ಶುಕ್ರವಾರ, ಮೇ 11, 2012

ಸಾಹಿತ್ಯದಿಂದ ಮಾನವೀಯ ಮೌಲ್ಯ ವೃದ್ಧಿ


ಮನಸ್ಸಿನ ಭಾವನೆಗಳನ್ನು ಬರಹ ರೂಪದಲ್ಲಿ ವ್ಯಕ್ತ ಪಡಿಸುವುದೇ ಸಾಹಿತ್ಯ. ಸಾಹಿತ್ಯ ಭಾವನೆಗಳ ತೋರುಪಡಿಸುವ ಪರಿಣಾಮಕಾರಿ ಸಾಧನ ಕೂಡಾ. ಪರಿಸರದ ಘಟನೆಗಳ ಪ್ರೇರಣೆ, ಕಲ್ಪನಾಲೋಕದ ಸಹರಕಾರದಿಂದ ಭಾವನೆಗಳು ಉದ್ದೀಪನಗೊಂಡು ಉತ್ತಮ ಸಾಹಿತ್ಯ ರಚನೆಯಾಗುತ್ತದೆ. ಇಂತಹ ಸಾಹಿತ್ಯಗಳು ಮಾನವೀಯ ಮೌಲ್ಯಗಳತ್ತ ದೃಷ್ಠಿ ನೆಟ್ಟಿರುತ್ತವೆ ಮತ್ತು ಅವುಗಳ ವೃದ್ಧಿಗೆ ಸಹಕಾರಿ.
ಸಾಹಿತ್ಯದ ಹುಟ್ಟು ಯಾವಾಗ ಆಯಿತು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಬಹುಶಃ ಶಿಲಾಯುಗದ ಮಾನವ ತನ್ನ ಗುಹೆಗಳಲ್ಲಿ ಪ್ರಾಣಿ, ಪಕ್ಷಿಗಳ, ತಾನು ಕಂಡ ಅಪರೂಪದ ದೃಶ್ಯಗಳ ಚಿತ್ರ ಬಿಡಿಸುವುದ್ದರಿಂದಲೇ ಆರಂಭವಾಗಿರಬೇಕು. ಹೀಗೆ ತನ್ನ ಭಾವನೆಗಳಿಗೆ ರೂಪ ನೀಡುತ್ತಾ ಬಂದ ವ್ಯವಸ್ಥೆ ಇಂದು ತನ್ನ ರೆಂಬೆ- ಕೊಂಬೆಗಳನ್ನು ಚಾಚಿ ಬೃಹತ್ ಮರವಾಗಿ ಬೆಳೆದಿದೆ. ಸಾಹಿತ್ಯವು ಭಾವನೆಯನ್ನು ಜ್ಞಾನ ಭಂಡಾರದೊಂದಿಗೆ ಮಿಶ್ರಮಾಡಿ, ಕಥೆ, ಕವನ, ಕಾದಂಬರಿ, ಪ್ರಬಂಧ ಇತ್ಯಾದಿ ಖಾದ್ಯಗಳ ರೂಪ ನೀಡಿ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತದೆ.
ಸಾಹಿತ್ಯವು ಕಥೆ, ಕವನ, ಹನಿಗವನ, ಕಾದಂಬರಿ, ಪ್ರಬಂಧ ಇತ್ಯಾದಿ ಯಾವುದೇ ಪ್ರಕಾರಗಳಲ್ಲಿದ್ದರೂ ಅದು ತನ್ನದೇ ಆದ ರೀತಿಯಲ್ಲಿ ಓದುಗನ ಮೇಲೆ ಪ್ರಭಾವ ಬೀರೆತ್ತದೆ. ಸಾಹಿತ್ಯವು ತನ್ನ ಅಭಿಪ್ರಾವನ್ನು ಯಾವುದೇ ಕಾರಣಗಳಿಗಾ ಜನರ ಮೇಲೆ ಹೇರುವುದಿಲ್ಲ. ಸಾಹಿತ್ಯದಲ್ಲಿ ವ್ಯಕ್ತಿಗೆ ಸ್ವಾತಂತ್ರವಿದೆ. ಆತ ಸಾಹಿತ್ಯಕಾರನ ಭಾವನೆಗಲಿಗೆ ತನ್ನದೇ ರೀತಿಯಲ್ಲಿ ಸ್ಪಂದಿಸಬಹುದು. ಸಾಹಿತ್ಯವು ತನ್ನ ಅನಿಸಿಕೆಗಳನ್ನು ನಿರಾತಂಕವಾಗಿ ವ್ಯಕ್ತಪಡಿಸುತ್ತದೆ. ಅಲ್ಲದೆ ಯಾವುದೇ ಅಂಕುಶವನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಸಾಹಿತ್ಯವು ಸದಾ ಹೊಸತನಕ್ಕೆ ಅವಕಾಶ ಒದಗಿಸುತ್ತದೆ. ನೈಜ ವಿಷಯಗಳಿಗೆ ಮಹತ್ವ ನೀಡುವುದು.
ಸಾಹಿತ್ಯದಿಂದ ಜಾಗೃತಿ
ಸಾಹಿತ್ಯ ಎಂಬುದು ನಾವು ಬದುಕಿನಲ್ಲಿ ಗಳಿಸುವ ಅನುಭವ. ಇದರಿಂದ ವಸ್ತು ಸ್ಥಿತಿಯ ಅರಿವು, ದೇಶಾಭಿಮಾನ ಮೂಡುತ್ತದೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ಬಗ್ಗೆ ಸಾಹಿತ್ಯವು ಜನರ ಗಮನ ಸೆಳೆದು ಜಾಗೃತಿ ಮೂಡಿಸುತ್ತದೆ. ಬೇರೆ ಬೇರೆ ಜಾತಿ, ಧರ್ಮಗಳಲ್ಲಿರುವ ಮೂಢನಂಬಿಕೆ, ಕೆಟ್ಟ ಆಚರಣೆಗಳನ್ನು ಹೋಗಲಾಡಿಸಿ ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಸಮಾಜವನ್ನು ಕಾಡುವ ಪಿಡುಗುಗಳ ಬಗ್ಗೆ ನಮ್ಮ ಗಮನ ಸೆಳೆಯುವಲ್ಲಿ ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ರೀತಿಯ ಚೈತನ್ಯ ಸುಪ್ತವಾಗಿ ಅಡಗಿರುತ್ತದೆ. ಅವುಗಳನ್ನು ಬೆಳಕಿಗೆ ತರುವಲ್ಲಿ ಸಾಹಿತ್ಯ ಉಪಕಾರಿ. ಯಾವುದೇ ಒಂದು ಸಾಹಿತ್ಯವನ್ನು ಓದಿದಾಗ ಅದಕ್ಕೆ ಸ್ಪಂದಿಸುವ ಮನೋಭಾವ ನಮ್ಮಲ್ಲಿ ಬೆಳೆಯುತ್ತದೆ. ಉದಾ: ಯಾವುದೊ ಒಂದು ಪತ್ರಿಕೆಯನ್ನು ಓದಿದಾಗ ನಾವು ‘ವಾಹ್!’, ‘ಅಬ್ಬಬ್ಬಾ’, ‘ಛೆ’, ‘ಶಹಬ್ಬಾಸ್’ ಎಂಬಿತ್ಯಾದಿ ಪ್ರತಿಕ್ರಿಯೆ ಹೊರಡಿಸುತ್ತೇವೆ. ಮತ್ತೆ ಕೆಲವು ಬಾರಿ ಅವು, ನಾವು ಕೂಡಾ ಏನಾದರು ವಿಷಯಗಳ ಬಗ್ಗೆ ಬರೆಯುವಂತೆ ಪ್ರೇರೇಪಿಸುತ್ತವೆ.
ನಮ್ಮಲ್ಲಿರುವ ಪ್ರೀತಿ, ಪ್ರೇಮ, ಕರುಣೆ, ವಾತ್ಸಲ್ಯ, ಕೋಪ, ಆಕ್ರೋಶ, ಪ್ರತಿಭಟನೆ ಇತ್ಯಾದಿ ಮಾನವೀಯ ಗುಣಗಳ ಅಭಿವ್ಯಕ್ತಪಡಿಸಲು ಸಾಹಿತ್ಯದಿಂದ ಸಾಧ್ಯ. ಬಡವರ, ದೀನ - ದಲಿತರ ಪರವಾಗಿನಿಂತು ಹೋರಾಡುವ ಶಕ್ತಿ ಸಾಹಿತ್ಯದಲ್ಲಿದೆ. ಬ್ರಿಟೀಷರ ವಿರುದ್ಧದ ಸ್ವಾತಂತ್ರ ಹೋರಾಟದಲ್ಲಿಯೂ ಸಾಹಿತ್ಯ ಪ್ರಭಾವ ಶಾಲಿ ಪಾತ್ರ ನಿರ್ವಹಿಸಿತ್ತು.
ಸಾಹಿತ್ಯಾಸಕ್ತಿ ಕುಂಠಿತ 
ಮಾನವೀಯ ಸಂಬಂಧಗಳು ಇಂದು ಸಮಾಜದಲ್ಲಿ ನಶಿಸಿ ಹೋಗುತ್ತಿವೆ. ಯುವಜನರಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿ ಕುಂಠಿತವಾಗುತ್ತಿದೆ. ಇದಕ್ಕೆಲ್ಲಾ ಪಾಶ್ಚಿಮಾತ್ಯ ಸಂಸ್ಕೃತಿ-ಸಾಹಿತ್ಯಗಳ ಪ್ರಭಾವಗಳೇ ಕಾರಣ. ಈ ಆಧುನಿಕ ಯುಗದ ಒತ್ತಡ ಭರಿತ ಜೀವನದಲ್ಲಿ ಎಲ್ಲರಿಗೂ ಸಮಯಾವಕಾಶದ ಕೊರತೆ ಇದೆ. ಇದರಿಂದ ಸಾಹಿತ್ಯದ ಸವಿಸ್ತಾರವಾದ ಓದು ಸಾಧ್ಯವಾಗುತ್ತಿಲ್ಲ. ಸಮಯದ ಒತ್ತಡದಿಂದಾಗಿ ಕವನ-ಕಥೆ-ಚರ್ಚಾ ಗೋಷ್ಠಿ, ಕಾರ್ಯಾಗಾರ, ವಿಚಾರಸಂಕಿರಣ, ಉಪನ್ಯಾಸ, ಸಾಹಿತ್ಯ ಸಮ್ಮೇಳನ ಇತ್ಯಾದಿ ಸಾಹಿತಿಕ ಕಾರ್ಯಕ್ರಮಗಲ್ಲಿ ಭಾಗವಹಿಸಲು ಇಂದು ಜನರಿಗೆ ಸಾಧ್ಯವಾಗುತ್ತಿಲ್ಲ.
ದೈನಂದಿನ ಚಟುವಟಿಕೆಗಳಂತೆ ಸಾಹಿತ್ಯದ ಅಧ್ಯಯನಕ್ಕೂ ಒಂದಷ್ಟು ಸಮಯ ವ್ಯಯಿಸುವುದು ಅನಿವಾರ್ಯ. ಓದುವಿಕೆ ಕಡಿಮೆಯಾದಾಗ ಬರವಣಿಗೆಯು ಕುಂಠಿತಗೊಳ್ಳುವುದು. ಓದುವ ಹವ್ಯಾಸದಿಂದ ಸಾಹಿತ್ಯವು ಬೆಳೆಯುವುದು, ಜತೆಗೆ ಓದುಗನ ಜ್ಞಾನ, ಚಿಂತನಾ ಮಟ್ಟವು ವೃದ್ಧಿಸುವುದು. ಮಾನವನ ಜೀವನದ ಪ್ರತಿಯೊಂದು ಅವಶ್ಯಕಗಳನ್ನು ತುಂಬಲು ಸಾಹಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಹಾಯಕ. ಸಾಹಿತ್ಯದ ಓದಿನಿಂದ ವ್ಯಕ್ತಿತ್ವದ ಬೆಳವಣಿಗೆಯು ಸಾಧ್ಯ ಎನ್ನುವುದು ವಿಶೇಷ.
ಸಾಹಿತ್ಯವು ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಏಳಿಗೆಯನ್ನು ಬಯಸುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ವ್ಯಕ್ತಿಯ ಪಾತ್ರ ಪ್ರಮುಖ. ವ್ಯಕ್ತಿಯಲ್ಲಿರುವ ಮಾನವೀಯ ಗುಣಗಳನ್ನು ಪೋಷಿಸುವ ಮೂಲಕ ಸಾಹಿತ್ಯವು ಸಮಾಜದ ಅಭ್ಯುದಯಕ್ಕೆ ಕೊಡುಗೆ ನೀಡುತ್ತದೆ. ಸಾಹಿತ್ಯವು ವ್ಯಕ್ತಿ ಮತ್ತು ಸಮಾಜದಲ್ಲಿನ ಕುಂದುಕೊರತೆಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಪರಿಯಾಯ ಮಾರ್ಗೋಪಾಯಗಳನ್ನು ಸೂಚಿಸುತ್ತದೆ. ಹೀಗೆ ಸಮಾಜದ ಸರ್ವಾಂಗೀಣ ಪ್ರಗತಿಗೆ ಮಹತ್ತರವಾಗಿದೆ.

ನೆನಪುಗಳ ಬುತ್ತಿ ಆಟೋಗ್ರಾಫ್


‘‘ಪೆನ್ನು ಎಂಬ ಖಡ್ಗ ಹಿಡಿದು 
ಶಾಯಿ ಎಂಬ ರಕ್ತ ಚೆಲ್ಲಿ 
ಪರೀಕ್ಷೆ ಎಂಬ ಯುದ್ಧದಲ್ಲಿ ಗೆದ್ದು ಬಾ !’’
ಇದು ಯಾವುದೇ ಹೋರಾಟ, ಪ್ರತಿಭಟನೆಯ ಘೋಷಾ ವಾಕ್ಯವಲ್ಲ. ವಿದ್ಯಾರ್ಥಿಗಳು ಶಾಲೆಗೆ ವಿದಾಯ ಕೋರುವ ಸಂದರ್ಭ ಸಹಪಾಠಿಗಳು ಶುಭ ಹಾರೈಸುವ ನುಡಿ ಮುತ್ತು. ಜನವರಿ - ಫೆಬ್ರವರಿ - ಮಾರ್ಚ್ ಎಂದರೆ ಶೈಕ್ಷಣಿಕ ವರ್ಷದ ಕೊನೆಯ ತಿಂಗಳುಗಳು. ಹಿರಿಯ ವಿದ್ಯಾರ್ಥಿಗಳು ಶಾಲೆಗೆ, ಸಹಪಾಠಿಗಳಿಗೆ ವಿದಾಯ ಹೇಳಲು ಸಜ್ಜಾಗುವ ಸಮಯ. ಶಾಲೆಯೊಂದಿಗಿನ ಹಲವಾರು ವರ್ಷಗಳ ಒಡನಾಟ, ಶಿಕ್ಷಕರು ಮತ್ತು ಸಹಪಾಠಿಗಳ ಜತೆಗಿನ ಬಾಂಧವ್ಯ ಇನ್ನು ಅವರಿಗೆ ನೆನಪು ಮಾತ್ರ. ಇಂತಹ ಭಾವನಾತ್ಮಕ ಸಂಬಂಧದ ಸವಿ ನೆನಪಿಗಾಗಿ ವಿದ್ಯಾರ್ಥಿಗಳು ಆಟೋಗ್ರಾಫ್ ಬರೆಯಿಸಿಕೊಳ್ಳುವುದು ಸಾಮಾನ್ಯ.
ಸವಿಸವಿ ನೆನಪು ಸಾವಿರ ನೆನಪು.....
ಹೌದು ಆಟೋಗ್ರಾಫ್ ಒಂದು ನೆನಪುಗಳ ಬುತ್ತಿ. ಆಟೋಗ್ರಾಫ್ ಪುಸ್ತಕದ ಒಂದೊಂದು ಪುಟಗಳು ಬದುಕಿನಲ್ಲಿ ಗತಿಸಿದ ಹಲವಾರು ಸಂಗತಿಗಳತ್ತ ನಮ್ಮ ಮನಸ್ಸನ್ನು ಕೊಂಡೊಯ್ಯವುದು.
‘ನೆನಪುಗಳ ಮಾತು ಮಧುರ....’ ಎಂಬಂತೆ ನಮ್ಮ ಜೀವನದಲ್ಲಿ ನಡೆದ ಯಾವುದೋ ಘಟನೆ, ಅನುಭವಿಸಿದ ನೋವು, ಕಷ್ಟ -ನಷ್ಟ, ಮಾಡಿದ ಚೇಷ್ಟೆ ಇತ್ಯಾದಿಗಳು ಮುಂದೊಂದು ದಿನ ನೆನಪಾಗಿ ಉಳಿಯುತ್ತವೆ. ಅವು ಮಧುರ, ಮರೆಯಾರದ ನೆನಪುಗಳಾಗಿರುತ್ತವೆ. ಆಟೋಗ್ರಾಫ್ ಅಂತಹ ನೆನಪುಗಳು ಮರುಕಳಿಸುವಂತೆ ಮಾಡುತ್ತವೆ.
ಪ್ರತಿ ವರ್ಷದಂತೆ ಈ ಸಲವು ಆಟೋಗ್ರಾಫ್ ಬರೆಯುವ, ಬರೆಯಿಸಿಕೊಳ್ಳುವ ಸುಮಧುರ ಕ್ಷಣಗಳು ಮರುಕಳಿಸಿದೆ. ಶಾಲಾ -ಕಾಲೇಜುಗಳಲ್ಲಿ ಈಗ ನೋಟ್ಸ್ ಪುಸ್ತಕಗಳಿಗಿಂತ ಆಟೋಗ್ರಾಫ್ ಬುಕ್ಗಳೇ ಮಹತ್ವ ಪಡೆದಿವೆ. ತುಂಬಾ ಆತ್ಮೀಯರ ಆಟೋಗ್ರಾಫ್ ಪುಸ್ತಕವನ್ನು ಶಾಲೆಯಲ್ಲದೆ ಮನೆಗೆ ಕೊಂಡೊಯಿದ್ದು ಬಹಳ ವಿಶಿಷ್ಟವಾಗಿ ಬರೆಯುವವರೂ ಇದ್ದಾರೆ.
ವಿಶೇಷ ವಿನ್ಯಾಸ 
ಕೆಲವರು ಯಾವುದೊಂದು ಡೈರಿಯನ್ನು ಆಟೋಗ್ರಾಫ್ ಬರೆಯಲು ಬಳಸಿದರೆ ಮತ್ತೆ ಕೆಲವರು ಅಂಗಡಿಗಳಲ್ಲಿ ಸಿಗುವ ಬಣ್ಣ ಬಣ್ಣದ ಡಿಸೈನ್ಗಳಿಂದ ಕೂಡಿದ ಆಟೋಗ್ರಾಫ್ ಖರೀದಿಸಿ ಬಳಸುವರು. ಕೆಲವರು ಆಟೋಗ್ರಾಫ್ನ ಅಲಂಕಾರ, ವಿನ್ಯಾಸಕ್ಕೆ ಬಹಳಷ್ಟು ವೆಚ್ಚ ಮಾಡುತ್ತಾರೆ. ಅಂತಹವರ ಆಟೋಗ್ರಾಫ್ ಪುಸ್ತಕಗಳು ವಿಶೇಷ ವಿನ್ಯಾಸ, ವಿವಿಧ ನಟ-ನಟಿಯರ, ಪ್ರಾಣಿ -ಪಕ್ಷಿಗಳ ಚಿತ್ರ, ಕಾರ್ಟೂನ್ ಚಿತ್ರ, ಹೊಳೆಯುವ ಬಣ್ಣ -ಬಣ್ಣದ ಶಾಯಿ ಪೆನ್ನುಗಳ ಬರಹ, ಮಹಾತ್ಮರ ಮಾತು, ಹೃದಯದ ಸಂಕೇತ, ಧಾರ್ಮಿಕ ಚಿಹ್ನೆ ಇತ್ಯಾದಿಗಳಿಂದ ಆಕರ್ಷಣೀಯವಾಗಿರುತ್ತವೆ. ಮತ್ತೆ ಕೆಲವು ಸರಳವಾಗಿದ್ದು, ಉತ್ತಮ, ಮನ ಮುಟ್ಟುವ ನುಡಿಮುತ್ತುಗಳಿಂದ ಕೂಡಿರುತ್ತವೆ. ಆಟೋಗ್ರಾಫ್ ಪುಸ್ತಕಗಳ ವಿನ್ಯಾಸಕ್ಕೆ ಗಂಟೆ ಗಟ್ಟಲೆ ಸಮಯ ವ್ಯಯಿಸುವವರೂ ಇದ್ದಾರೆ.
ಆಟೋಗ್ರಾಫ್ ಬರೆಯುವವರಲ್ಲಿಯೂ ಎರಡು ವಿಧದವರಿದ್ದಾರೆ. ಕೇವಲ ಶುಭಹಾರೈಕೆಗಳನ್ನು ಮಾತ್ರ ಬರೆಯುವವರು ಒಂದು ವಿಧ. ಮತ್ತೆ ಕೆಲವರು ಆಟೋಗ್ರಾಫ್ ನೀಡಿದ ವ್ಯಕ್ತಿಯೊಂದಿಗಿನ ತನ್ನ ಒಡನಾಟ, ಸಂಬಂಧ, ಒಟ್ಟಿಗೆ ಮಾಡಿದ ಕೆಲವೊಂದು ಚೇಷ್ಟೆ ಇತ್ಯಾದಿಗಳ ಬಗ್ಗೆ ಪುಟಗಟ್ಟಲೆ ಬರೆಯುವುದು ಹಾಗೂ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸುವವರು ಇದ್ದಾರೆ.
ಮೊಬೈಲ್, ಅಂತರ್ಜಾಲದ ಮೊಡಿ 
ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ದೂರವಾಣಿ, ಅಂತರ್ಜಾಲದಂತಹ ಅತ್ಯಾಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ವಿದ್ಯಾರ್ಥಿಗಳು ಶಾಲಾ -ಕಾಲೇಜುಗಳಿಗೆೆ ವಿದಾಯ ಹೇಳಿದರೂ ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ನಿಕಟ ಸಂಪರ್ಕದಿಂದಿರಲು ಸಾಧ್ಯವಿದೆ. ಇದರಿಂದ ಹಿಂದಿನ ಕಾಲದಂತೆ ಆಟೋಗ್ರಾಫ್ ಬಿಡಿಸಿ ಅನಂತರವಷ್ಟೇ ಸಹಪಾಠಿಗಳ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇಂದಿಲ್ಲ. ಹಾಗಾಗಿ ಆಟೋಗ್ರಾಫ್ ಬರೆಯಿಸುವುದು, ಬರೆಯುವುದು ಇಂದೊಂದು ಫ್ಯಾಶನ್ ಆಗಿದೆ.
ಫೇಸ್ ಬುಕ್, ಆರ್ಕುಟ್ ಗೂಗಲ್ ಪ್ಲಸ್, ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ತಾಣಗಳ ಕ್ರೇಜಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಶಾಲಾ - ಕಾಲೇಜು ಬಿಟ್ಟರೂ ಸಹ ನಿರಂತರ ಸಂಪರ್ಕ ಸಾಧ್ಯವಾಗಿದೆ. ಇದರಿಂದ ಅವರಿಗೆ ಅಗಲುವಿಕೆ ಭಾವ ಅನುಭವಕ್ಕೆ ಬರುವುದಿಲ್ಲ. ಇದು ಕೂಡ ಶಾಲಾ - ಕಾಲೇಜುಗಳಲ್ಲಿ ಆಟೋಗ್ರಾಫ್ ಬಳಕೆ ಕಡಿಮೆಯಾಗಲು ಕಾರಣ ಎನ್ನಬಹುದು.
ಶಾಲಾ - ಕಾಲೇಜು ಜೀವನದಲ್ಲಿ ವಿದಾಯದ ದಿನಗಳೆಂದೇ ಗುರುತಿಸಲ್ಪಟ್ಟಿರುವುದು ಏಳು, ಹತ್ತನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ಕೊನೆಯ ವರ್ಷ. ಏಳು, ಹತ್ತನೇ ತರಗತಿ, ಪಿಯುಸಿ ಕೊನೆಯ ವರ್ಷದ ವಿದ್ಯಾರ್ಥಿಗಳಲ್ಲಿ ಆಟೋಗ್ರಾಫ್ ಕ್ರೇಜಿ ಈ ವರ್ಷವೂ ಜೋರಾಗಿದೆ. ಆದರೆ ಇಂದು ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಇದು ಅಷ್ಟಾಗಿ ಕಂಡುಬರುವುದಿಲ್ಲ.

ಯುವ ಜನತೆಗೆ ಮದುವೆ ಬೇಡವಂತೆ!


ಓಯ್, ಮಾರಾಯ್ರೆ ಈಗಿನ ಯುವಜನತೆಗೆ ಮದುವೆ ಬೇಡವಂತೆ! ಮದುವೆ ಅಂದರೆ ಅವರಿಗೆ ಯಾವಗ ವಿಚ್ಛೇದನ ಅಗುತ್ತೋ ಅಂತ ಭಾರೀ ಹೆದರಿಕೆ. ಮದುವೆಯಾದರೆ ಹೊಣೆಗಾರಿಕೆಯ ಸುಳಿಯಲ್ಲಿ ಸಿಕ್ಕಿ ಎಂಜಾಯ್ಮೆಂಟ್ ನಶಿಸಿ ಹೋಗುತ್ತದೆಯಂತೆ. ಹಾಗಂತ ನಾನು ಹೇಳ್ತಿಲ್ಲ. ವಿದೇಶದಲ್ಲಿ ನಡೆದ ಸಮೀಕ್ಷೆಯೊಂದು ತಿಳಿಸಿದೆ.
ಜನ್ಮ ಜನ್ಮಗಳ ಅನುಬಂಧ...
‘ಮದುವೆ’ ಎನ್ನುವುದು ಜನ್ಮ ಜನ್ಮಗಳ ಅನುಬಂಧ. ಅದು ಸ್ವರ್ಗದಲ್ಲಿಯೇ ನಿರ್ಧರಿತವಾಗಿರುತ್ತದೆ. ಯಾವ ಗಂಡಿಗೆ, ಯಾವ ಹೆಣ್ಣು ಜೋಡಿ ಎಂಬುದನ್ನು ದೇವರು ಮೊದಲೇ ನಿಶ್ಚಯಿಸಿರುತ್ತಾರೆ. ಒಮ್ಮೆ ಮದುವೆಯಾದರೆ ಮುಗಿಯಿತು. ಮತ್ತೆ ಆ ಜೋಡಿಗಳು ಜೀವನ ಪೂರ್ತಿ ಒಟ್ಟಾಗಿರಬೇಕು (ಜೋಡಿಗಳ ಮಧ್ಯೆ ಹೊಂದಾಣಿಕೆಯಾಗದಿದ್ದರು ಒಗ್ಗೂಡಿ ಬಾಳಬೇಕು) ಎಂಬುದು ನಮ್ಮ ಹಿಂದಿನವರ ಅಭಿಮತ. ಈಗ ಕಾಲ ಬದಲಾಗಿದೆ. ಈ ತಾಂತ್ರಿಕ ಶಕೆಯಲ್ಲಿ ಯಾರು, ಯಾರನ್ನು ಬೇಕಾದರೂ (ಹೆಣ್ಣು -ಗಂಡಿಗೆ ಒಪ್ಪಿಗೆಯಾದವರು) ಮದುವೆಯಾಗಬಹುದು. ಅಲ್ಲದೆ ಮದುವೆಯಾದ ಜೋಡಿಗಳ ಮಧ್ಯೆ ಹೊಂದಾಣಿಕೆ ಸರಿಯಾಗುತ್ತಿಲ್ಲವೆಂದಾದರೆ ಮದುವೆಯಿಂದ ಮುಕ್ತಿ (ವಿಚ್ಛೇದನ) ಪಡೆಯುವ ಅವಕಾಶವು ಇದೆ.
ಈ ಅವಕಾಶದ ಸದುಪಯೋಗವೊ ಅಥವಾ ದುರುಪಯೋಗವೊ ಗೊತ್ತಿಲ್ಲ. ಆದರೆ ವಿಚ್ಛೇದಗಳ ಸಂಖ್ಯೆಯಂತೂ ನಮ್ಮ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರಿಂದ ಇಂದಿನ ಯುವಕ - ಯುವತಿಯರು ಮದುವೆ ಎಂದರೆ ಮಾರುದೂರು ಓಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಪರಿಯಾಯ ಮಾರ್ಗೋಪಾಯವನ್ನು ಯುವಜನತೆ ಕಂಡುಕೊಂಡಂತಿದೆ. ಅದುವೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇಂದು ಯುವಜನತೆ ನಡೆಸುವ ‘ಸಹಜೀವನ’ (ಲಿವಿಂಗ್ ಟುಗೆದರ್) ಕ್ರಮ. ಕೇವಲ ವಿಚ್ಛೆದನ ಭೀತಿಯೊಂದೆ ಇದಕ್ಕೆ ಕಾರಣವಲ್ಲ, ಸಾಂಸಾರಿಕ ಜೀವನ, ಮಕ್ಕಳ ಲಾಲನೆ-ಪೋಷಣೆ, ಹಿರಿಯ ನೋಡಿಕೊಳ್ಳುವ ಜವಾಬ್ದಾರಿ ಇತ್ಯಾದಿ ಹೊಣೆಗಾರಿಕೆಗಳಿಂದ ನುಣುಚಿಕೊಂಡು, ಮೋಜು - ಮಸ್ತಿಯಲ್ಲಿ ಹಾಯಾಗಿರಲು ಬಯಸುವುದು ಕೂಡ ಇದಕ್ಕೆ ಪ್ರೇರಣೆಯಾಗಿದೆ.
ಸಮೀಕ್ಷೆ
ಕಾರ್ನೆಲ್ ವಿಶ್ವವಿದ್ಯನಿಲಯ ಮತ್ತು ಓಕ್ಲಹ್ಯಾಮ್ ವಿಶ್ವವಿದ್ಯಾನಿಲಯ ಈ ಜಂಟಿ ಸಮೀಕ್ಷೆಯನ್ನು ನಡೆಸಿದ್ದು, ಸಮಾಜದ ವಿವಿಧ ಸ್ತರದ ಯುವ ಜನತೆ ಅದರಲ್ಲೂ, ಲಿವಿಂಗ್ ಟುಗೆದರ್ನಲ್ಲಿರುವ ಯುವ ಜೋಡಿಗಳನ್ನು ಇದಕ್ಕೊಳಪಡಿಸಿತು.
ಲಿವಿಂಗ್ ಟುಗೆದರ್ನತ್ತ ಒಲವು
ಸಮೀಕ್ಷೆಗೊಳಗಾದ ಯುವಜನತೆಯಲ್ಲಿ ಮೂರನೇ ಎರಡು ಭಾಗ ಮದುವೆ ಬಳಿಕ ವಿಚ್ಛೇದನವಾಗುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಒಂದು ವೇಳೆ ವಿಚ್ಛೇದನವಾದರೆ, ನಮ್ಮ ಒಟ್ಟಾರೆ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ, ಆರ್ಥಿಕ, ಕಾನೂನು, ಮಾನಸಿಕ ತಳಮಳಗಳಿಗೆಲ್ಲ ಅದೇ ದೊಡ್ಡ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಶೇ.67ರಷ್ಟು ಮಂದಿ ವಿಚ್ಛೇದನ ಭೀತಿ ಹೊರಹಾಕಿದ್ದಾರೆ. ಇನ್ನು ಮಧ್ಯಮ ವರ್ಗದ ಹೆಚ್ಚಿನ ಜನತೆ ಮದುವೆಯಾಗಲು ಒಲವು ತೋರಿದ್ದಾರಂತೆ. ಮದುವೆಗೂ ಮುನ್ನ ‘ಲಿವಿಂಗ್ ಟುಗೆದರ್’ ಇತ್ಯಾದಿ ಎಲ್ಲ, ಪರಸ್ಪರ ಅರಿಯಲು ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕಡಿಮೆ ಆದಾಯದ ಮಹಿಳೆಯರ ಅಭಿಪ್ರಾಯವೇ ಬೇರೆ. ಮದುವೆ ಎಂದರೆ ಅದೊಂದು ಬಂಧನವಿದ್ದಂತೆ. ಒಂದು ವೇಳೆ ತಪ್ಪುಗಳನೇದರೂ ಸಂಭವಿಸಿದಲ್ಲಿ, ಅವಘಡವೇ ಆಗಿಬಿಡುತ್ತದೆ. ಅಲ್ಲದೇ ಜವಾಬ್ದಾರಿಯೂ ಹೆಚ್ಚು ಎಂದು ಹೇಳಿದ್ದಾರೆ.
ದುಡಿಮೆ ನಡೆಸುವ, ಲಿವಿಂಗ್ ಟುಗೆದರ್ನಲ್ಲಿರುವ ಯುವ ಜನತೆ ಪ್ರಕಾರ ಮದುವೆ ಎಂದರೆ ಕೇವಲ ಒಂದು ತುಂಡು ಕಾಗದ. ಈಗಿದ್ದ ವ್ಯವಸ್ಥೆಗೇ ಒಂದು ಪ್ರತ್ಯೇಕ ಗುರುತು ನೀಡಿದಂತೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ವಿಚ್ಛೇದನದ ಭಯ ಒಂದು ಕಡೆಯಾದರೆ, ಮದುವೆಗೆ ಮುನ್ನ ಯುವಜನತೆ ಲಿವಿಂಗ್ ಟುಗೆದರ್ ಬಗ್ಗೆ ಹೆಚ್ಚಿನ ಒಲವು ಹೊಂದಿರುವುದು ವ್ಯಕ್ತವಾಗಿದೆ ಎನ್ನುತ್ತಿದೆ ಈ ಸಮೀಕ್ಷೆ.

ಬುಧವಾರ, ಮೇ 9, 2012

ಬಲು ಅಪರೂಪ ಈ ‘ಮುಳ್ಳಣ್ಣು’


ಕಾಡಿನಲ್ಲಿ ದೊರೆಯುವ ವಿವಿಧ ಹಣ್ಣುಗಳಲ್ಲಿ ‘ಮುಳ್ಳಣ್ಣು’ ಒಂದು. ಮುಳ್ಳಿನ ಮರವೊಂದರಲ್ಲಿ ಬೆಳೆಯುವ ಹಣ್ಣಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ.
ವಿವಿಧೆಡೆಗಳಲ್ಲಿ ಇದನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮುಖ್ಯವಾಗಿ ‘ಚಪ್ಳಂಗಾಯಿ’, ‘ಜಬ್ರಿಕಾಯಿ’, ‘ಚಪ್ಲಿಂಗ’, ‘ಅಪ್ಪಿಕಾಯಿ’, ‘ಮುಳ್ಳುಸಂಪಿಗೆ ಹಣ್ಣು’, ‘ಅಬ್ಲುಂಕ’, ‘ಜವಳಿ ಹಣ್ಣು’, ‘ಆರ್ಬೀಜ ಹಣ್ಣು’, ‘ಆರ್ಬೂಜ’ ಇತ್ಯಾದಿ.


 ಕುಂಟಾಲ, ನೇರಳೆ, ಚೂರಿ, ಞಣಿಲು, ಕೇಪುಳ ಇತ್ಯಾದಿ ಹಣ್ಣುಗಳಂತೆ ಇದನ್ನು ಹಳ್ಳಿಗರು ತಿನ್ನುತ್ತಾರೆ. ಈ ಹಣ್ಣು ಹುಳಿ, ಚೋಗರು, ಸಿಹಿಯ ಮಿಶ್ರಣದಂತೆ ಇರುವುದರಿಂದ ತಿನ್ನಲು ಬಲು ರುಚಿ. ಆದರೆ ಇದನ್ನು ಅತಿಯಾಗಿ ತಿಂದರೆ ನೆತ್ತಿಗೆಂಡೆ, ಅಜೀರ್ಣದಂತಹ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ತಿನ್ನುವಾಗ ಜಾಗೃತೆ ಅಗತ್ಯ.
ಇದು ಕಾಣಲು ಕಾಫಿ ಹಣ್ಣಿನಂತಿದೆ. ಆದರೆ ಇದರೊಳಗೆ ಚಿಕ್ಕ ಬೀಜಗಳಿವೆ. ಚಳಿಗಾಲ ಮತ್ತು ಬೇಸಗೆ ಕಾಲದ ಮೊದಲದಿನಗಳಲ್ಲಿ ಈ ಹಣ್ಣು ಸಿಗುತ್ತವೆ. ಕಾಡುಗಳ ನಾಶದಿಂದಾಗಿ ಇಂದು ಮುಳ್ಳುಣ್ಣಿನ ಮರ ಬಹಳ ಅಪರೂಪವಾಗಿದೆ.
ಉಪ್ಪಿನಕಾಯಿ
ಹಿಂದಿನ ಕಾಲದಲ್ಲಿ ಇದನ್ನು ಬಳಸಿ ಹಳ್ಳಿಗಲ್ಲಿ ಉಪ್ಪಿನಕಾಯಿ ತಯಾರಿಸುತ್ತಿದ್ದರು. ಚಪ್ಳಂಗಾಯಿ ಎಳತು ಮಿಡಿಯಾಗಿರುವಾಗ ಕೊಯ್ದು ತಂದು ನೀರಿನಲ್ಲಿ ಹಾಕಿ ಕುದಿಸಬೇಕು. ಅನಂತರ ಒಂದು ದಿನ ಕಾಲ ಉಪ್ಪು ನೀರಿನಲ್ಲಿ ನೆನೆ ಹಾಕಿ. ಬಳಿಕ ಮೆಣಸು ಸಾಸಿವೆ, ಅರಶಿಣಗಳನ್ನು ಅರೆದು ಮಿಶ್ರಮಾಡಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಮಿಡಿಯಾಗಿರುವಾಗ ಇದರಲ್ಲಿ ಚೊಗರು, ಹುಳಿಗಳು ಅತಿಯಾಗಿರುವುದರಿಂದ ಉಪ್ಪಿನಕಾಯಿ ಹಾಕಲು ಬಹು ಉತ್ತಮ. ಕರಂಡೆ ಕಾಯಿ, ನೆಲ್ಲಿಕಾಯಿಯಂತೆ ಇದನ್ನು ಸುಮಾರು ಒಂದು - ಒಂದೂವರೆ ವರ್ಷದ ವರೆಗೆ ಉಪಯೋಗಿಸಬಹುದು.

ಬಾಯಲ್ಲಿ ನೀರೂರಿಸುವ ಉಪ್ಪು ಮಿಶ್ರಿತ ಮಾವು, ನೆಲ್ಲಿ, ಅನನಾಸು


ಉಪ್ಪು, ಹುಳಿ, ಖಾರ ಮಿಶ್ರಿತ ಪದಾರ್ಥ ಯಾರಿಗೆ ಇಷ್ಟವಾಗಲ್ಲ ಹೇಳಿ? ಇದಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿಡದು, ಹಣ್ಣು ಮುದುಕರ ವರೆಗೆ ಎಲ್ಲರೂ ಪಾನಿಪೂರಿ, ಮಸಾಲೆಪೂರಿಯಂತಹ ಫಾಸ್ಟ್ ಫುಡ್ಗಳನ್ನು ಬಯಸುತ್ತಾರೆ. ಹಾಗಾಗಿನೇ ಜಾತ್ರೆ, ಸಮ್ಮೇಳನ, ಸಂತೆ, ವೀಕೆಂಡ್ ಮಹಲ್, ಬೀಚ್, ಪ್ರವಾಸಿ ತಾಣ ಇಷ್ಟೇಕೆ ರಸ್ತೆ ಬದಿಯಲ್ಲಿ ತಳ್ಳು ಗಾಡಿಗಳಲ್ಲಿ ಅಂತಹ ಫಾಸ್ಟ್ ಫುಢ್ಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಅವುಗಳಿಗೇ ಬಹುಬೇಡಿಕೆ ಇರೋದು ಕೂಡ. ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಬೇಕಲಕೋಟೆಯಲ್ಲಿ ಪಾನಿಪೂರಿಯಂತಹ ಫಾಸ್ಟ್ಫುಡ್ಗಳಿಗೆ ಬೇಡಿಕೆ ಕಡಿಮೆ. ಬದಲಾಗಿ ಮಾವಿನಕಾಯಿ, ನೆಲ್ಲಿಕಾಯಿ, ಅನನಾಸುಗಳನ್ನು ನೀರು, ಉಪ್ಪು, ಖಾರ ಮಿಶ್ರಿತ ದ್ರಾವಣದಲ್ಲಿ ನೆನೆಯಿಸಿ ಮಾರುವುದನ್ನು ಹೆಚ್ಚಾಗಿ ಕಾಣಬಹುದು. ಅಲ್ಲದೆ ಬೇಕಲಕೋಟೆ ಸುತ್ತ ಪಾನಿಪೂರಿಯಂತಹ ಫುಡ್ಗಳನ್ನು ಮಾರುವ ಅಂಗಡಿಗಳು ಕಾಣಸಿಗುವುದು ತೀರವಿರಳ. ಬೇಕಲಕೋಟೆಯಲ್ಲಿ ರಸ್ತೆ ಬದಿ ಉಪ್ಪು, ಖಾರ ಮಿಶ್ರಿತ ದ್ರಾವಣವನ್ನು ಬಕೆಟ್ನಲ್ಲಿ ತುಂಬಿಸಿ ಅದರಲ್ಲಿ ಮಾವು, ನೆಲ್ಲಿ, ಅನನಾಸುಗಳನ್ನು ನೆನೆಯಿಸಿಟ್ಟಿರುವುದನ್ನು ನೋಡಿದರೆ ಎಂತಹವರು ರುಚಿ ನೋಡೋಣ ಎಂದು ಆಕರ್ಷಿಸಲ್ಪಡುವುದರಲ್ಲಿ ಸಂಶಯವಿಲ್ಲ.
ಬಲು ಅಪರೂಪ 
ಅನನಾಸು, ಮುಳ್ಳುಸೌತೆ, ಮಾವಿನಕಾಯಿಗಳನ್ನು ತುಂಡರಿಸಿ ಅವುಗಳ ಮೇಲೆ ಉಪ್ಪು, ಖಾರದ ಪುಡಿ ಸವರಿ ಮಾರುವವುದನ್ನು ಹೆಚ್ಚಿನ ಕಡೆಗಳಲ್ಲಿ ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಕಾಣಬಹುದು. ಆದರೆ ಇಲ್ಲಿನಂತೆ ಉಪ್ಪು, ಖಾರ ಮಿಶ್ರಿತ ದ್ರಾವಣ ತಯಾರಿಸಿ ಅದರಲ್ಲಿ ನೆಲ್ಲಿ, ಮಾವಿನಕಾಯಿ, ಅನನಾಸಿನ ಹೋಳುಗಳನ್ನು ನೆನೆಸಿ ವ್ಯಾಪಾರ ಮಾಡುವುದು ನೋಡಲು, ಸವಿಯಲು ಸಿಗುವುದು ಬಲು ಅಪರೂಪ. ಒಂದು ಹೋಳು ತಿಂದರೆ ಸಾಕು. ಮತ್ತೊಂದು ತಿನ್ನುವಷ್ಟು ಅವುಗಳು ರುಚಿಯಾಗಿರುತ್ತವೆ. ಈಗಾಗಲೇ ಬೇಕಲಕ್ಕೆ ಭೇಟಿಕೊಟ್ಟ ಪ್ರವಾಸಿಗರು ಹಿಂದೆ ತಿಂದ ನೆನಪಿನಲ್ಲಿ ಮತ್ತೊಮ್ಮೆ ಉಪ್ಪು, ಖಾರ ಮಿಶ್ರಿತ ಮಾವು, ನೆಲ್ಲಿ ಅಥವಾ ಅನನಾಸನ್ನು ನಾಲಗೆ ಚಪ್ಪರಿಸುತ್ತಾ ತಿನ್ನುವುದನ್ನು ನೋಡಿದರೆ ಹೊಸದಾಗಿ ಬಂದ ಪ್ರವಾಸಿಗರಿಗೂ ತಿನ್ನೋಣ ಅನ್ನಿಸುತ್ತದೆ.

ತಯಾರಿ 
ಉಪ್ಪು, ಖಾರ ಮಿಶ್ರಿತ ಮಾವು, ನೆಲ್ಲಿ, ಅನನಾಸುಗಳನ್ನು ತಯಾರಿಸುವುದು ಕಷ್ಟದ ಸಂಗತಿಯೇನಲ್ಲ. ಅದನ್ನು ನಮಗೆ ಮನೆಯಲ್ಲಿಯೇ ಸಿದ್ದಪಡಿಸಬಹುದು. ಒಂದು ಲೀಟರ್ ನೀರಿಗೆ ಹತ್ತು ಚಾ ಚಮಚ ಉಪ್ಪು, 4-5 ಹಸಿಮೆಣಸು, 2 ಚಾ ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ದ್ರಾವಣ ತಯಾರಿಸಿ. ಮಾವಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ ದ್ರಾವಣದಲ್ಲಿ ನೆನೆ ಹಾಕಿ. ಸ್ವಲ್ಪ ಸಮಯದ ಅನಂತರ ಮಾವಿನ ಹೋಳನ್ನು (ಖಾರ ಹೆಚ್ಚು ಬೇಕಾದರೆ ಮೆಣಸಿಸ ಪುಡಿ ಸವರಿ) ತಿನ್ನಬಹುದು. ಇದೇ ತರಹ ಉಪ್ಪಿನ ದ್ರಾವಣ ತಯಾರಿಸಿ ಇಡೀ ನೆಲ್ಲಿಕಾಯಿಯನ್ನು (ಕತ್ತರಿಸದೆ) ನೆನೆಸಬೇಕು. ಅನನಾಸಿನ ಸಿಪ್ಪೆ ತೆಗೆದು ದುಂಡಗೆ ಕತ್ತರಿಸಿ, ಉಪ್ಪಿನ ದ್ರಾವಣದಲ್ಲಿ ನೆನೆಸಿ. ಸ್ವಲ್ಪ ಸಮಯದ ಅನಂತರ ಹೋಳಗಳನ್ನು ಸೇವಿಸಬಹುದು.

ಗೊಂದಲ ಸೃಷ್ಟಿಸುವ ಹೊಸ ನಾಣ್ಯ


ಂದು ಐವ ಪೈಸೆ ಕೊಂರ್ಡ ಎಂಚ? ಐನ್ ರೂಪಾಯಿ ಅವೊಡಾಯಿನೆ. ಸರಿತೂಲೆ ಅಣ್ಣಾ ಅವು ಐನ್ ರೂಪಾಯೇ. ಇತ್ತೆತ ಐವ ಪೈಸೆ ಒವ್? ಐನ್ ರೂಪಾಯಿ ಒವ್? ಪಂದ್ಡ್ ಸರಿಯಾದ್ ಗೊತ್ತಾಪುಜ್ಜಿ’ ಎಂದು ಇತ್ತೀಚೆಗೆ ಮಣಿಪಾಲ ಅಂಗಡಿಯೊಂದರ ಸಮೀಪ ಜನ ಮಾತನಾಡಿಕೊಳ್ಳುತ್ತಿದ್ದರು. ಇಂತಹ ಅನುಭವ ನಿಮಗೂ ಆಗಿರಬಹುದು. ಝಣ...ಝಣ... ಎಂದು ಸದ್ದು ಮಾಡುತ್ತಾ, ಒಬ್ಬರ ಕೈಯಿಂದ ಇನ್ನೊಬ್ಬರಕೈಗೆ ಚಲಾವಣೆಗೊಳ್ಳುವ ಈ ನಾಣ್ಯಗಳು ಇಂದು ಗೊಂದಲ ಸೃಷ್ಟಿಸುತ್ತಿವೆ. ಇದಕ್ಕೆ 2011ರಲ್ಲಿ ಬಿಡುಗಡೆಯಾದ ಹೊಸ ನಾಣ್ಯಗಳೇ ಕಾರಣ.






ಪ್ರತಿ ವರ್ಷವು ಭಾರತೀಯ ರಿಸರ್ವ ಬ್ಯಾಂಕ್ ವಿವಿಧ ಮುಖಬೆಲೆಯ ನಾಣ್ಯಗಳನ್ನು ಮುದ್ರಿಸಿ ಬಿಡುಗಡೆ ಮಾಡುತ್ತದೆ. ಹಿಂದಿನ ವರ್ಷಗಳಲ್ಲಿ ಜಾರಿಗೆ ತಂದ ನಾಣ್ಯಗಳಿಗಿಂತ ಸ್ವಲ್ಪ ಭಿನ್ನ ರೀತಿಯ ನಾಣ್ಯಗಳನ್ನು ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಈ ಸಲ ಚಲಾವಣೆಗೆ ಬಂದ ಒಂದು, ಎರಡು, ಐದು ರೂಪಾಯಿ ಮುಖಬೆಲೆಯ ನಾಣ್ಯಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಯಾಕೆಂದರೆ 2011ರಲ್ಲಿ ಬಿಡುಗಡೆಯಾದ ಎರಡು ರೂಪಾಯಿ ನಾಣ್ಯಗಳು ಗಾತ್ರ ಮತ್ತು ಆಕಾರದಲ್ಲಿ 2002, 2003ರಲ್ಲಿ ಚಲಾವಣೆಗೆ ಬಂದ ಒಂದು ರೂಪಾಯಿ ನಾಣ್ಯಗಳನ್ನು ಹೋಲುತ್ತವೆ. ಹಾಗೇ ಇಂದಿನ ಐದು ರೂಪಾಯಿ ನಾಣ್ಯಗಳಿಗೂ ಕೆಲವು ವರ್ಷಗಳ ಹಿಂದೆ ಚಾಲ್ತಿಗೆ ತರಲಾದ 50 ಪೈಸೆಯ ನಾಣ್ಯಗಳಿಗೂ ಸಾಮ್ಯತೆ ಇದೆ. ಅಂತೆಯೇ 2011ರ ಒಂದು ರೂಪಾಯಿ ನಾಣ್ಯಗಳು ಹಿಂದಿನ ಒಂದು ರೂಪಾಯಿ ನಾಣ್ಯಗಳಿಗಿಂತ ಗಾತ್ರದಲ್ಲಿ ಚಿಕ್ಕದಿದ್ದು, ಮೇಲ್ಮೋಟಕ್ಕೆ 50 ಪೈಸೆಯಂತೆ ಭಾಸವಾಗುತ್ತದೆ.
ಹೆಚ್ಚು ಜಾಗೃತೆ ಅನಿವಾರ್ಯ
ಈ ಹಿಂದೆ ಬೇರೆ ಬೇರೆ ಮುಖಬೆಲೆಯ ನಾಣ್ಯಗಳ ಒಂದು ಮುಖದಲ್ಲಿ ಅಶೋಕಸ್ತಂಭ (ಸಿಂಹದ ಮುಖ)ದ ಚಿತ್ರ ಕಡ್ಡಾಯವಾಗಿ, ಇನ್ನೊಂದು ಮುಖದಲ್ಲಿ ನಾಣ್ಯದ ಬೆಲೆ ಹಾಗೂ ಬೇರೆ ಬೇರೆ ಚಿತ್ರಗಳನ್ನು ಮುದ್ರಿಸುತ್ತಿದ್ದರು. ಆದರೆ ಇಂದು ಎಲ್ಲ ಮುಖಬೆಲೆಯ ನಾಣ್ಯಗಳ ಒಂದು ಬದಿಯಲ್ಲಿ ಅಶೋಕಸ್ತಂಭದ ಚಿತ್ರ, ಇನ್ನೊಂದು ಬದಿಯಲ್ಲಿ ನಾಣ್ಯದ ಬೆಲೆ ಹಾಗೂ ರೂಪಾಯಿ ಚಿಹ್ನೆ (`
) ಯನ್ನು ಪ್ರಕಟಿಸುತ್ತಾರೆ. ಇದರಿಂದ ನಾಣ್ಯಗಳನ್ನು ನೋಡದೆ ಹಿಂದಿನಂತೆ ಕೈಯಲ್ಲಿ ಹಿಡಿದ ತತ್ಕ್ಷಣ ಅದರ ಮುಖಬೆಲೆ ಎಷ್ಟೆಂದು ಹೇಳುವುದು ಕಷ್ಟ. ಅಲ್ಲದೆ ಚಿಲ್ಲರೆ ಕೊಡುವ ಸಂದರ್ಭ. ಹೆಚ್ಚು ಜಾಗೃತೆ ವಹಿಸ ಬೇಕಾದದ್ದು ಅನಿವಾರ್ಯ.
50 ಪೈಸೆ, ಒಂದು, ಎರಡು, ಐದು ರೂಪಾಯಿಗಳ ನಾಣ್ಯಗಳು ಅದರದ್ದೇ ಆದ ಆಕಾರ ಮತ್ತು ಗಾತ್ರಗಳಂದಾಗಿ ಜನರಿಗೆ ಕಣ್ಣಿನಲ್ಲಿ ನೋಡದೆ ಕೈಯಲ್ಲಿ ಹಿಡಿದ (ಮಟ್ಟಿದ) ತತ್ಕ್ಷಣ ಗುರುತಿಸಲು ಸಾಧ್ಯವಾಗುತ್ತಿತ್ತು. ಆದರೆ 2011ರಲ್ಲಿ ಚಲಾವಣೆಗೆ ಬಂದ ಒಂದು, ಎರಡು, ಮತ್ತು ಐದು ರೂಪಾಯಿ ನಾಣ್ಯಗಳ ಆಕಾರ, ಗಾತ್ರ ಮತ್ತು ರೂಪದಲ್ಲಿಯೂ ಬದಲಾವಣೆಗಳಾಗಿರುವುದರಿಂದ ಜನರು ದೈನಂದಿನ ವ್ಯವಹಾರಗಳಲ್ಲಿ ನಾಣ್ಯಗಳನ್ನು ಬಳಸುವಾಗ ಗೊಂದಲಕ್ಕೀಡಾಗುತ್ತಿದ್ದಾರೆ. ಸಾಮಾನ್ಯ ಜನರೆ ಈ ಹೊಸ ನಾಣ್ಯಗಳನ್ನು ಗುರುತಿಸುವಲ್ಲಿ ಎಡವುತ್ತಿರುವಾಗ, ವೃದ್ಧರ, ದೃಷ್ಟಿ ದೋಷವಿರುವವರ, ಕೈಯಲ್ಲಿ ಮುಟ್ಟಿ ನೋಡಿಯೇ ನಾಣ್ಯಗಳ ಮುಖಬೆಲೆ ಗುರುತಿಸುವ ಅಂಧರ ಪಾಡೇನು?
ಹೀಗೆ ಮಾಡಿದರೆ ಉತ್ತಮ
 ಕಾಲ ಸರಿದಂತೆ ಬದಲಾವಣೆಗಳು ಎಲ್ಲ ವಸ್ತು, ಕ್ಷೇತ್ರಗಳಲ್ಲೂ ನಡೆಯಬೇಕಾದ್ದು ಅತ್ಯಗತ್ಯ. ಹಾಗೇ ನಾಣ್ಯಗಳಲ್ಲೂ ಬದಲಾವಣೆಗಳಾಗಲಿ. ಹೊಸ ನಾಣ್ಯಗಳನ್ನು ಮುದ್ರಿಸುವಾಗ ಬಳಸುವ ಲೋಹ, ಚಿತ್ರಗಳಲ್ಲಿ ಬದಲಾವಣೆ ಮಾಡಿದೂ ಚಿಹ್ನೆ, ಆಕಾರ, ಗಾತ್ರಗಳಲ್ಲಿ ವ್ಯತ್ಯಾಸ ಮಾಡದೆ, ಅದೇ ಮುಖಬೆಲೆಯ ಈ ಹಿಂದೆ ಚಾಲ್ತಿಗೆ ಬಂದ ನಾಣ್ಯಗಳಂತೆ ಮುದ್ರಿಸಿದರೆ ಉತ್ತಮ. ಇದರಿಂದ ಹೊಸ ನಾಣ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗುವ ಗೊಂದಲವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ಜನಾಕರ್ಷಣೆಯ ಸ್ಪನ್ ಶರ್ಟ್ಗಳು


ಶರ್ಟ್ ತುಂಬಾ ಚೆನ್ನಾಗಿದೆ, ಹೊಸತಾ? ಬಟ್ಟೆ ಯಾವುದು ಸ್ಪನಾ? ಹೌದು, ಹೊಸ ಶರ್ಟ್ ಧರಿಸಿರುವಾಗ ನಮಗೆ ಪರಿಚಯದವರು ಯಾರೇ ಸಿಕ್ಕಿದರೂ ಕೇಳುವ ಸಾಮಾನ್ಯ ಪ್ರಶ್ನೆ ಇದು. ಯಾಕೆಂದರೆ ಇಂದು ಸ್ಪನ್ ಬಟ್ಟೆಯಿಂದ ಸಿದ್ಧಪಡಿಸಿದ ಶರ್ಟ್ ಧರಿಸುವುದು ಫ್ಯಾಶನ್ ಆಗಿಬಿಟ್ಟಿದೆ.
ಯಾವುದೇ ಸಿದ್ದಡುಪುಗಳ ಮಳಿಗೆ, ಟೈಲರ್ ಅಂಗಡಿಗಳಲ್ಲಿ ಗಮನಿಸಿದರೂ ಸ್ಪನ್ ಬಟ್ಟೆಯಿಂದ ತಯಾರಿಸಿದ ಅಂಗಿಕೊಳ್ಳುವವರೇ ಹೆಚ್ಚು. ಕೆಲವು ವರ್ಷಗಳ ಹಿಂದೆ ಕಾಟನ್, ನೈಲನ್ ಪೋಲಿಸ್ಟಾರ್ ಬಟ್ಟೆಗಳಿಗೆ ಬಹುಬೇಡಿಕೆ ಇತ್ತು. ಆದರೆ ಈಗ ಅವುಗಳಿಗೆ ಮಾರುಕಟ್ಟೆ ಕಡಿಮೆಯಾಗಿದೆ. ಎಲ್ಲರ ಬಾಯಲ್ಲೂ ಸ್ಪನ್ ಬಟ್ಟೆಗಳದ್ದೇ ಸುದ್ದಿ. ಯುವಕರಿಗಂತೂ ಸ್ಪನ್ ಬಟ್ಟೆ ಬಹು ಅಚ್ಚುಮೆಚ್ಚು. ಜನರಿಗೆ ಅಂಗಿಯ ಬಣ್ಣ, ಬೆಲೆ, ಗುಣಮಟ್ಟ ಇತ್ಯಾದಿಗಳ ಜತೆಗೆ ಅದು ಯಾವರೀತಿಯ ಬಟ್ಟೆಯಿಂದ ತಯಾರಿಸಿದ್ದು ಎನ್ನುವುದು ಸಹ ಬಹಳ ಮುಖ್ಯ. ಆದ್ದರಿಂದಲೇ ಜನ ಇಂದು ನಿದರ್ಧಿಷ್ಟ ಬಟ್ಟೆಯಿಂದ ಸಿದ್ದಪಡಿಸಿದ ಶರ್ಟ್ಗಳನ್ನೇ ಮಾರುಕಟ್ಟೆಗಳಲ್ಲಿ ಕೇಳಿ ಪಡೆಯುತ್ತಾರೆ.
ಸ್ಪನ್ ತಯಾರಿ 
ಕಾಟನ್ ಮತ್ತು ಸಿಂತೆಟಿಕ್ ಸಿಲ್ಕ್ಗಳನ್ನು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಸೇರಿಸಿ ಸ್ಪನ್ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಸ್ಪನ್ ಬಟ್ಟೆಯ ಉತ್ಪನ್ನಗಳು ದುಬಾರಿ ಬೆಲೆಯವುಗಳು. ಕೆಲವೊಂದು ಪ್ರಮುಖ ಕಂಪೆನಿಗಳು ಮಾತ್ರ ಉತ್ತಮ ದರ್ಜೆಯ ಸ್ಪನ್ ಬಟ್ಟೆಗಳನ್ನು ತಯಾರಿಸಿ, ಮಾರಾಟ ಮಾಡುತ್ತವೆ. ಆದರೆ ಇಂದು ಜನರಿಗೆ ಉಂಟಾಗಿರುವ ಸ್ಪನ್ ಮೇನಿಯಾದಿಂದಾಗಿ ಇದರ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಕಡಿಮೆ ಬೆಲೆಗೆ ಸ್ಪನ್ ಬಟ್ಟೆಗಳು ಎಂದು ಹೇಳಕೊಳ್ಳುವ ನಕಲಿ ಉಡುಪುಗಲು ಜನರಿಗೆ ಮೋಸ ಮಾಡುತ್ತಿವೆ. ಅದರಲ್ಲೂ ಕೆಲವೊಂದು ಬಟ್ಟೆಗಳನ್ನು ಸ್ಪನ್ನಂತೆಯೇ ತಯಾರಿಸಲಾಗುತ್ತದೆ. ಆದರೆ ಕಾಟನ್ ಮತ್ತು ಸಿಂತೆಟಿಕ್ ಬಳಕೆಯ ಪ್ರಮಾಣದಲ್ಲಿ ವ್ಯತ್ಯಾಸ ಮಾಡಿರೆತ್ತಾರೆ.
ವಿಶೇಷ
ಸ್ಪನ್ ಬಟ್ಟೆಯಿಂದ ತಯಾರಿಸಿದ ಶರ್ಟ್ಗಳು ತೊಳೆದರೆ ಅಥವಾ ಒದ್ದೆಯಾದರೆ ಬಹುಬೇಗನೆ ಒಣಗುತ್ತವೆ. ಅದು ಮಳೆ, ಚಳಿ, ಬೇಸಗೆ ಹೀಗೆ ಎಲ್ಲ ಕಾಲಗಳಲ್ಲಿಯೂ ಧರಿಸಲು ಸಹಕಾರಿ. ಒಮ್ಮೆ ಇಸ್ತ್ರಿ ಮಾಡಿದರೆ ಸಾಕು ತುಂಬಾ ಸಮಯ ಹಾಗೇ ಉಳಿಯುತ್ತದೆ. ಪ್ರತಿ ಸಲ ವಾಶ್ ಮಾಡಿದಾಗಲೂ ಇಸ್ತ್ರಿ ಮಾಡಲೇಬೇಕೆಂದಿಲ್ಲ. ಸ್ಪನ್ ಬಟ್ಟೆ ಬಹಳ ನಯವಾಗಿದ್ದು, ಕೈಯಲ್ಲಿ ಮುಟ್ಟಲು, ಧರಿಸಲು ಹಿತವೆನಿಸುವುದು. ಅಲ್ಲದೆ ಅದಕ್ಕೆ ಹೊಳೆಯುವ ಗುಣವಿದ್ದು, ಎಲ್ಲರನ್ನು ಅದು ಆಕರ್ಷಿಸಿದೆ.
ಸೀರೆಯ ಸೆರಗಿಗೆ, ಚೂಡಿದಾರದ ಕೈ ಮತ್ತು ಕತ್ತಿನ ಭಾಗಗಳಿಗೆ ಬೇರೆ ಬಣ್ಣ, ವಿನ್ಯಾಸದ ಬಟ್ಟೆಗಳನ್ನು ಜೋಡಿಸುತ್ತಾರೆ. ಸೀರೆ, ಚೂಡಿದಾರದ ಬಟ್ಟೆ ಖರೀದಿಸುವಾಗ ಅದಕ್ಕೆ ವಿನ್ಯಾಸಗೊಳಿಸುವ ಬಟ್ಟೆಗಳು ಒಟ್ಟಿಗೆ ದೊರೆಯುವುದು ಸಾಮಾನ್ಯ. ಇಂದು ಶರ್ಟ್ ಪೀಸ್ಗಳ ಜತೆಗೂ ಕಾಲರ್, ಕೈ ಮತ್ತು ಬಟನ್ನ ಪಟ್ಟಿಗೆ ಇಡಲು ಬೇರೆ ಬಣ್ಣ ಮತ್ತು ವಿನ್ಯಾಸದ ಬಟ್ಟೆಗಳು ಸಿಗುತ್ತಿರುವುದು ವಿಶೇಷ. ಸ್ಪನ್ ಮೇನಿಯ ಆರಂಭವಾಗಿ ಸುಮಾರು ಮೂರು - ನಾಲ್ಕು ವರ್ಷಗಳೆ ಸಂದವು. ಅವುಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ತಯಾರಿಕ ಕಂಪೆನಿಗಳು ವಿವಿಧ ರೀತಿಯ ಪ್ರಯೋಗಗಳನ್ನು ಮಾಡುತ್ತಿವೆ.

ಮಂಗಳವಾರ, ಮೇ 8, 2012

ಚಪ್ಪಲಿಗು ಬಂತು ಮುಡಿಗೇರುವ ಭಾಗ್ಯ!




ಏನು? ಶೀರ್ಷಿಕೆ ಓದಿ ಆಶ್ಚರ್ಯವಾಯಿತಾ. ಹಾಗಾದರೆ ಇಲ್ಲಿ ಕೊಟ್ಟಿರುವ ಫೋಟೋ ನೋಡಿ. ಮೇಲ್ನೋಟಕ್ಕೆ ಪುಟ್ಟ ಮಕ್ಕಳ ಚಪ್ಪಲಿಯ ಮೋಡಲ್ನಂತೆ ಕಂಡರೂ ಅವು ನಿಜಕ್ಕೂ ಚಪ್ಪಲಿಯ ಮೋಡಲ್ ಅಲ್ಲ. ಬದಲಾಗಿ ಹೆಂಗೆಳೆಯರ ತುರುಬನ್ನು ಅಲಂಕರಿಸುವ ‘ಕ್ಲಿಪ್’. ಹೆಂಗೆಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು. ತಾವು ಎಷ್ಟೇ ಶೃಂಗಾರ ಮಾಡಿ ಕೊಂಡರು ಕಡಿಮೆ ಎಂಬ ಭಾವನೆ ಹೊಂದಿರುವವರು. ಆದ್ದರಿಂದಲೇ ಅವರಿಗೆ ಶೃಂಗಾರ ವಸ್ತುಗಳ ಬಗ್ಗೆ ಆಸಕ್ತಿಯು ಅಧಿಕ. ಹಾಗೆಯೇ ಅವರು ಶೃಂಗಾರ ವಸ್ತುಗಳಲ್ಲಿ ಸದಾ ಹೊಸತನವನ್ನು ಬಯಸುತ್ತಾರೆ. ಈ ಕಾರಣಕ್ಕಾಗಿಯೇ ಕ್ಲಿಪ್ಗಳಲ್ಲಿಯೂ ಇಂತಹವುಗಳನ್ನು ತಯಾರಿಸಿ, ಮಾರುಕಟ್ಟೆಗೆ ತಂದಿರಬಹುದು. ಯಾವುದೇ ಒಂದು ವಸ್ತುವನ್ನು ಆಕಾರ, ಬಣ್ಣ ಹಾಗೂ ಒಂದೇ ರೀತಿಯಲ್ಲಿ ತಯಾರಿಸಿ ಮತ್ತೆ ಮತ್ತೆ ಮಾರುಕಟ್ಟೆಗೆ ತಂದರೆ ಅದರ ಬೇಡಿಕೆ ಕುಗ್ಗುತ್ತದೆ. ಇದಕ್ಕಾಗಿ ಅದರಲ್ಲಿ ಏನಾದರೂ ಹೊಸತನವನ್ನು ಸದಾ ತರುತ್ತಿರಬೇಕು. ಅದು ನೋಡುಗರನ್ನು ಚಿತ್ತಾಕರ್ಷಕವಾಗಿರಬೇಕು. ಆದ್ದರಿಂದಲೇ ಮಾರುಕಟ್ಟೆ ಗಿಮಿಕ್ಗಳು ಅಳವಡಿಕೆಗೆ ಬಂದುವು. ಕ್ಲಿಪ್ನಲ್ಲಿ ಈ ಬದಲಾವಣೆಯೂ ಒಂದು ಗಿಮಿಕ್.
ನಾನು ಇತ್ತೀಚೆಗೆ ಸಂತೆಯಲ್ಲಿ ತಿರುಗಾಡುತ್ತಿರುವವಾಗ ಈ ಪುಟ್ಟ ಚಪ್ಪಲಿಗಳನ್ನು ಮಾರಾಟಕ್ಕೆ ಇಟ್ಟಿರುವುದು ಕಾಣಿಸಿತು. ಅದು ಫ್ಯಾನ್ಸಿ ಅಂಗಡಿ. ಆದ್ದರಿಂದ ಕುತೂಹಲದಿಂದ ಹತ್ತಿರ ಹೋಗಿ ಕೈಯಲ್ಲಿ ಎತ್ತಿಹಿಡಿದು ಪರೀಕ್ಷಿಸಿದೆ. ಆಗ ತಿಳಿಯಿತು ಅವು ಪಾದರಕ್ಷೆಗಳಲ್ಲ, ಚಪ್ಪಲಿಯ ಮೋಡೆಲ್ಗಳು ಅಲ್ಲ. ಬದಲಾಗಿ ಮಹಿಳೆಯರು ತಲೆಗೂದಲು ಅಲಂಕರಿಸಲು ಬಳಸುವ ಹೊಸತರದ ‘ಕ್ಲಿಪ್’ ಎಂದು.
ಕ್ಲಿಪ್ನಲ್ಲೂ ಹೊಸತನ 
ಹಿಂದೆ ಸಾಮಾನ್ಯವಾದ ತಂತಿ ತುಂಡಿನಂತಿರು ಕ್ಲಿಪ್ಗಳು ಬಳಕೆಗೆ ಬಂದಿದ್ದವು. ಅನಂತರ ಕ್ಲಿಪಗಳ ರಚನೆಯಲ್ಲಿಯೂ ಬದಲಾವಣೆ ಮಾಡಿ, ಆಕರ್ಷಣೆಗಾಗಿ ಕೆಲವೊಂದು ಡಿಸೈನ್ಗಳನ್ನು ಅವುಗಳಿಗೆ ಜೋಡಿಸಲಾಯಿತು. ತದನಂತರ ಕ್ಲಿಪ್ ತಯಾರಿಕೆ ಹಾಗೂ ಮಾರಾಟದಲ್ಲಿ ಪೈಪೋಟಿ ಪ್ರಾರಂಭವಾಯಿತು. ಇದರಿಂದ ಕ್ಲಿಪ್ಗಳಿಗೆ ಫ್ಯಾಶನ್ ಸ್ಪರ್ಶ ದೊರೆಯಿತು. ಜನರ ಮೇಲೆ ಸಿನೆಮಾ, ಟಿ.ವಿ.ಗಳ ಮೊಡಿ ಹೆಚ್ಚಾದಂತೆ ಫ್ಯಾಶನ್ ಗೀಳು ಹೆಚ್ಚಿಸಿಕೊಂಡು ಮಹಿಳೆಯರು ಕ್ಲಿಪ್ ನಂತಹ ಶೃಂಗಾರ ವಸ್ತುಗಳಲ್ಲಿ ಬದಲಾವಣೆ ಮತ್ತು ಹೊಸತನಕ್ಕೆ ಹಾತೊರೆಯು ತೊಡಗಿದರು. ಇದನ್ನರಿತ ಅವುಗಳ ತಯಾರಕರು ಚಿಟ್ಟೆ, ವಿವಿಧ ರೀತಿಯ ಹೂವು -ಹಣ್ಣುಗಳ ಆಕಾರದ ಕ್ಲಿಪ್ಗಳನ್ನು ತಯಾರಿಸಿ ಮಾರಲಾಂಬಿಸಿದರು. ಇದರಿಂದ ಕ್ಲಿಪ್ನ ಕ್ರೇಜಿ ಅಧಿಕವಾಗಿ ಪ್ರತಿ ವರ್ಷವು ಹೊಸ ಹೊಸ ತರದ ಕ್ಲಿಪ್ಗಳು ಮಾರುಕಟ್ಟೆ ಪ್ರವೇಶಿಸಿದುವು. ಇದರ ಮುಂದುವರಿದ ಭಾಗವಾಗಿ ಈ ಭಾರಿ ಇಂತಹ ಚಪ್ಪಲಿಯಾಕಾರದ ಕ್ಲಿಪಗಳು ಫ್ಯಾನ್ಸಿ ಅಂಗಡಿ ಸೇರಿವೆ.
ಕೊಂಕು: ಚಪ್ಪಲಿಗು ಬಂತು ಮುಡಿಗೇರುವ ಭಾಗ್ಯ! ಎಂದಾಗ ನನಗೆ ಒಂದು ಜೋಕ್ ನೆನಪಿಗೆ ಬಂತು. ಅದೇನೆಂದರೆ: ಗುಂಡ ಒಮ್ಮೆ ಫೋಟೋಗ್ರಾಫರ್ ಒಬ್ಬರ ಬಳಿಗೆ ಹೋಗಿ ತನ್ನದೊಂದು ಸ್ಟಾಂಪ್ ಸೈಜ್ ಫೋಟೋ ತೆಗೆಯಿರಿ. ಆದರೆ ಫೋಟೋದಲ್ಲಿ ತನ್ನ ಹೊಸ ಚಪ್ಪಲಿಯು ಕಾಣಬೇಕು. ಫೋಟೋಗ್ರಾಫರ್: ಹಾಗಾದರೆ, ಚಪ್ಪಲಿಯನ್ನು ತಲೆಯಲ್ಲಿ ಇಟ್ಟುಕೊ!

ಮಾಳ ಕಾವಲುಗಾರನ ಆಶ್ರಯ ತಾಣ


ಕೇವಲ ಬೀಜಗಳನ್ನು ಬಿತ್ತಿ, ಸಸಿಗಳನ್ನು ನೆಟ್ಟು,ಚೆನ್ನಾಗಿ ನೀರು, ಗೊಬ್ಬರ ಹಾಕಿ ಸಲಹಿದರೆ ಕೃಷಿ ಕಾರ್ಯ ಮುಗಿಯುವುದಿಲ್ಲ. ಬೆಳೆದಂತಹ ಫಸಲುನ್ನು ಕಾಯ(ರಕ್ಷಿಸ)ಬೇಕು. ಇದು ನಿಜವಾಗಿಯೂ ಕೃಷಿಕರಿಗೊಂದು ಸವಾಲಿನ ವಿಷಯ. ಹೂ ಬಿಟ್ಟು ಮಿಡಿಯಾದಲ್ಲಿಂದ ಹಣ್ಣಾಗಿ ಕಟಾವು ಮಾಡಿದರೂ ಬೆಳೆಯನ್ನು ರಕ್ಷಿಸುವ ಕಾರ್ಯ ಮುಗಿಯುವುದಿಲ್ಲ. ಪ್ರತಿಯೊಂದು ಹಂತದಲೂ ಫಸಲಿಗೆ ವಿವಿಧ ರೀತಿಯ ತೊಂದರೆ ಉಂಟಾಗುವುದು ಸಾಮಾನ್ಯ ಅದರಿಂದ ಬೆಳೆಯನ್ನು ಕಾಪಾಡುವುದು ಸಾಹಸಗಾತೆಯೇ ಸರಿ. ಕ್ರಿಮಿ - ಕೀಟಗಳ ಬಾಧೆಯಿಂದ ಬೆಳೆಗಳ ರಕ್ಷಣೆಗೆ ಕೃಷಿಕರು ಔಷಧಿಗಳನ್ನು ಸಿಂಪಡಿಸುತ್ತಾರೆ. ಆದರೆ ಪ್ರಾಣಿ - ಪಕ್ಷಿಗಳು ಗದ್ದೆ - ತೋಟಗಳಲ್ಲಿರು ಫಸಲಿಗೆ ಕಾಟಕೊಡುವುದನ್ನು ತಪ್ಪಿಸಲು ಕಾವಲುಕಾಯುವ ಪದ್ಧತಿ ಹಳ್ಳಿಗಳಲ್ಲಿ ಕಾಣಬಹುದು. ಹೀಗೆ ಕಾಯುವವರಿಗೆ ಕೂರಲು ಸಣ್ಣ ಜೋಪಡಿಯನ್ನು ನಿರ್ಮಿಸುತ್ತಾರೆ. ಇದಕ್ಕೆ ಹಳ್ಳಿಗರು ‘ಮಾಳ’ ಎನ್ನುವರು.
ಮಾಳ ತಯಾರಿ 
ಸಾಮಾನ್ಯವಾಗಿ ಅಡಿಕೆ, ಬಿದಿರಿನ ಸಲಾಕೆಗಳನ್ನು ಬಳಸಿ ಇದನ್ನು ನಿರ್ಮಿಸಲಾಗುತ್ತದೆ. ತೋಟ, ಗದ್ದೆಗಳ ಬದಿಯಲ್ಲಿ ಒಂದೇ ಗಾತ್ರದ ನಾಲ್ಕು ಕಂಬಗಳನ್ನು ಹಾತು ನೆಲದಿಂದ ಸುಮಾರು ಒಂದು ಮೀಟರು ಎತ್ತರ್ಕೆ ಮಂಚ ನಿರ್ಮಿಸುವರು. ಅನಂತರ ಸೋಗೆ ಅಥವಾ ಮಡಲು ಅಥವಾ ಪ್ಲಾಸ್ಟಿಕ್ ಬಳಸಿ ಅದಕ್ಕೆ ಮಾಡು ತಯಾರಿಸುತ್ತಾರೆ. ಹೀಗೆ ನಿರ್ಮಿಸಿದ ಮಾಳದಲ್ಲಿ ಕಾವಲುಗಾರರು ರಾತ್ರಿಯಿಡೀ ಕಳೆಯುವರು.
ಹಗಲಲ್ಲಿ ದನ, ಮಂಗ, ಕೆಲವೊಂದು ಪಕ್ಷಿಗಳ ಕಾಟವಾದರೆ, ರಾತ್ರಿ ನರಿ, ಕಾಡುಹಂದಿ, ಆನೆ ಹೆಗ್ಗಣ ಇತ್ಯಾದಿಗಳ ತೊಂದರೆ, ಕೆಲವೆಡೆ ಕಳ್ಳರ ಕೂಟವು ಇರುತ್ತದೆ. ಇವುಗಳಿಂದ ತೊಟ-ಗದ್ದೆಗಳಲ್ಲಿನ ಬೆಳೆಯನ್ನು ರಕ್ಷಿಸಲು ರೈತರು ಕಾವಲು ಕೂರುತ್ತಾರೆ. ಅಂತಹ ಕಾವಲುಗಾರರಿಗೆ ಮಳೆ, ಚಳಿ, ಗಾಳಿಗಳಿಂದ ರಕ್ಷಣೆ ಪಡೆಯಲು ಮಾಳಗಳನ್ನು ರಚಿಸಲಾಗುತ್ತದೆ.
ಚಳಿ ಕಾಯಿಸುವುದು 
ಸಾಮಾನ್ಯವಾಗಿ ತೋಟ, ಗದ್ದೆಗಳಲ್ಲಿ ತಂಪಿನ ವಾತಾವರಣವಿರುತ್ತದೆ. ರಾತ್ರಿಯಾದಂತೆ ಚಳಿಯು ಹೆಚ್ಚು. ಚಳಿಯಿಂದ ರಕ್ಷಣೆಗೋಸ್ಕರ ಕಾವಲುಗಾರರು ಮಾಳದ ಪಕ್ಕದಲ್ಲಿ ಬೆಂಕಿ ಹಾಕಿ ಚಳಿಕಾಯಿಸುವುದು ವಿಶೇಷ. ಕಾಡುಪ್ರಾಣಿಗಳ ಕಾಟ ಜೋರಾಗಿದ್ದರೆ, ಎರಡು - ಮೂರು ಜನ ಕಾವಲಿಗೆ ಹೋಗುತ್ತಾರೆ. ಹೀಗೆ ಹೋದವರು ಬೆಂಕಿಯ ಮುಂದೆ ಕುಳಿತು ಹರಟೆ ಹೊಡೆಯುತ್ತಾ, ಜನಪದ ಹಾಡು ಹೇಳುತ್ತಾ, ಮತ್ತೆ ಕೆಲವರು ತಮಟೆ ಅಥವಾ ಕಬ್ಬಿಣದ ಡಬ್ಬಿಗಳನ್ನು ಸೊಡೆಯುತ್ತಾ ಕರ್ಕಶ ಸದ್ದು ಮಾಡುವುದು, ಇನ್ನಿತರ ಸಾಧನಗಳನ್ನು ಭಾರಿಸುತ್ತಾ ಪ್ರಾಣಿಗಳು ಬಾರದಂತೆ ಎಚ್ಚರವಾಗಿರುತ್ತಾರೆ. ಅಲ್ಲದೆ ಕಾವಲುಗಾರರು ನಿದ್ದೆ ಬಾರದಿರಲು ವೀಳ್ಯ ಹಾಕುವುದು, ಬೀಡಿ ಸೇದುವುದು, ಹುರಿದ ಹುಳಿ ಬೀಜ, ಅಕ್ಕಿ ಇತ್ಯಾದಿಗಳನ್ನು ತಿನ್ನುತ್ತಾರೆ.
ಮಾಳ ಮರೆಗೆ 
ಆಧುನಿಕರಣದಿಂದಾಗಿ ಕೃಷಿಯೇ ಮೂಲೆಗುಂಪಾಗುತ್ತಿರುವುದು ಒಂದೆಡೆಯಾದರೆ, ಕಾಡು ನಾಶ, ಕಾಡುಪ್ರಾಣಿಗಳ ಅಳಿವಿನಿಂದಾಗಿ ಮಾಳ ತಯಾರಿಸಿ ಕಾವಲು ಕುಳಿತುಕೊಳ್ಳುವ ವ್ಯವಸ್ಥೆಯೇ ಇಂದು ಹಳ್ಳಿಗಳ್ಳಿ ಇಲ್ಲವಾಗಿವೆ. ಇದರಿಂದ ಮಾಳ ಮರೆಯಾಗಿದೆ. ಆದರೂ ಬಹಳ ಅಪರೂಪಕ್ಕೆ ಕೆಲವೆಡೆ ಮಾಳಗಳು ಕಾಣಸಿಗುತ್ತವೆ. ಮುಖ್ಯವಾಗಿ ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಲ್ಲಿ ಇಂದಿಗೂ ಮಾಳ ಗೋಚರಿಸುತ್ತವೆ.

ಬೇಸಗೆ ಶಿಬಿರ ಮಕ್ಕಳಿಗಿದು ಪ್ರೇರಕ


ಎಪ್ರೀಲ್-ಮೇ ತಿಂಗಳುಗಳೆಂದರೆ ಚಿಣ್ಣರಿಗೆ ಬೇಸಗೆ ರಜೆಯ ಮಜಾ. ಅಂತಹ ಚಿಣ್ಣರನ್ನು ಸೆಳೆಯಲು ವಿವಿಧೆಡೆಗಳಲ್ಲಿಂದು ರಜಾ ಶಿಬಿರ, ಬೇಸಗೆ ಶಿಬಿರಗಳು ತಲೆಯೆತ್ತತೊಡಗಿವೆ. ಹೌದು, ಹಿಂದಿನ ಕಾಲದಲ್ಲಿ ಬೇಸಗೆ ರಜೆ ಬಂತೆಂದರೆ ಹೆತ್ತವರಿಗೆ, ಪೋಷಕರಿಗೆ ತಲೆ ನೋವು. ತುಂಟ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂಬುದು. ಆದರೆ ಈಗ ಕಾಲ ಹಾಗಿಲ್ಲ. ರಜೆಯಲ್ಲೂ ಮಕ್ಕಳು ಸದಾ ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳ ಬಹುದಾದಂತಹ ಶಿಬಿರಗಳನ್ನು ಅಲ್ಲಲ್ಲಿ ಆಯೋಜಿಸುತ್ತಿರುವುದನ್ನು ಕಾಣಬಹುದು. ವಿವಿಧ ಸಂಘ-ಸಂಸ್ಥೆಗಳು ಇಂದು ಬೇಸಗೆ ಶಿಬಿರಗಳನ್ನು ಉಚಿತವಾಗಿ ಏರ್ಪಡಿಸುತ್ತಿವೆ. ಇದು ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳಿಗೂ ಶಿಬಿರಗಳ ಪ್ರಯೋಜನ ಪಡೆಯಲು ಸಹಕಾರಿ.
ವಿದೇಶಿ ಕಲ್ಪನೆ
ಬೇಸಗೆ ಶಿಬಿರ ಮೂಲತಃ ವಿದೇಶಿ ಕಲ್ಪನೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದ ‘ಸಮ್ಮರ್ ಕ್ಯಾಂಪ್’, ಸಮ್ಮರ್ ಕೋರ್ಸ್ ನಮ್ಮಲ್ಲಿ ಬೇಸಗೆ ಶಿಬಿರದ ಸ್ವರೂಪ ಪಡೆದುಕೊಂಡಿದೆ. ಹಿಂದೆ ಪಟ್ಟಣಗಳಲ್ಲಿ ಮಾತ್ರ ಇದ್ದ ಇಂತಹ ಶಿಬಿರಗಳು ಇಂದು ಹಳ್ಳಿಗಳಿಗೂ ವ್ಯಾಪಿಸಿದೆ.
ಬೇಸಗೆ ಶಿಬಿರಗಳಲ್ಲಿ ಏನಿದೆ ?
ಶಾಲೆಗಳಿಗೆ ಬೇಸಗೆ ರಜೆ ಇರುವ ಸಂದರ್ಭ ತಜ್ಞ ತರಬೇತುದಾರರಿಂದ ಆಸಕ್ತ ಮಕ್ಕಳಿಗೆ ಶಿಬಿರಗಳ ಮೂಲಕ ಪಠ್ಯೇತರ ಚಟುವಟಿಕೆಗಳ ಬಗ್ಗೆ ಕಲಿಸಿ ಕೊಡಲಾಗುತ್ತದೆ. ಮೈಂಡ್ ಫ್ರೆಶ್ ಗೇಮ್ಸ್, ವಿವಿಧ ಕಲೆ, ಸಂಸ್ಕೃತಿಯ ಪರಿಚಯಿಸಲಾಗುವುದು. ಇದರಿಂದ ಮಕ್ಕಳ ಮನಸ್ಸು ಸದಾ ಉಲ್ಲಾಸ, ಉತ್ಸಾಹದಿಂದ ಚಿಮ್ಮುವುದು. ಬೇಸಗೆ ಶಿಬಿರಗಳಲ್ಲಿ ವಿವಿಧ ಕಡೆಗಳಿಂದ ಬಂದ ಮಕ್ಕಳು ಕಲೆ ಸಾಂಸ್ಕೃತಿಕ ಚಟುವಟಿಕೆ, ಆಟೋಟ ಸ್ಪರ್ಧೆಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಾರೆ. ಇದರಿಂದ ಮುಖ, ವಿಷಯಗಳ ಪರಿಚಯವಾಗುತ್ತದೆ. ತನ್ನಷ್ಟಕ್ಕೇ ಇರುತ್ತಿದ್ದ ಮಕ್ಕಳು ಕೂಡ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವರು. ಇಂತಹ ಶಿಬಿರಗಳು ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಕಂಡುಕೊಳ್ಳಲು ಸಾಧ್ಯ.
 ಶಿಬಿರಗಳಿಂದ ನಾಯಕತ್ವದ ಗುಣ, ಎಲ್ಲರೊಂದಿಗೆ ಬೆರೆತು ಬಾಳುವ ಸ್ವಭಾವ ಮಕ್ಕಳಲ್ಲಿ ಹುಟ್ಟಿಕೊಳ್ಳುತ್ತದೆ. ಸಭಾಕಂಪನ ದೂರವಾಗುತ್ತದೆ. ಇದು ಮಕ್ಕಳ ಚಿಂತನಾ ಶೈಲಿಯನ್ನು ಬದಲಿಸಿ, ಹೊಸತನಕ್ಕೆ ಕಾರಣವಾಗುವುದು. ಇದು ಚಿಣ್ಣರ ಮನಸ್ಸಿಗೆ ಮನೋರಂಜನೆ ಹಾಗೂ ಮತ್ತಷ್ಟು ಚುರುಕುತನ ನೀಡುತ್ತದೆ.
ಉದ್ದೇಶ
ಮಕ್ಕಳಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸದಭಿರುಚಿ ಹುಟ್ಟಿಸವುದು, ಮನೋವಿಕಾಸಕ್ಕೆ ಸಹಕಾರಿಯಾಗುವುದು ಬೇಸಗೆ ಶಿಬಿರಗಳ ಮುಖ್ಯ ಉದ್ದೇಶ. ವರ್ಷವಿಡೀ ಒಂದೋರೀತಿಯ ಶಿಕ್ಷಣ ಕ್ರಮದಿಂದ ವಿದ್ಯಾರ್ಥಿಗಳು ಹೊರಬರಲಿ. ಅವರಿಗೆ ಸ್ವಲ್ಪ ಫ್ರೀನೆಸ್ ದೊರೆಯಲಿ ಎಂದು ಬೇಸಗೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಈ ರಜೆಯ ಸಮಯವನ್ನು ಮಕ್ಕಳು ವೀಡಿಯೋಗೇಮ್, ಟಿ.ವಿ., ಕಂಪ್ಯೂಟರ್ಗಳ ಮುಂದೆಯೆ ಕಳೆಯದಂತೆ ಮಾಡುವುದು, ಮನಸ್ಸಿಗೆ ಮತ್ತಷ್ಟು ಚುರುಕುತನ ನೀಡುವುದು ಬೇಸಗೆ ಶಿಬಿರಗಳ ಗುರಿಯಾಗಿದೆ. ಮಕ್ಕಳು ಆಟವಾಡುತ್ತಾ ಕಲಿಯುವಂತಾಗಲು ಇಂತಹ ಶಿಬಿರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಆಯೋಜಿಸದೆ ಪರಿಸರದ ಮಡಿಲಲ್ಲಿ ಏರ್ಪಡಿಸಲಾಗುತ್ತದೆ. ಇದರಿಂದ ಪ್ರಕೃತಿಯೊಂದಿಗಿನ ಮಕ್ಕಳ ಭಾಂದವ್ಯವು ವೃದ್ಧಿಸುವುದು. ಜೀವನಾಸುಭವವನ್ನು ಹೆಚ್ಚಿಸುತ್ತಾ, ಮಕ್ಕಳ ಮಾನಸಿಕ ಜಡತ್ವವನ್ನು ದೂರೀಕರಿಸಿ, ನಿರಂತರ ಕ್ರೀಯಾಶೀಲರನ್ನಾಗಿಸುವುದೇ ಇಂತಹ ಶಿಬಿರಗಳ ಧ್ಯೇಯ.
ವಿಭಿನ್ನ ರೀತಿಯ ಶಿಬಿರ
ಮಕ್ಕಳಿಂದ ಮಕ್ಕಳಿಗೆ ಅಭಿರುಚಿ, ಆಸಕ್ತಿಗಳಲ್ಲಿ ಭಿನ್ನತೆ ಇದೆ. ಹಾಗಿಯೇ ಇಂದು ವಿವಿಧ ರೀತಿಯ ಬೇಸಗೆ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಹೆತ್ತವರು ತಮ್ಮ ಮಕ್ಕಳ ಬಯಕೆಗಳಿಗೆ ಅನುಗುಣವಾದ ಶಿಬಿರಗಳಿಗೆ ಅವರನ್ನು ಸೇರಿಸಬಹುದು. ಸಾಂಸ್ಕೃತಿಕ ಚಟುವಟಿಕೆ, ಸಾಹಸ ಕ್ರೀಡೆ, ಕರಕುಶಲ ವಸ್ತುಗಳ ತಯಾರಿ, ಚಿತ್ರಕಲೆ, ವ್ಯಕ್ತಿತ್ವ ವಿಕಸನ, ನಾಯಕತ್ವ ಶಿಬಿರಗಳು ಇತ್ಯಾದಿ ಬೇರೆಬೇರೆ ವಿದಧ ಬೇಸಗೆ ಶಿಬಿರಗಳನ್ನು ಆಯೋಜಿಸುವುದು ಸಾಮಾನ್ಯವಾಗಿದೆ.
ಎಚ್ಚರ: ಮನೋವಿಕಾಸಕ್ಕೆ ಸಹಕಾರಿಯಾಗುವ, ಕ್ರಿಯಾಶೀಲ ಗುಣವನ್ನು ವೃದ್ಧಿಸುವ ಬೇಸಗೆ ಶಿಬಿರಗಳಾದರೆ ಮಕ್ಕಳ ಬೆಳವಣಿಗೆಗೆ ಪೂರಕ. ಆದರೆ ಇಂದು ಎಲ್ಲಾ ವಿಭಾಗಗಳಲ್ಲೂ ವ್ಯಾಪಾರೀ ದೃಷ್ಟಿಕೋನ ಬೇರೂರಿ ಇರುವುದರಿಂದ ಇಲ್ಲಿಯೂ ಅಂತಹ ಚಾಳಿ ಮುಂದುವರಿದಿದೆಯೇ? ಎಂಬ ಬಗ್ಗೆ ತಮ್ಮ ಮಕ್ಕಳನ್ನು ಕ್ಯಾಂಪ್ಗಳಿಗೆ ಸೇರಿಸುವ ಮೊದಲೇ ಎಚ್ಚರಿಕೆವಹಿಸುವುದು ಉತ್ತಮ.