ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲವೇ ವ್ಯಕ್ತಿಯ ಅಮೂಲ್ಯ ಆಸ್ತಿ. ಆದ್ದರಿಂದ ವಿದ್ಯಾರ್ಥಿಗಳಾಗಿರುವಾಗಲೇ ಉಪನ್ಯಾಸ, ಚರ್ಚೆ, ಸಂವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಅದೇ ರೀತಿ, ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾತುಗಾರಿಕೆಯ ಕಲೆಯನ್ನು ಬೆಳೆಸಿಕೊಳ್ಳಿ.
ದಿನನಿತ್ಯದ ವೈಯಕ್ತಿಕ ಅಥವಾ ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ತನ್ನೆಡೆಗೆ ಸೆಳೆಯಲು ಸಂವಹನ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಸಂವಹನ ಎಂದರೆ ಮಾಹಿತಿ ವಿನಿಮಯ ಎಂದು ಹೇಳಲಾಗುತ್ತದೆ. ಆದರೆ ಇಂದು ಮಾತಿನ ಮೂಲಕ ಸಂವಹನ ನಡೆಸುವುದೇ ಹೆಚ್ಚು ಪ್ರಾಮುಖ್ಯವನ್ನು ಹೊಂದಿದೆ. ಮಾತನಾಡುವ ಶೈಲಿ, ಪದಗಳ ಬಳಕೆ ಇತ್ಯಾದಿಗಳು ವ್ಯಕ್ತಿತ್ವವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಉದ್ಯೋಗಿಗಳಲ್ಲಿ ಇರಬೇಕಾದ ಅತ್ಯಂತ ಪ್ರಮುಖ ಕೌಶಲವೆಂದರೆ ಸಂವಹನ. ಏಕೆಂದರೆ, ನಿಮ್ಮಲ್ಲಿರುವ ಶೈಕ್ಷಣಿಕ ಜ್ಞಾನ, ತಾಂತ್ರಿಕ ಜ್ಞಾನ, ಮತ್ತಿತರ ಕೌಶಲವನ್ನು ಮೇಲಧಿಕಾರಿಗಳಿಗೆ, ಸಹೋದ್ಯೋಗಿಗಳೊಂದಿಗೆ ವ್ಯಕ್ತಪಡಿಸಲು ಸಂವಹನ ಕೌಶಲ ಅವಶ್ಯ. ನಿಮ್ಮ ಕಾರ್ಯ ಕ್ಷೇತ್ರ ಮಾರ್ಕೆಟಿಂಗ್, ಅಕೌಂಟ್ಸ್, ಮಾನವ ಸಂಪನ್ಮೂಲ, ಶೈಕ್ಷಣಿಕ, ಉತ್ಪಾದನೆ ಯಾವುದೇ ಇರಲಿ, ಪರಿಣಾಮಕಾರಿ ಸಂವಹನವಿಲ್ಲದೆ ಕಾರ್ಯಕ್ಷಮತೆ ವ್ಯಕ್ತವಾಗದು ಹಾಗೂ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಕಷ್ಟ.
ಯಾರೂ ಹುಟ್ಟಿನಿಂದಲೇ ವಾಗ್ಮಿಗಳಾಗಿರುವುದಿಲ್ಲ. ಪ್ರಯತ್ನದ ಫಲವಾಗಿ ಸಂವಹನ ಕಲೆಯಲ್ಲಿ ಪರಿಣತಿ ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಜೀವನ ದಲ್ಲಿಯೇ ಸಂವಹನ ಕಲೆ ಕರಗತ ಮಾಡಿಕೊಳ್ಳಲು ಪ್ರಯತ್ನಿಸಿ.
ನಮ್ಮ ಶಾಲಾ ಕಾಲೇಜುಗಳ ಪಠ್ಯಕ್ರಮ ಮತ್ತು ಬೋಧನ ಶೈಲಿಯಲ್ಲಿ ಸಂವಹನಕ್ಕೆ ಇರುವ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೌಶಲವನ್ನು ವೃದ್ಧಿಸಲು ಸೂಕ್ತವಾದ ತರಬೇತಿ ನೀಡಬೇಕು.
ಔಪಚಾರಿಕ ಸನ್ನಿವೇಶಗಳಲ್ಲಿ ಹೇಗೆ ಮಾತನಾಡಬೇಕು, ಹಿರಿಯರು, ಗಣ್ಯ ವ್ಯಕ್ತಿಗಳೊಂದಿಗೆ ಸಂವಹನ ಮಾಡುವುದು ಹೇಗೆ? ಸಭೆ, ಸಮಾರಂಭಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಕ್ರಮ ಇತ್ಯಾದಿಗಳ ಬಗ್ಗೆ ಶಾಲೆಗಳಲ್ಲಿಯೇ ವಿಶೇಷ ತರಗತಿ ಅಥವಾ ತರಬೇತಿ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಅದು ಅವರ ಭವಿಷ್ಯದ ವೈಯಕ್ತಿಕ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುವುದು.
ಸಂವಹನದಲ್ಲಿ ಭಾಷಾ ಶುದ್ಧಿ, ಸ್ಪಷ್ಟ ಉಚ್ಛಾರ, ಸಂದರ್ಭಕ್ಕೆ ತಕ್ಕಷ್ಟೇ ಭಾವನೆ ಮುಖದಲ್ಲಿ ವ್ಯಕ್ತಪಡಿಸುವುದು ಅತೀ ಅಗತ್ಯ.
ಜೀವನದ ಯಶಸ್ಸಿಗೆ ಸಂವಹನ ಕಲೆ ಅಗತ್ಯ
ವಿದ್ಯಾರ್ಥಿಗಳಾಗಿರಲಿ ಅಥವಾ ಉದ್ಯೋಗಿಗಳಾಗಿರಲಿ, ನಿಮ್ಮ ಕಾರ್ಯಕ್ಷೇತ್ರ ಯಾವುದೇ ಇರಲಿ, ವೃತ್ತಿಯಲ್ಲಿನ ಅಂತಸ್ತು, ದರ್ಜೆಗಳೇನೇ ಇರಲಿ ಶೈಕ್ಷಣಿಕ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳ ಸಾಧನೆಗೆ ಸಂವಹನ ಕೌಶಲವೇ ಪ್ರಮುಖ ಸಾಧನ. ಆದ್ದರಿಂದ, ವ್ಯಕ್ತಿತ್ವಕ್ಕೊಂದು ಮೆರುಗು ನೀಡುವ ಸಂವಹನ ಕೌಶಲವನ್ನು ಬೆಳೆಸಿ ಕೊಂಡರೆ, ನಿಮ್ಮ ಕಾರ್ಯಕ್ಷಮತೆ ವೃದ್ಧಿಸಿ, ಸಾಧನೆಯ ಉತ್ತುಂಗಕ್ಕೇರಬಹುದು. ಈ ಮೂಲಕ, ಜೀವನದಲ್ಲಿ ಯಶಸ್ಸು ಸಾಧಿಸಬಹದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ