಶಗಳಿಗೆ ಪ್ರವಾಸ ತೆರಳುವುದು ಕೂಡ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಅರಿವಿನ ವಿಸ್ತಾರಕ್ಕೆ  ಸಹಾಯಕಾರಿ. ಸಮಾನಮನಸ್ಕ ಗೆಳೆಯರ ಜತೆಗೋ ಅಥವಾ ಕುಟುಂಬದ ಜತೆಗೋ ಪ್ರವಾಸ ಹೋಗುವುದರಿಂದ ಮನಸ್ಸು ರಿಲ್ಯಾಕ್ಸ್  ಆಗುವುದರ ಜತೆಗೆ ಹೊರಜಗತ್ತನ್ನು ನೋಡುವ ಅವಕಾಶ ದೊರೆತು ಹೊಸ ಚಿಂತನೆಗಳು ಮೂಡುತ್ತವೆ. ಹಾಗೇ ಅಧ್ಯಯನ ಪ್ರವಾಸ ಕೈಗೊಳ್ಳುವುದರಿಂದ ಕೂಡ ವಿಶೇಷ ಮಾಹಿತಿ ಲಭಿಸುತ್ತದೆ ಮತ್ತು ಯೋಚನೆಗಳು ಹೊಳೆಯುತ್ತವೆ. ವಿಜ್ಞಾನ ಮೇಳ, ಆಸಕ್ತಿಗೆ ಪೂರಕವಾದ ವಸ್ತು ಪ್ರದರ್ಶನ, ಚರ್ಚಾ ಸ್ಪರ್ಧೆ, ಸಂವಾದಗಳಲ್ಲಿ ಭಾಗವಹಿಸುವುದು ಕೂಡ ಬುದ್ಧಿಯನ್ನು ಒರೆಗೆ ಹಚ್ಚಲು ಸಹಕಾರಿ.

ಸೃಜನಶೀಲ ಗುಣ
ವಿಭಿನ್ನ ಮತ್ತು ನವೀನ ಚಿಂತನೆಯನ್ನು ಸೃಜನಶೀಲ ಗುಣ ಎನ್ನುವರು. ಕೇವಲ ಪಠ್ಯ ಪುಸ್ತಕದ ಅಧ್ಯಯನದಿಂದ ಮಕ್ಕಳು ಇದನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸಂಶೋಧನೆ, ಪ್ರಯೋಗಾತ್ಮಕ ಮನಸ್ಸು ಹೊಂದುವುದು ಅಗತ್ಯ. ಬುದ್ಧಿವಂತಿಕೆ, ಪ್ರತಿಭೆ, ಕೌಶಲ್ಯಗಳನ್ನು ಬಳಸಿ ಹೊಸತನವನ್ನು ಸೃಷ್ಟಿಸುವುದೇ ಸೃಜನಶೀಲ ಗುಣ.


ಮಂಗಳವಾರ, ಫೆಬ್ರವರಿ 1, 2022

ಪ್ರತಿಕ್ಷಣವೂ ಅತ್ಯಮೂಲ್ಯ; ಸದ್ಬಳಕೆ ಅಗತ್ಯ

ಓರ್ವ ವ್ಯಕ್ತಿಗೆ ಪ್ರತಿ ದಿನದ ಸಮಯ ಕಳೆಯುವುದೆ ಬಳ ಬೇಸರದ ಸಂಗತಿಯಾಗಿತ್ತು. ಆತನಿಗೆ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಬಗ್ಗೆ ಆಸಕ್ತಿಯೇ ಇರಲಿಲ್ಲ. ಅವನಿಗೆ ಪ್ರತಿದಿನವೂ ಬಹುದೀರ್ಘವಿದ್ದಂತೆ ಭಾಸವಾಗುತ್ತಿತ್ತು. ಯಾವಾಗಲೂ ಕಚೇರಿಗೆ ಹಾಜರಾಗುವುದು, ಸುಮ್ಮನೆ ಕುಳಿತುಕೊಂಡು ಇತರರಿಂದ ಗೌರವವನ್ನು ಸ್ವೀಕರಿಸುವುದು. ಇಂತಹ ರೂಢಿಯ ಕೆಲಸಗಳಿಂದ ಆತನಿಗೆ ಜುಗುಪ್ಸೆ ಉಂಟಾಗಲಾರಂಭಿಸಿತ್ತು. ಇದರಿಂದ ಬೇಸತ್ತ ಆತ ಝೆನ್ ಗುರು ಟಾಕುಅನ್ ಬಳಿ ಪ್ರತಿದಿನದ ಸಮಯವನ್ನು ಹೇಗೆ ಕಳೆಯಬಹುದು ಎಂದು ಸಲಹೆಯನ್ನು ಪಡೆಯಲು ಬಂದನು.

ಅವನ ಸಮಸ್ಯೆಯನ್ನು ಕೇಳಿ ಝೆನ್ ಗುರುಗಳು ಒಂದು ಕಾಗದವನ್ನು ತೆಗೆದು ಎಂಟು ಚೀನಿ ಅಕ್ಷರಗಳನ್ನು ಬರೆದು ಕೊಟ್ಟರು. ಅದರ ಅರ್ಥ ` ದಿನ ಮತ್ತೊಮ್ಮೆ ಬರುವುದಿಲ್ಲ. ಪ್ರತಿ ನಿಮಿಷವೂ ಅಮೂಲ್ಯವಾದ ರತ್ನಕ್ಕೆ ಸಮಾನ'ಎಂದು. ಆದ್ದರಿಂದ ಪ್ರತಿದಿನವನ್ನು ಹೊಸತು ಎಂದು ಭಾವಿಸಿ ನವೊಲ್ಲಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ದಿನದ ಬಗ್ಗೆ ಹಳಿಯುತ್ತಾ, ಕೆಲಸದ ಮೇಲೆ ನಿರಾಸಕ್ತಿ ವಹಿಸಿದರೆ. ನಮ್ಮ ಜೀವನದ ಅಮೂಲ್ಯವಾದ ರತ್ನಗಳನ್ನು ನಾವೇ ಕೈಯಾರೆ ಕಳೆದುಕೊಂಡಂತಾಗುತ್ತದೆ.

ಪ್ರತಿಕ್ಷಣವೂ ಅತ್ಯಮೂಲ್ಯ. ಅವುಗಳ ಸದ್ಬಳಕೆ ಬಗ್ಗೆ ಯೋಚಿಸುವುದು ಅತೀ ಅಗತ್ಯ.

ಸಮಯ ಮತ್ತು ಸಮುದ್ರದ ಅಲೆ ಎಂದೂ ಯಾರಿಗೂ ಕಾಯುವುದಿಲ್ಲ. ಹಾಗಾಗಿ ಸಮಯದ ಮೌಲ್ಯವನ್ನು ಅರಿತು ಜೀವನದಲ್ಲಿ ಮುಂದೆ ಸಾಗಬೇಕು.

`ಏಳಿ, ಎದ್ದೇಳಿ, ಗುರಿ ತಲುಪುವ ತನಕ ನಿಲ್ಲದಿರಿ' ಎಂಬ ಸ್ವಾಮಿ ವಿವೇಕಾನಂದರ ಮಾತಿನ ಸಾರವನ್ನು ಅರಿತುಕೊಂಡು, ಯುವ ಜನರು ತಮ್ಮ ಜೀವನದಲ್ಲಿ ಗುರಿ ತಲುಪುವವರೆಗೂ ಸತತ ಪ್ರಯತ್ನ ಮತ್ತು ಪರಿಶ್ರಮ ಮುಂದುವರಿಸಬೇಕು.

ಸಮಯ ಎಂಬುದು ನಿಂತ ನೀರಲ್ಲ. ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ  ಕಾಯುವುದಿಲ್ಲ. ಕಳೆದು ಹೋದ ಸಮಯ  ಮತ್ತೆಂದಿಗೂ ನಮ್ಮ ಜೀವನದಲ್ಲಿ  ಮರಳಿ ಬರುವುದಿಲ್ಲ. ಆದ್ದರಿಂದ  ಸಮಯ ಪ್ರಜ್ಞೆ ಇರದೇ ಹೋದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಸಮಯವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಅದರಿಂದಾಗುವ ಹಾನಿ, ಹಿಂಸೆ, ಆತಂಕ, ಮುಜುಗರ, ನೋವು  ಸಹಿಸುವುದು ಕಷ್ಟ ಸಾಧ್ಯ.

ಐದು ನಿಮಿಷದ ಮಹತ್ವ  ರೈಲು, ವಿಮಾನ  ತಪ್ಪಿಸಿಕೊಂಡವರಿಗೆ ಗೊತ್ತಿರುತ್ತದೆ. ಒಂದು ವರ್ಷದ ಮಹತ್ವ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗೆ ತಿಳಿದಿರುತ್ತದೆ. ಹಣ ಕಳೆದುಕೊಂಡರೆ ಮತ್ತೆ ಪಡೆಯಬಹುದು. ಸಮಯ ಕಳೆದು ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ.  ನಾವು ಜೀವನದಲ್ಲಿ ಯಾರಿಂದಲೂ ಕಲಿಯಲಾರದ್ದನ್ನು ಸಮಯ-ಸಂದರ್ಭ ಕಲಿಸುತ್ತದೆ.

ಮಂಗಳವಾರ, ಜುಲೈ 6, 2021

ಡಿಜಿಟಲ್ ಶಿಕ್ಷಣ: ತಂತ್ರಜ್ಞಾನ ಸದ್ಬಳಕೆಯಿಂದ ಶೈಕ್ಷಣಿಕ ಕ್ರಾಂತಿ

ಬದಲಾವಣೆ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿದ್ದು, ಅದಕ್ಕೆ ಶಿಕ್ಷಣ ವ್ಯವಸ್ಥೆಯೂ ಹೊರತಾಗಿಲ್ಲ. 

ಜಗತ್ತಿನಲ್ಲಿ ಆಧುನಿಕ ಶಿಕ್ಷಣ ಎಲ್ಲೆಡೆ ವ್ಯಾಪಿಸಿದ್ದು, ತಂತ್ರಜ್ಞಾನ ದಿನೇ ದಿನೇ ಹೊಸ ಹೊಸ ರೂಪದಲ್ಲಿ ಕಲಿಕೆಯ ಆಯಾಮಗಳನ್ನು ವಿಸ್ತರಿಸುತ್ತಿದೆ. 

ಇಂದಿನ  ತಂತ್ರಜ್ಞಾನ  ಸರಿಯಾಗಿ ಉಪಯೋಗಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಾಧ್ಯ. ಗಣಕಾಧಾರಿತ ಶಿಕ್ಷಣದಿಂದ ಪ್ರತಿ ವಿದ್ಯಾರ್ಥಿಯೂ ಕಲಿಕೆಯ ವೇಗವನ್ನು ಹೆಚ್ಚಿಸಿಕೊಳ್ಳಬಹುದು. 

ಕೌಶಲ ಅಳವಡಿಕೆಗೆ ಆದ್ಯತೆ

ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮಕ್ಕಳು ಸೃಜನಶೀಲ ಮತ್ತು ಚಿಂತನಾ ಕೌಶಲಗಳನ್ನು ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಿವೆ. ಇದಕ್ಕಾಗಿ ಡಿಜಿಟಲ್ ಶಿಕ್ಷಣ ವ್ಯವಸ್ಥೆ, ಸ್ಮಾರ್ಟ್ ತರಗತಿಗಳನ್ನು ಪರಿಚಯಿಸುವುದರೊಂದಿಗೆ ಶಿಕ್ಷಣ ಕೇವಲ ಒಂದು ಅಭ್ಯಾಸವಾಗದೆ ಅನುಭವವಾಗಲು ಹಲವಾರು ಪ್ರಯೋಗಗಳನ್ನು ನಡೆಸುತ್ತಿವೆ.

ಉತ್ಪಾದಕತೆ ಹೆಚ್ಚಳ

ಶಿಕ್ಷಣದಲ್ಲಿ ಅಂತರ್ಜಾಲವನ್ನು ಬಳಸುವುದರಿಂದ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಹೇರಳವಾಗಿ ದೊರೆಯುತ್ತವೆ ಮತ್ತು ಇತರ ತಂತ್ರಗಳ ಬಳಕೆಯಿಂದ ಕಲಿಕೆಯ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಅಲ್ಲದೆ ಮಕ್ಕಳು ಚಿಂತಿಸುವ, ಗ್ರಹಿಸುವ ಮತ್ತು ಕಾರ್ಯನಿರ್ವಹಿಸುವ ರೀತಿಯಲ್ಲಿ ಅಪಾರ ಬದಲಾವಣೆ ಸಾಧ್ಯ.

ಇ-ಲರ್ನಿಂಗ್

ಇಂದು ಇಂಟರ್ನೆಟ್, ಸ್ಮಾರ್ಟ್ ಫೋನ್, ವೆಬ್‍ಸೈಟ್, ಬ್ಲಾಗ್, ಆ್ಯಪ್‍ಗಳ ಬಳಕೆ ಹೆಚ್ಚಿದ್ದು, ಇ-ಲರ್ನಿಂಗ್‍ನತ್ತ ಮಕ್ಕಳು ಬಹಳಷ್ಟು ಆಕರ್ಷಿತರಾಗುತ್ತಿದ್ದಾರೆ. ಇಂದು ಇ-ಲರ್ನಿಂಗ್‍ಗೆ ಹೆಚ್ಚು ಪ್ರಾಮುಖ್ಯ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗುತ್ತಿವೆ. ಅದಕ್ಕಾಗಿಯೇ ಶಾಲಾ-ಕಾಲೇಜುಗಳು ಆ್ಯಪ್ ಮೂಲಕ ವಿದ್ಯಾರ್ಥಿಗಳೊಡನೆ ಸಂವಹನ ನಡೆಸುತ್ತಿವೆ. 

ಇ-ಲರ್ನಿಂಗ್ ವಿದ್ಯಾರ್ಥಿಗಳಿಗೆ ಯಾವುದೇ ಸಮಯ ಮತ್ತು ಯಾವುದೇ ಸ್ಥಳದಲ್ಲಿ ಬೇಕಾದರೂ ಕೂತು ಕಲಿಯುವಂತಹ ಅವಕಾಶವನ್ನು ಒದಗಿಸುತ್ತದೆ. ಆನ್‍ಲೈನ್‍ನಲ್ಲಿ ಬೋಧಕ ವರ್ಗದ ಸೀಮಾತೀತ ಸಂಪರ್ಕ ಸಾಧ್ಯವಿದೆ. ಇ-ಲರ್ನಿಂಗ್‍ನಲ್ಲಿ ಕಲಿಕೆ ಪ್ರಗತಿಗೆ ವ್ಯವಸ್ಥಿತ ವಿಧಾನ, ಶಿಕ್ಷಣ ವೆಚ್ಚ ಖಡಿಮೆ, ಕೋರ್ಸ್ ವಿಷಯಗಳ ಗುಣಮಟ್ಟಕ್ಕೆ ಮಾನದಂಡ ಮೊದಲಾದ ಸೌಲಭ್ಯಗಳಿವೆ. 

ಮುಖ್ಯವಾಗಿ ಇ-ಲರ್ನಿಂಗ್ ತಂತ್ರಜ್ಞಾನ, ಹಣಕಾಸು, ಎಂಜಿನಿಯರಿಂಗ್, ಬ್ಯಾಂಕಿಂಗ್, ಮ್ಯಾನೇಜ್‍ಮೆಂಟ್ ಮೊದಲಾದ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದೆ. ಹಾಗಾಗಿಯೇ ಇಂದು ಮಕ್ಕಳು ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಅಳವಡಿಕೆ ವಿಷಯಕ್ಕೆ ಬಂದಾಗ ಹೆತ್ತವರು  ಮತ್ತು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. 

ಅತ್ಯಂತ ಹೆಚ್ಚಿನ ಮಾಹಿತಿದಾರನಾಗಿ ಇಂದು ಇಂಟರ್ನೆಟ್ ಸರ್ಚ್ ಇಂಜಿನ್ ಕಾರ್ಯನಿರ್ವಹಿಸುತ್ತಿದೆ.  ಮೈಕ್ರೊಫೋನ್, ಪ್ರೊಜೆಕ್ಟರ್ ಗಳು,  ಪವರ್ಪಾಯಿಂಟ್ ಪ್ರೆಸೆಂಟೇಷನ್‍ಗಳು ಸಂವಹನವನ್ನು ಪರಿಣಾಮಕಾರಿಯನ್ನಾಗಿಸಲು ಸಹಕರಿಸುತ್ತವೆ.

ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ಗಮನ, ಸ್ಮರಣೆ, ಕಲಿಕೆ, ಪುನರಾವರ್ತನೆ, ಮುಂತಾದ ಸಾಮರ್ಥ್ಯ ಹೆಚ್ಚಿರುತ್ತದೆ. ಆಗ ತಂತ್ರಜ್ಞಾನದ ಕಲಿಕೆ ಸುಲಭ ಸಾಧ್ಯ. ಹಾಗಾಗಿ ಅವರು ತಂತ್ರಜ್ಞಾನ ಉಪಕರಣಗಳ ಕಡೆಗೆ ಆಕರ್ಷಿತರಾಗುತ್ತಾರೆ. ಇದು ಅವರ ಜ್ಞಾನ ಸಂಪತ್ತು ವೃದ್ಧಿಗೆ ಪ್ರಯೋಜನಕಾರಿ. ಅಲ್ಲದೆ ಮಕ್ಕಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಾಗೂ ತಮಗೆ ಬೇಕಾದ ಅಂಶವನ್ನು ಅವರು ಪಡೆಯಲು ತಂತ್ರಜ್ಞಾನ ನೆರವು ನೀಡುತ್ತದೆ. 

ಕಲಿಕೆಯ ಆಸಕ್ತಿ ಹೆಚ್ಚಿಸುತ್ತದೆ

ಡಿಜಿಟಲೈಸ್ಡ್ ಬೋರ್ಡ್‍ಗಳ ಬಳಕೆ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತವೆ. ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವುದು, ಶಿಕ್ಷಣದ ಗುಣಮಟ್ಟ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೂ ಆಧುನಿಕ ತಂತ್ರಜ್ಞಾನ ಬಳಸುವುದು ಉತ್ತಮ. 

ಪರೀಕ್ಷೆ, ಮೌಲ್ಯಮಾಪನ ಆನ್‍ಲೈನ್ ಮುಖಾಂತರ ನಡೆಸುವುದು ಹೆಚ್ಚು ಪರಿಣಾಮಕಾರಿ. ಹೇಗೆಂದರೆ ಇಲ್ಲಿ ನಕಲು ಮಾಡುವುದನ್ನು ತಡೆಯಬಹುದು. ಅಲ್ಲದೆ ಸಾಕಷ್ಟು ಸಮಯ ಮತ್ತು ಶ್ರಮ ಉಳಿಯುವುದು. 

ವಿದ್ಯಾರ್ಥಿಗಳು ಇಂದು ಗ್ರೂಪ್ ಸ್ಟಡಿಯನ್ನು ಹೆಚ್ಚಾಗಿ ಅವಲಂಭಿಸುತ್ತಿದ್ದು, ಅದಕ್ಕೆ ವಾಟ್ಸ್ಆ್ಯಪ್, ಫೇಸ್‍ಬುಕ್‍ಗಳಂತಹ ಸಾಮಾಜಿಕ ಜಾಲತಾಣಗಳು, ವೀಡಿಯೋ ಕಾನ್ಫ್ ರೆನ್ಸ್ ಬಹಳಷ್ಟು ಸಹಕಾರಿಯಾಗಿವೆ.

ಯಾವ ರೀತಿಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು, ಸದ್ಬಳಕೆ ಮಾಡಬೇಕು ಎನ್ನುವ ಬಗ್ಗೆ ಹೆತ್ತವರು ಹಾಗೂ ಶಿಕ್ಷಕರು ಮಕ್ಕಳಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು.

ಡಿಜಿಟಲ್ ಶಿಕ್ಷಣ ಅನಿವಾರ್ಯ

ಇಡೀ ಜಗತ್ತೇ ಇಂದು ಡಿಜಿಟಲ್ ವ್ಯವಸ್ಥೆಗೆ ತನ್ನನ್ನು ತೆರೆದುಕೊಂಡಿರುವುದರಿಂದ ಶಿಕ್ಷಣ ಕ್ಷೇತ್ರವು ಅದಕ್ಕೆ ತಕ್ಕಂತೆ ಅದಕ್ಕೆ ಅಪ್‍ಡೇಟ್ ಆಗುವುದು ಅನಿವಾರ್ಯ. ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿಸಲು ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಅನುಷ್ಠಾನ ಅತೀ ಅಗತ್ಯ. ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದ ಸಾಮರ್ಥ್ಯವನ್ನು ಇನ್ನಷ್ಟು ಪರಿಪೂರ್ಣವಾಗಿ ಬಳಸಬೇಕಿದೆ. 

ಕೋವಿಡ್ -19 ವಕ್ಕರಿಸಿದ ಪರಿಣಾಮ ಇಂದು ಅನಿವಾರ್ಯವಾಗಿ ಶೈಕ್ಷಣಿಕ ಕ್ಷೇತ್ರ ಪೂರ್ಣಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಅವಲಂಭಿಸುವಂತಾಗಿದೆ. ಆದರೆ ನಮ್ಮಂತಹ ದೇಶಗಳಲ್ಲಿ ನೆಟ್ವರ್ಕ್ ವ್ಯವಸ್ಥೆ, ತಂತ್ರಜ್ಞಾನದ ಅಳವಡಿಕೆ, ಬಳಕೆ ಹಾಗೂ ತರಗತಿ ಪಠ್ಯ ಕ್ರಮಗಳಿಗೆ ಪೂರಕವಾಗುವ ರೀತಿಯ ತಂತ್ರಾಂಶಗಳ ಅಭಿವೃದ್ಧಿ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ಆದ್ದರಿಂದ ಇವುಗಳ ಬಗ್ಗೆ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.

*ಗಣೇಶ ಕುಳಮರ್ವ


ಭಾನುವಾರ, ಅಕ್ಟೋಬರ್ 14, 2012

ತೆಂಗಿನ ಕಾಯಿ ಕೊಯ್ಯುವ ರೊಬೋಟ್!


ಮರವೇರಲು ಬಾರದವರು ಕೂಡ ಮರಹತ್ತಿ ತೆಂಗಿನ ಕಾಯಿ, ಅಡಿಕೆ ಕೀಳುತ್ತಾರೆ. ತೆಂಗು, ಅಡಿಕೆ ತೋಟಗಳಿಗೆ ಔಷ ಸಿಂಪಡಿಸುತ್ತಾರೆ. ಇದು ಸಾಧ್ಯವಾಗುವಂತಹ ಯಂತ್ರಗಳು ಈ ಹಿಂದೆಯೇ ಬಂದಿವೆ. ತೆಂಗಿನ ಕಾಯಿ ಕೀಳಲು ಕೆಲವು ಕಡೆ ಕೋತಿಗಳನ್ನೂ ಬಳಸುತ್ತಾರೆ. ಆದರೆ ಮರ ಹತ್ತುವ 'ರೊಬೋಟ್' ಕುರಿತು ಕೇಳಿದ್ದೀರಾ? ಕೇರಳದ ಕಲ್ಲಿಕೋಟೆಯ ಕೃಷಿಕ ಹಾಗೂ ವಿಜ್ಞಾನಿ ನಿವೃತ್ತ ಸೇಲ್ ಟ್ಯಾಕ್ಸ್ ಆಫೀಸರ್ ಪ್ರಕಾಶನ್ ತಟ್ಟಾರಿ ಸ್ವಂತ ಪರಿಶ್ರಮದಿಂದ ಇಂತಹ ಯಂತ್ರವನ್ನು ಸಿದ್ಧಪಡಿಸಿದ್ದಾರೆ. 'ತೆಂಗಿನ ಮರ ಏರುವ ರೊಬೋಟ್' ಎಂದು ಅವರೇ ಇದಕ್ಕೆ ನಾಮಕರಣ ಮಾಡಿದ್ದಾರೆ.
ನಬಾರ್ಡ್ನ ನೆರವಿನೊಂದಿಗೆ ಕಾಸರಗೋಡಿನ ಸಿಪಿಸಿಆರ್ಐಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಇದರ ಪ್ರಾತ್ಯಕ್ಷಿಕೆ ನಡೆಯಿತು. ಮಾನವ ತೆಂಗಿನ ಮರವೇರಿ ಮಾಡುವ ಎಲ್ಲ ಕೆಲಸಗಳನ್ನೂ ಈ 'ರೊಬೋಟ್' ನಿರ್ವಹಿಸುತ್ತದೆ. ದೂರದಿಂದ ನೋಡಿದರೆ ಬೃಹತ್ ಗಾತ್ರದ ಕಡ್ಡಿ ಹುಳದಂತೆ ಭಾಸವಾಗುತ್ತದೆ.
ರಿಮೋಟ್ ಬಳಕೆ 
ರಿಮೋಟ್ ಮೂಲಕ ರೊಬೋಟ್ ಅನ್ನು ನಿಯಂತ್ರಿಸಲಾಗುತ್ತದೆ. ರೀಚಾರ್ಜ್ ಮಾಡಬಹುದಾದ ಬ್ಯಾಟರಿಯಿಂದ ಚಲಿಸುವ ಸಣ್ಣ ಮೋಟಾರ್ನ ಸಹಾಯದಿಂದ ಇದು ಕಾರ್ಯ ನಿರ್ವಹಿಸುತ್ತದೆ. ಕಬ್ಬಿಣದ ಪೈಪುಗಳೆರಡನ್ನು ಒಂದರೊಳಗೊಂದಿರಿಸಿ, ಸ್ಪ್ರಿಂಗ್ ಆ್ಯಕ್ಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಪೈಪಿನ ಮೇಲ್ತುದಿಗೆ ಜೋಡಿಸಿರುವ ತಟ್ಟೆಯಾಕಾರದ ಬ್ಲೇಡ್ ತೆಂಗಿನ ಕಾಯಿ, ತೆಂಗಿನ ಗರಿಗಳನ್ನು ಕೊಯ್ಯುತ್ತದೆ. ಇದಕ್ಕೆ ಒಮ್ಮೆಗೇ ನಾಲ್ಕು ಬ್ಲೇಡ್ಗಳನ್ನು ಜೋಡಿಸಲು ಸಾಧ್ಯವಿದೆ. ರಿಮೋಟ್ ಕಂಟ್ರೋಲ್ನ ಒಂದು ಬಟನ್ ಅದುಮಿ ನಮಗೆ ಬೇಕಾದ ಕಾಯಿಯನ್ನೇ ಅಥವಾ ತೆಂಗಿನ ಗೊನೆಯೇ ಬೇಕಿದ್ದರೆ ಗೊನೆಯನ್ನೂ ಕೊಯ್ಯಬಹುದು. ಸುಮಾರು 80 ಕಿಲೋ ಭಾರವಿರುವ ಈ ರೊಬೋಟ್ಗೆ 25 ಅಡಿ ಎತ್ತರದ ತೆಂಗಿನ ಮರವನ್ನೇರಲು 40 ಸೆಕೆಂಡ್ ಸಾಕು. ಇದರ ತಯಾರಿಗೆ ರೂ. 15 ಸಾವಿರ ವೆಚ್ಚ ತಗುಲುತ್ತದೆ.
ತಟ್ಟಾರಿ ಸಾಧನೆ 
ತೆಂಗಿನ ಮರವನ್ನೇರುವ ವ್ಯಕ್ತಿಯಂತೆ ಮರವನ್ನು ಎರಡು ಕೈ ಮತ್ತು ಕಾಲುಗಳಿಂದ ಹಿಡಿದು ನೆಗೆಯುತ್ತಾ ಮರವೇರುವ ರೊಬೋಟ್ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತದೆ. ಯಂತ್ರದ ಕೈ, ಕಾಲುಗಳಿಗೆ ಹಿಗ್ಗುವ ಮತ್ತು ಕುಗ್ಗುವ ಗುಣವಿದೆೆ. ಇದರಿಂದ ಮರ ದಪ್ಪ ಅಥವಾ ತೆಳ್ಳಗಿದ್ದರೂ, ಎಷ್ಟೇ ಅಂಕು - ಡೊಂಕಾಗಿದ್ದರೂ ರೊಬೋಟ್ ಸಲೀಸಾಗಿ ಹತ್ತುತ್ತದೆ.
 ಇಂತಹ ರೊಬೋಟ್ ಒಂದನ್ನು ಕಂಡುಹಿಡಿದಿರುವುದು ಇದೇ ಮೊದಲು. ಇದು ಕೃಷಿ ಕ್ಷೇತ್ರದಲ್ಲಿ ಪ್ರಕಾಶನ್ ತಟ್ಟಾರಿ ಮಾಡಿದ ಮಹತ್ತರ ಸಾಧನೆ. ಆದರೆ ಇದಿನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದು ತಟ್ಟಾರಿ ಬಯಕೆ. ಸಾಮಾನ್ಯ ರೈತರಿಗೆ ರೊಬೋಟ್ ಬೆಲೆ ಸ್ವಲ್ಪ ದುಬಾರಿ ಎನಿಸಬಹುದು. ಆದರೆ ಕಾರ್ಖಾನೆಗಳ ಮೂಲಕ ಬೃಹತ್ ಮಟ್ಟದಲ್ಲಿ ಇವುಗಳ ಉತ್ಪಾದನೆ ಆರಂಭವಾದರೆ ಬೆಲೆ ಕಡಿಮೆಯಾಗುತ್ತದೆ. 'ಈಗ ಕೇವಲ ಒಂದು ಯಂತ್ರವನ್ನು ಮಾತ್ರ ತಯಾರಿಸಲಾಗಿದೆ. ಇದರ ಕಾರ್ಯ ವೈಖರಿಯ ಕುರಿತು ಕೃಷಿಕರಿಗೆ ತಿಳಿಸಿ, ಅವರಿಂದ ಯಂತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ವಿವಿಧೆಡೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ' ಎನ್ನುತ್ತಾರೆ ತಟ್ಟಾರಿ.
ರೈತರಿಗೆ ಸಂತಸ
ಇಲ್ಲಿ ಮನುಷ್ಯರು ಮರವೇರದೆ ಕೇವಲ ಯಂತ್ರವೊಂದು ಮರವೇರಿ ತೆಂಗಿನ ಕಾಯಿ ಕೊಯ್ಯುವುದು ವಿಶೇಷ. ತೆಂಗಿನ ಮರವೇರುವ ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿರುವ ರೈತರ ಪಾಲಿಗೆ ಇದು ಸಂತೋಷದ ಸಂಗತಿ. ಅಲ್ಲದೆ ಅಡಿಕೆ, ತೆಂಗಿನ ಕಾಯಿ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವುದರಿಂದ ಮಧ್ಯಮ ವರ್ಗದ ಕೃಷಿಕರು ಕೂಡ ಇಂತಹ ಯಂತ್ರಗಳನ್ನು ಕೊಳ್ಳಲು ಮನಸ್ಸು ಮಾಡಬಹುದೇನೋ.

ಮೊದಲು ವಂದಿಪೆ ನಿನಗೆ ಗಣನಾಥ...


ವಿಘ್ನನಿವಾರಕ, ಸಿದ್ಧಿವಿನಾಯಕ, ಮೂಷಿಕ ವಾಹನ, ಲಂಬೋದರ, ವ್ನಿೇಶ, ಏಕದಂತ, ವಕ್ರತುಂಡ, ಗಣರಾಜ, ಗಣೇಶ, ಮೊದಕಪ್ರಿಯ ಎಂದೆಲ್ಲಾ ಕರೆಸಿಕೊಳ್ಳುವ ಗಣಪತಿಯ ಹಬ್ಬ ಬಂದೇ ಬಿಡ್ತು. ಪ್ರತಿ ವರ್ಷ ಭಾದ್ರಪದ ಶುಕ್ಲದ ಚೌತಿಯಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
ಮೊದಲು ವಂದಿಪೆ ನಿನಗೆ ಗಣನಾಥ’ ಎಂಬಂತೆ ಯಾವುದೇ ಕೆಲಸ-ಕಾರ್ಯ, ಶುಭ ಕಾರ್ಯಗಾಳಾಗಿರಲಿ ಪ್ರಾರಂಭಿಸುವ ಮೊದಲು ಗಣಪತಿಯನ್ನು ಸ್ಮರಿಸುವುದು ನಮ್ಮ ಸಂಪ್ರದಾಯ. ಮೊದಲು ಗಜವದನನ ಪೂಜೆ ಮಾಡದಿದ್ದರೆ ಅನ್ಯ ದೇವತೆಗಳಿಗೆ ಮಾಡಿದ ಪೂಜೆಯೂ ಸಫಲಿಸುವುದಿಲ್ಲ ಎಂಬ ನಂಬಿಕೆಯಿದೆ. ಹೆಚ್ಚಿನ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿಯೂ ಮೊದಲಿಗೆ ಸ್ವಸ್ತಿಕವಿಟ್ಟು ಗಣಪನನ್ನು ಸ್ಮರಿಸುತ್ತಾರೆ.
ಗಣಪತಿಯ ಜನನದ ಬಗ್ಗೆ ಕತೆಯೊಂದರಲ್ಲಿ ಇಂತಿದೆ. ಪಾರ್ವತಿಯು ಒಂದು ದಿನ ಸ್ನಾನಕ್ಕೆಂದು ಹೊರಟಾಗ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ತನ್ನ ಮೈಯಲ್ಲಿನ ಮಣ್ಣನೇ ತೆಗೆದು ಅದರಿಂದ ಗಣಪತಿಯನ್ನು ಸೃಷ್ಟಿಸಿ ಮನೆ ಕಾವಲಿಗೆ ನಿಲ್ಲಿಸಿದಳು ಎಂಬ ಉಲ್ಲೇಖವಿದೆ. ಗಣಪತಿ ಮನೆ ಕಾಯುತ್ತಿರುವಾಗ ಅಲ್ಲಿಗೆ ಪರಶಿವ ಮತ್ತು ಆತನ ಗಣಗಳು ಬರುತ್ತಾರೆ. ಗಣಪತಿಯು ಮನೆ ಪ್ರವೇಶಿಸದಂತೆ ಅವರನ್ನು ತಡೆಯುತ್ತಾನೆ. ಇದರಿಂದ ಕೋಪಗೊಂಡ ಈಶ್ವರನು ಗಣಪತಿಯ ತಲೆಯನ್ನು ತನ್ನ ತ್ರಿಶೂಲದದಿಂದ ತಿವಿದು ಎಸೆಯುವನು. ಆ ಸಂದರ್ಭದಲ್ಲಿ ಸ್ನಾನಕ್ಕೆಂದು ಹೋದ ಪಾರ್ವತಿ ದೇವಿಯ ಆಗಮನವಾಗುವುದು. ರುಂಡ-ಮುಂಡ ಬೇರ್ಪಟ್ಟು ಬಿದ್ದಿರುವ ಮಗನನ್ನು ಕಂಡ ಪಾರ್ವತಿಯು ರೋಧಿಸುತ್ತಾ ‘‘ಆತ ತನ್ನ ಮಗ, ಅವನನ್ನು ಮೊದಲಿನಂತೆ ಮಾಡುವಂತೆ ಹಠ ಹಿಡಿಯುವಳು. ಪತ್ನಿಯ ಮಾತಿಗೆ ಒಲ್ಲೆ ಎನ್ನಲಾಗದೆ ಶಿವ ತನ್ನ ಗಣಗಳಲ್ಲಿ ಮುಸ್ಸಂಜೆ ಹೊತ್ತಿನಲ್ಲಿ (ಸೂರ್ಯಸ್ತಮಾನದ ಸಮಯ) ಬಡಗುದಿಕ್ಕಿಗೆ ತಲೆಯಿಟ್ಟು ಮಲಗಿರುವವರ ತಲೆಯನ್ನು ತುಂಡರಿಸಿ ತಂದು ಗಣಪತಿಯ ದೇಹಕ್ಕೆ ಜೋಡಿಸುವಂತೆ ತಿಳಿಸಿದನು. ಶಿವನ ಅಪ್ಪಣೆಯಂತೆ ಹುಡುಕಲು ಹೊರಟ ಗಣಗಳಿಗೆ ಎಲ್ಲೆಲ್ಲೂ ಹುಡುಕಿದರೂ ಯಾರೊಬ್ಬರೂ ಸಿಗದೆ ಕೊನೆಗೆ ಆನೆ ಮರಿಯೊಂದು ಮುಸ್ಸಂಜೆಯಲ್ಲಿ ಬಡಗು ದಿಕ್ಕಿಗೆ ತಲೆಯಿಟ್ಟು ಮಲಗಿ ನಿದ್ರಿಸುತ್ತಿರುವುದು ಕಾಣಸಿಕ್ಕಿತು. ಅದರ ತಲೆಯನ್ನು ತುಂಡರಿಸಿ ತಂದು ಗಣಪತಿಯ ದೇಹಕ್ಕೆ ಜೋಡಿಸಿದುದರಿಂದ ಆತ ಗಜಮುಖನಾದ.
ಗಣಪತಿಯ ಹುಟ್ಟಿನ ಬಗ್ಗೆ ವಿವಿಧ ಪುರಾಣಗಳಲ್ಲಿ ಬೇರೆಬೇರೆ ರೀತಿಯ ಕತೆಗಳಿವೆ. ಬ್ರಹ್ಮವೈರ್ವತ ಪುರಾಣ: ಇದ ಪ್ರಕಾರ ವಿಷ್ಣುವಿನ ಕೃಪೆಯಿಂದ ಪಾರ್ವತಿಗೆ ಜನಿಸಿದ ಮಗುವೆ ಗಣಪತಿ. ಶನಿದೇವನ ದೃಷ್ಟಿ ಬಿದ್ದುದರಿಂದ ಆತನ ತಲೆ ಇಲ್ಲವಾಯಿತು. ಆಗ ವಿಷ್ಣುವು ಆನೆಯ ತಲೆತಂದು ಮಗುವಿನ ಕುತ್ತಿಗೆಗೆ ಜೋಡಿಸುತ್ತಾನೆ. ಒಂದು ದಿನ ಮಹದೇವನನ್ನು ಕಾಣಲು ಬಂದ ಪರಶುರಾಮನನ್ನು ತಡೆದುದಕ್ಕಾಗಿ ಆತ ಗಣಪತಿಯ ಒಂದು ದಂತ ಮುರಿದ. ಮತ್ಸು ಪುರಾಣ: ಪಾರ್ವತಿಯು ತನ್ನ ಶರೀರದ ಕೊಳೆಯಿಂದ ಗಣಪತಿಯನ್ನು ನಿರ್ಮಿಸಿ, ಪ್ರಾಣ ಶಕ್ತಿಯನ್ನು ತುಂಬಿದಳು. ಆದ್ದರಿಂದ ಗಣಪತಿಯು ಈ ರೀತಿಯ ವಿಕಾರ ರೂಪ ಪಡೆದನು. ಶಿವ ಪುರಾಣ: ಶಿವನೇ ಗಣೇಶನ ತಲೆಯನ್ನು ಕಡಿದು, ಅನಂತರ ಆನೆಯ ತಲೆ ತಂದಿಟ್ಟನು. ವರಾಹ ಪುರಾಣ: ಶಿವನ ಮುಖದ ತೆಜಸ್ಸಿನಿಂದ ಹುಟ್ಟಿದ ಬಾಲಕ ಗಣೇಶ. ಅವನ ರೂಪ, ತೇಜಸ್ಸುಗಳನ್ನು ಕಂಡು ಆತ್ಮವಿಶ್ವಾಸ ಕಳಕೊಂಡ ಪಾರ್ವತಿಯು ಮಗನಿಗೆ ಕುರೂಪನಾಗೆಂದು ಶಾಪ ನೀಡುತ್ತಾಳೆ. ಹಾಗಾಗಿ ಗಣಪತಿಗೆ ಈ ವಿಕೃತ ರೂಪ ಲಭಿಸಿತು. ಸ್ಕಂದ ಪುರಾಣ: ವರೇಣ್ಯನೆಂಬ ರಾಜನ ಮಗನೇ ಗಣೇಶ. ಆತನಿಗೆ ಹುಟ್ಟುವಾಗಲೇ ಆನೆಯಂತಹ ತಲೆ, ದೊಡ್ಡ ಹೊಟ್ಟೆ, ನಾಲ್ಕು ಭಜಗಳು ಇರುವುದನ್ನು ನೋಡಿ ಹೆದರಿದ ರಾಜನು ಮಗುವನ್ನು ಕೊಲ್ಲುವುದಕ್ಕೆ ಸೇವಕರ ಕೈಯಲ್ಲಿ ಕಳುಹಿಸುತ್ತಾನೆ. ಅವರು ಗಣೇಶನನ್ನು ಕೊಲ್ಲದೆ ಕಾಡಿನಲ್ಲಿರುವ ಪಾರ್ಶ್ವ ಮುನಿಯ ಆಶ್ರಮದ ಬಳಿ ಬಟ್ಟು ಬರುತ್ತಾರೆ. ಮಕ್ಕಳಿಲ್ಲದ ಪಾರ್ಶ್ವ ಮುನಿ ದಂಪತಿಯು ಈ ಮಗುವನ್ನು ಸಾಕುತ್ತಾರೆ. ಶ್ರೀಗಣೇಶ ಪುರಾಣ: ಇದರ ಪ್ರಕಾರ ‘ಮಹೋತ್ಕಟ’ ಎಂಬುದು ಗಣೇಶನ ಮೂಲ ಹೆಸರು. ಉಪನಯನ ಸಂಸ್ಕಾರ ಅದ ಬಳಿಕ ಆತನಿಗೆ ಬೇರೆ ಹೆಸರುಗಳನ್ನಿಡಲಾಯಿತು. ಗಣಪತಿಯು ಬೇರೆ ಬೇರೆ ಯುಗಗಳಲ್ಲಿ ವಿವಿಧ ರೂಪಗಳನ್ನು ತಾಳುತ್ತಾನೆ ಎಂದು ಹೇಳಲಾಗಿದೆ.
ವಿಶ್ವರೂಪಿ
ಓಂಕಾರವನ್ನು ದೇವನಾಗರಿ ಭಾಷೆಯಲ್ಲಿ ಬರೆದಾಗ ಅದು ಗಣೇಶನ ಆಕೃತಿಯನ್ನ ಹೊಂದುತ್ತದೆ. ಆದ್ದರಿಂದಲೇ ಆತನಿಗೆ ಓಂಕಾರ ರೂಪಿ ಎಂಬ ಹೆಸರು ಬಂದಿದೆ. ಅಲ್ಲದೆ ಗಣಪತಿಯನ್ನು ಅನಂತ ರೂಪ, ಹೆಸರುಗಳಂದ ಪೂಜಿಸಲಾಗುತ್ತದೆ. ಆದ್ದರಿಂದಲೇ ಅವನನ್ನು ವಿಶ್ವರೂಪಿ ಎನ್ನುತ್ತಾರೆ. ಆತನ ಮುಖ್ಯವಾದ ರೂಪಗಳೆಂದರೆ: ಯಕ್ಷ ಗಣಪತಿ, ಪಂಚಮುಖಿ ಗಣಪತಿ, ಶಕ್ತಿ ಗಣಪತಿ, ನೃತ್ಯ ಗಣಪತಿ, ವಕ್ರತುಂಡ ಮಹಾಕಾಯ, ವಿದ್ಯಾ ಗಣಪತಿ, ಶ್ವೇತ ಗಣಪತಿ, ಕೃಷ್ಣ ಗಣಪತಿ, ರಕ್ತವರ್ಣ (ಸಿಂಧೂರವರ್ಣ), ಋದ್ಧಿ ಗಣಪತಿ, ಸಿದ್ಧಿ ಗಣಪತಿ, ಲಕ್ಷ್ಮೀ ಗಣಪತಿ, ದುರ್ಗಾ ಗಣಪತಿ, ಸಂಕಷ್ಟಕಹರ ಗಣಪತಿ, ಸೃಷ್ಟಿ ಗಣಪತಿ, ವೀರ ಗಣಪತಿ, ಪಿಂಗಳ ಗಣಪತಿ, ಬೀಜ ಗಣಪತಿ, ಧ್ವಜ ಗಣಪತಿ, ಯೋಗ ಗಣಪಿತಿ, ಹೇರಂಬ ಗಣಪತಿ, ಮೂಷಕ ಗಣಪತಿ, ಅಶ್ವಾರೂಢ ಗಣಪತಿ, ಢುಂಢಿರಾಜ, ಮಹಾ ಗಣಪತಿ, ಭಕ್ತ ಗಣಪತಿ, ದ್ವಿಜ ಗಣಪತಿ, ಉಚ್ಛಿಷ್ಟ ಗಣಪತಿ, ವಿಘ್ನ ಗಣಪತಿ, ಪದ್ಮಾಸನ ಗಣಪತಿ, ನಾಗ ಯಜ್ಞೋಪವೀತಧಾರೀ, ಮಯೂರೇಶ್ವರ, ಉಷ್ಣೀಷ ಗಣಪತಿ, ಬಾಲ ಗಣಪತಿ, ತರಣ ಗಣಪತಿ, ತ್ರಿಮುಖ ಗಣಪತಿ, ಊರ್ಧ್ವ ಗಣಪತಿ, ಏಕಾಕ್ಷರ ಗಣಪತಿ, ಏಕದಂತ ಗಣಪತಿ, ಹರಿದ್ರಾ ಗಣಪತಿ ಇತ್ಯಾದಿ.
 ವಿದ್ಯೆ, ಬುದ್ಧಿಯ ಅಧಿ ದೇವತೆ 
ಗಣಪತಿಯನ್ನು ವಿದ್ಯೆ ಬುದ್ಧಿ, ಸಂಪತ್ತು, ಜ್ಞಾನದ ಅಧಿದೇವತೆ ಎಂದು ಕರೆಯಲಾಗುತ್ತದೆ. ಗಣಪತಿಯು ಭಜಕ ಜನರಿಗೆ ಮುಖ್ಯವಾಗಿ ಮಕ್ಕಳಿಗೆ ಅತ್ಯಂತ ಪ್ರೀತಿಯ ದೇವನೂ ಹೌದು. ಎಲ್ಲರಿಂದ ಹೊಗಳಿಸಿಕೊಳ್ಳುವ ಮತ್ತು ಆರೋಗ್ಯಕರ ವ್ಯಂಗಕ್ಕೆ ಗುರಿಯಾಗುವವನು. ಮ್ಮೆ ಪರಮೇಶ್ವರನು ಷಣ್ಮಖು ಹಾಗೂ ಗಣಪತಿಯನ್ನು ಬಳಿಗೆ ಕರೆದು ಇಡೀ ಲೋಕಕ್ಕೆ ಪ್ರದಕ್ಷಿಣೆ ಹಾಕಿ ಮೊದಲು ಬಂದವರಿಗೆ ಒಂದು ಬಾಳೆ ಹಣ್ಣನ್ನು ಕೊಡುವುದಾಗಿ ಹೇಳಿದ. ತತ್ಕ್ಷಣವೇ ನವಿಲನ್ನೇರಿ ಷಣ್ಮಖ ಲೋಕ ಪ್ರದಕ್ಷಿಣೆಗೆ ಹೊರಟ. ಆದರೆ ಗಣಪತಿ ಸ್ವಲ್ಪ ಯೋಚಿಸಿ ತನ್ನ ತಂದೆ-ತಾಯಿಗೆ ಒಂದು ಪ್ರದಕ್ಷಿಣೆ ಹಾಕಿ ಬಾಳೆ ಹಣ್ಣಿಗಾಗಿ ಕೈಚಾಚಿದ. ಆಗ ಪಾರ್ವತಿ ‘ನೀನು ಲೋಕ ಪ್ರದಕ್ಷಿಣೆ ಮಾಡಿಲ್ಲವಲ್ಲ’ ಎಂದಳು. ಅದಕ್ಕೆ ಗಣಪತಿ ‘ನಾನು ನಿಮಗೆ ಪ್ರದಕ್ಷಿಣೆ ಹಾಕಿಲ್ಲವೆ ನಿಮ್ಮಲ್ಲಿ ಎಲ್ಲ ಲೋಕಗಳೂ ಅಡಗಿವೆಯಲ್ಲವೆ’ ಎಂದ. ಹೀಗೆ ಅವನು ಸಮಯಕ್ಕೆ ತಕ್ಕಂತೆ ಬುದ್ಧಿಚಾತುರ್ಯ ಉಪಯೋಗಿಸಿದಕ್ಕೆ ಶಿವ-ಪಾರ್ವತಿಯರು ಬಾಳೆ ಹಣ್ಣನ್ನು ನೀಡಿದರು. ಇದರಿಂದ ಕೋಪಗೊಂಡ ಷಣ್ಮಖನು ಗಣಪತಿಯ ಒಂದು ದಂತವನ್ನು ತುಂಡರಿಸುತ್ತಾನೆ. ಹೀಗೆ ಗಣಪತಿಯು ಏಕದಂತನಾದ ಎಂದು ಕತೆಯೊಂದರಿಂದ ತಿಳಿಯುತ್ತದೆ.
ವಿಶಿಷ್ಟ ನಾಯಕ 
ಗಣಪತಿಯ ವಿಗ್ರಹ ಬಹಳ ಸುಂದರ ಕಲ್ಪನೆಯದ್ದು. ಗಜಮುಖ, ನಾಲ್ಕು ಕೈ, ದೊಡ್ಡ ಹೊಟ್ಟೆ, ಹೊಟ್ಟೆಗೆ ಹಾವು ಸುತ್ತಿರುವುದು, ಸವಾರಿಗೆ ಇಲಿ. ಅತಂಹ ವಿಲಕ್ಷಣ ಮೂರ್ತಿ ಗಣಪತಿ. ಗಣಗಳಿಗೆ ಅಧಿಪತಿ (ಒಡೆಯ) ಆದ್ದರಿಂದ ಗಣಪತಿ, ಗಣಗಳಿಗೆ ಈಶ ಆದ್ದರಿಂದ ಗಣೇಶ ಎಂದೆನಿಸಿಕೊಂಡಿದ್ದಾನೆ. ಆತ ವಿಶಿಷ್ಟ ನಾಯಕ. ಅದಕ್ಕಾಗಿಯೇ ವಿನಾಯಕ ಎನ್ನುವರು ಅವನನ್ನು. ನಾಯಕನಾದವನು ಹೇಗಿರಬೇಕು ಎಂಬುದಕ್ಕೆ ಆತ ಒಂದು ಉದಾಹರಣೆ. ಒಂದು ಕೈಯಲ್ಲಿ ಪಾಶ, ಇನ್ನೊಂದು ಕೈಯಲ್ಲಿ ಅಂಕುಶ, ಮತ್ತೊಂದು ಕೈಯಲ್ಲಿ ಮೋದಕ, ಮಗದೊಂದು ವರದ ಹಸ್ತ. ನಾಯಕ ಗಜ ಬಲವನ್ನು ಹೊಂದಿರಬೇಕು. ಆದರೆ ಆಗ ಅಧಿಕಾರದ ಮದ ಏರುತ್ತದಲ್ಲವೆ? ಆದರ ನಿಯಂತ್ರಣಕ್ಕೆ ಪಾಶ (ಹಗ್ಗ) ಎನ್ನುವ ಅಂಕುಶಬೇಕು. ಅದು ಇನ್ನೊಬ್ಬರ ಕೈಯಲ್ಲಿ ಅಲ್ಲ ಬದಲಾಗಿ ನಾಯಕನ ಕೈಯಲ್ಲಿ. ನಾಯಕನು ಸ್ವನಿಯಂತ್ರಣಕೊಳ್ಳಪಡಬೇಕು. ತನ್ನ ರಕ್ಷಣೆಯಲ್ಲಿರುವ ಜನಕ್ಕೆ ಸದಾ ಸುಖ, ಸಂತೋಷ ಹಂಚಬೇಕು ಅನ್ನುವುದೇ ಆತನ ಕೈಯಲ್ಲಿರುವ ಮೋದಕದ ಆಶಯ. ತನ್ನ ಅಧೀನದಲ್ಲಿರುವವರು ಭಯದಿಂದ ಮುಕ್ತರಾಗಿರಬೇಕು ಎಂಬುದನ್ನು ಸಾರುವುದೇ ಆತನ ಅಭಯ ಹಸ್ತದ ಉದ್ದೇಶ. ಇನ್ನೊಬ್ಬರಿಗೆ ಕೇಡುಂಟು ಮಾಡಬೇಕು ಎನ್ನುವ ಮೂಷಕ ಸ್ವಭಾವದ ಜನರೂ ನಮ್ಮಲ್ಲಿದ್ದಾರೆ. ಅಂತಹವರನ್ನು ಅಂಕಿತದಲ್ಲಿ ಇಟ್ಟುಕೊಳ್ಳಬೇಕು. ಅವರ ಮೇಲೆ ನಾಯಕ ಸವಾರಿ ಮಾಡಬೇಕು ಎನ್ನುವುದನ್ನು ಆತ ಮೂಷಿಕ ವಾಹನನಾಗಿರುವುದು ಸೂಚಿಸುತ್ತದೆ.
ಗಣಪ ಉರಗ ಭೂಷಣನಾದುದರ ಬಗ್ಗೆ ಒಂದು ಕತೆಯಲ್ಲಿ ಇಂತಿದೆ. ಆತ ಭಕ್ತರಿಗೆ ಬಹುಬೇಗನೆ ಒಲಿಯುವ ಭಕ್ತ ಪ್ರಿಯ ಜಯಗಣಪ. ಆದ್ದರಿಂದ ಚೌತಿಯ ದಿನದಂದು ತನ್ನ ಭಕ್ತರೆಲ್ಲರ ಮನೆಗಳಿಗೆ ತೆರಳಿ ತನ್ನ ಇಷ್ಟದ ತಿನಸುಗಳಾದ ಅಪ್ಪ, ಕಜ್ಜಾಯ, ಕಬ್ಬು, ಚಿರೋಟಿ, ಎಳ್ಳು ಉಂಡೆ, ಮೋದಕ ಇತ್ಯಾದಿಗಳನ್ನು ಹೊಟ್ಟೆ ತುಂಬಾ ಮೆಲ್ಲುತ್ತಾ ಹಳ್ಳಿಯ ಗದ್ದೆ ಬಳಿ ತೆರಳುತ್ತಿದ್ದ. ಆಗ ಕಾಲುಜಾರಿ ಬಿದ್ದ ಪರಿಣಾಮ ಹೊಟ್ಟೆ ಹರಿದೇ ಬಿಡ್ತು. ಇದನ್ನು ಕಂಡ ಚಂದಿರ ಗಹಗಹಿಸಿ ನಗಲು ಕೋಪಗೊಂಡ ಗಣಪತಿಯು ಪಕ್ಕದಲ್ಲಿ ಹರಿದಾಡುತ್ತಿದ್ದ ಹಾವೊಂದನ್ನು ಹಿಡಿದು ತನ್ನ ಹೊಟ್ಟೆಗೆ ಕಟ್ಟಿಕೊಂಡು ಚಂದಿರನಿಗೆ ಗದ್ದೆಯ ಕೆಸರೆರಚಿದ. ಅಂದಿನಿಂದ ಗಣಪತಿ ಉರಗ ಭೂಷಣನಾದ. ಚಂದಿರನ ಮೇಲೆ ಕಾಣುವ ಕಪ್ಪು ಗುರುತು ಗಣಪತಿ ಎಸೆದ ಮಣ್ಣಿನ ಕಲೆ ಎಂಬ ಹೇಳಿಕೆಯಿದೆ. ಚೌತಿಯಂದು ಚಂದ್ರನನ್ನು ನೋಡಬಾರದು ಎನ್ನುವ ನಂಬಿಕೆಯೂ ಜನರಲ್ಲಿದೆ.
ಗಣಪತಿಯ ಬಗ್ಗೆ ಹೀಗೆ ಹಲವಾರು ಕತೆಗಳು ಕೇಳಿ ಬರುತ್ತವೆ. ಗಣೇಶನ ಬಗ್ಗೆ ದೇಶದಲ್ಲಿನ ಬಹುಜನ ಭಕ್ತಿ-ಭಾವನೆಯನ್ನು ಇರಿಸಿಕೊಂಡಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಗಣಪತಿಯ ಕೆಲವೊಂದು ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು. ಮುಖ್ಯವಾಗಿ ಶರವು, ಹಟ್ಟಿಂಗಡಿ, ಆನೆಗುಡ್ಡೆ, ಸೌತಡ್ಕ, ಕಾಸರಗೋಡಿನ ಮಧೂರು ಮೊದಲಾದವುಗಳು. ಜನರಿಗೆ ಗಣಪನೆಂದರೆ ಅಗಾಧ ಪ್ರೀತಿ ಮತ್ತು ಅಪಾರ ಭಕ್ತಿ. ಗಣಪನ ಚಿತ್ರಗಳನ್ನು ನೋಡಿದಷ್ಟು ಜನಕ್ಕೆ ಸಾಕೆನ್ನಿಸುವುದಿಲ್ಲ. ಆದ್ದರಿಂದಲೇ ಗಣಪನನ್ನು ವಿವಿಧ ವಸ್ತುಗಳಲ್ಲಿ ಚಿತ್ರಿಸಲಾಗುತ್ತದೆ. ಕಲ್ಲು, ಮಣ್ಣಿನಲ್ಲಿ ವಿಗ್ರಹಗಳನ್ನು ತಯಾರಿಸುವುದು ಮಾತ್ರವಲ್ಲದೆ ತರಕಾರಿ, ನಾಣ್ಯ, ಸಾಸಿವೆ ಕಾಳು, ಚಿನ್ನ, ಬೆಳ್ಳಿ, ಅಕ್ಕಿ, ಮರ ಹೀಗೆ ಬೇರೆ ಬೇರೆ ವಸ್ತುಗಳಲ್ಲಿ, ನಾನಾ ಭಂಗಿಗಳಲ್ಲಿ ರಚಿಸಲಾಗುತ್ತದೆ. ವಿನಾಯಕನ ಕಲಾಕೃತಿಗಳು ಚಿತ್ತಾಕರ್ಷಕವಾಗಿತ್ತವೆ. ಇದು ಗಣಪನ ಜನಮೆಚ್ಚುಗೆ ಕಾರಣವಾಗಿದೆ.
ಸಾರ್ವಜನಿಕ ಗಣೇಶೋತ್ಸವ 
ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಇಂದು ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಈ ಸಾರ್ವಜನಿಕ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭ ಲೋಕಮಾನ್ಯ ಬಾಲಗಂಗಾಧರ ತಿಲಕರು 1893ನೇ ಇಸವಿಯಲ್ಲಿ ಪ್ರಾರಂಭಿಸಿದರು. ಇದರ ಉದ್ದೇಶ ರಾಷ್ಟ್ರದ ಜನತೆಯನ್ನು ಒಗ್ಗೂಡಿಸಿ ಅವರಲ್ಲಿ ದೇಶಪ್ರೇಮ ಬೆಳೆಸಬೇಕು. ಆ ಮೂಲಕ ಬ್ರಿಟಿಷರ ದಬ್ಭಾಳಿಕೆ ವಿರುದ್ಧ ಹೋರಾಟ ನಡೆಸುವುದಾಗಿತ್ತು. ಮೊದಲಿಗೆ ಮುಂಬಯಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭಗೊಂಡಿತು. ಈ ಹಬ್ಬವನ್ನು ಭಾರತದಲ್ಲಿ ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ಎಲ್ಲ ಜನರು ಒಂದುಗೂಡಿ ಆಚರಿಸಲಾಗುತ್ತದೆ.
ಗಣೇಶಾನಿ 
ಸ್ತ್ರೀ ರೂಪದ ಗಣಿಪತಿಯು ಒಂದು ಅರ್ಪೂ ಕಲ್ಪನೆ. ಮಧ್ಯಪ್ರದೇಶದ ಭೇರಾಘಾಟನ ಯೋಗಿನೀ ದೇವಳದಲ್ಲಿ ಗಣಪತಿಯ ಸ್ತ್ರೀ ರೂಪದ ವಿಗ್ರಹವಿದೆ. ಅದನ್ನು ‘ಗಣೇಶಾನಿ’ ಎನ್ನುವರು. ಹಾಗೇ ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಚಿತ್ರಾಪುರ ಮಠದ ವಸ್ತುಸಂಗ್ರಹಾಲಯದಲ್ಲೂ ಒಂದು ಕಂಚಿನ ‘ಗಣೇಶಾನಿ’ ಪ್ರತಿಮೆಯಿದೆ. ಟಿಬೇಟಿನಲ್ಲಿಯೂ ವಿವಿಧೆಡೆಗಳಲ್ಲಿ ಗಣೇಶಾನಿ ಪ್ರತಿಮೆಗಳು ಕಾಣಸಿಗುತ್ತವೆ. ಶಿವನ ಶಕ್ತಿ ‘ಶಿವಾನಿ’ ಇದ್ದಂತೆ ಗಣೇಶನ ಶಕ್ತಿಯನ್ನು ‘ಗಣೇಶಾನಿ’ ಎಂದು ಜನರು ನಂಬಿರಬಹುದೆಂದು ಭಾವಿಸಲಾಗಿದೆ.