‘‘ಪೆನ್ನು ಎಂಬ ಖಡ್ಗ ಹಿಡಿದು

ಪರೀಕ್ಷೆ ಎಂಬ ಯುದ್ಧದಲ್ಲಿ ಗೆದ್ದು ಬಾ !’’
ಇದು ಯಾವುದೇ ಹೋರಾಟ, ಪ್ರತಿಭಟನೆಯ ಘೋಷಾ ವಾಕ್ಯವಲ್ಲ. ವಿದ್ಯಾರ್ಥಿಗಳು ಶಾಲೆಗೆ ವಿದಾಯ ಕೋರುವ ಸಂದರ್ಭ ಸಹಪಾಠಿಗಳು ಶುಭ ಹಾರೈಸುವ ನುಡಿ ಮುತ್ತು. ಜನವರಿ - ಫೆಬ್ರವರಿ - ಮಾರ್ಚ್ ಎಂದರೆ ಶೈಕ್ಷಣಿಕ ವರ್ಷದ ಕೊನೆಯ ತಿಂಗಳುಗಳು. ಹಿರಿಯ ವಿದ್ಯಾರ್ಥಿಗಳು ಶಾಲೆಗೆ, ಸಹಪಾಠಿಗಳಿಗೆ ವಿದಾಯ ಹೇಳಲು ಸಜ್ಜಾಗುವ ಸಮಯ. ಶಾಲೆಯೊಂದಿಗಿನ ಹಲವಾರು ವರ್ಷಗಳ ಒಡನಾಟ, ಶಿಕ್ಷಕರು ಮತ್ತು ಸಹಪಾಠಿಗಳ ಜತೆಗಿನ ಬಾಂಧವ್ಯ ಇನ್ನು ಅವರಿಗೆ ನೆನಪು ಮಾತ್ರ. ಇಂತಹ ಭಾವನಾತ್ಮಕ ಸಂಬಂಧದ ಸವಿ ನೆನಪಿಗಾಗಿ ವಿದ್ಯಾರ್ಥಿಗಳು ಆಟೋಗ್ರಾಫ್ ಬರೆಯಿಸಿಕೊಳ್ಳುವುದು ಸಾಮಾನ್ಯ.
ಸವಿಸವಿ ನೆನಪು ಸಾವಿರ ನೆನಪು.....
ಹೌದು ಆಟೋಗ್ರಾಫ್ ಒಂದು ನೆನಪುಗಳ ಬುತ್ತಿ. ಆಟೋಗ್ರಾಫ್ ಪುಸ್ತಕದ ಒಂದೊಂದು ಪುಟಗಳು ಬದುಕಿನಲ್ಲಿ ಗತಿಸಿದ ಹಲವಾರು ಸಂಗತಿಗಳತ್ತ ನಮ್ಮ ಮನಸ್ಸನ್ನು ಕೊಂಡೊಯ್ಯವುದು.
‘ನೆನಪುಗಳ ಮಾತು ಮಧುರ....’ ಎಂಬಂತೆ ನಮ್ಮ ಜೀವನದಲ್ಲಿ ನಡೆದ ಯಾವುದೋ ಘಟನೆ, ಅನುಭವಿಸಿದ ನೋವು, ಕಷ್ಟ -ನಷ್ಟ, ಮಾಡಿದ ಚೇಷ್ಟೆ ಇತ್ಯಾದಿಗಳು ಮುಂದೊಂದು ದಿನ ನೆನಪಾಗಿ ಉಳಿಯುತ್ತವೆ. ಅವು ಮಧುರ, ಮರೆಯಾರದ ನೆನಪುಗಳಾಗಿರುತ್ತವೆ. ಆಟೋಗ್ರಾಫ್ ಅಂತಹ ನೆನಪುಗಳು ಮರುಕಳಿಸುವಂತೆ ಮಾಡುತ್ತವೆ.
ಪ್ರತಿ ವರ್ಷದಂತೆ ಈ ಸಲವು ಆಟೋಗ್ರಾಫ್ ಬರೆಯುವ, ಬರೆಯಿಸಿಕೊಳ್ಳುವ ಸುಮಧುರ ಕ್ಷಣಗಳು ಮರುಕಳಿಸಿದೆ. ಶಾಲಾ -ಕಾಲೇಜುಗಳಲ್ಲಿ ಈಗ ನೋಟ್ಸ್ ಪುಸ್ತಕಗಳಿಗಿಂತ ಆಟೋಗ್ರಾಫ್ ಬುಕ್ಗಳೇ ಮಹತ್ವ ಪಡೆದಿವೆ. ತುಂಬಾ ಆತ್ಮೀಯರ ಆಟೋಗ್ರಾಫ್ ಪುಸ್ತಕವನ್ನು ಶಾಲೆಯಲ್ಲದೆ ಮನೆಗೆ ಕೊಂಡೊಯಿದ್ದು ಬಹಳ ವಿಶಿಷ್ಟವಾಗಿ ಬರೆಯುವವರೂ ಇದ್ದಾರೆ.
ವಿಶೇಷ ವಿನ್ಯಾಸ
ಕೆಲವರು ಯಾವುದೊಂದು ಡೈರಿಯನ್ನು ಆಟೋಗ್ರಾಫ್ ಬರೆಯಲು ಬಳಸಿದರೆ ಮತ್ತೆ ಕೆಲವರು ಅಂಗಡಿಗಳಲ್ಲಿ ಸಿಗುವ ಬಣ್ಣ ಬಣ್ಣದ ಡಿಸೈನ್ಗಳಿಂದ ಕೂಡಿದ ಆಟೋಗ್ರಾಫ್ ಖರೀದಿಸಿ ಬಳಸುವರು. ಕೆಲವರು ಆಟೋಗ್ರಾಫ್ನ ಅಲಂಕಾರ, ವಿನ್ಯಾಸಕ್ಕೆ ಬಹಳಷ್ಟು ವೆಚ್ಚ ಮಾಡುತ್ತಾರೆ. ಅಂತಹವರ ಆಟೋಗ್ರಾಫ್ ಪುಸ್ತಕಗಳು ವಿಶೇಷ ವಿನ್ಯಾಸ, ವಿವಿಧ ನಟ-ನಟಿಯರ, ಪ್ರಾಣಿ -ಪಕ್ಷಿಗಳ ಚಿತ್ರ, ಕಾರ್ಟೂನ್ ಚಿತ್ರ, ಹೊಳೆಯುವ ಬಣ್ಣ -ಬಣ್ಣದ ಶಾಯಿ ಪೆನ್ನುಗಳ ಬರಹ, ಮಹಾತ್ಮರ ಮಾತು, ಹೃದಯದ ಸಂಕೇತ, ಧಾರ್ಮಿಕ ಚಿಹ್ನೆ ಇತ್ಯಾದಿಗಳಿಂದ ಆಕರ್ಷಣೀಯವಾಗಿರುತ್ತವೆ. ಮತ್ತೆ ಕೆಲವು ಸರಳವಾಗಿದ್ದು, ಉತ್ತಮ, ಮನ ಮುಟ್ಟುವ ನುಡಿಮುತ್ತುಗಳಿಂದ ಕೂಡಿರುತ್ತವೆ. ಆಟೋಗ್ರಾಫ್ ಪುಸ್ತಕಗಳ ವಿನ್ಯಾಸಕ್ಕೆ ಗಂಟೆ ಗಟ್ಟಲೆ ಸಮಯ ವ್ಯಯಿಸುವವರೂ ಇದ್ದಾರೆ.
ಆಟೋಗ್ರಾಫ್ ಬರೆಯುವವರಲ್ಲಿಯೂ ಎರಡು ವಿಧದವರಿದ್ದಾರೆ. ಕೇವಲ ಶುಭಹಾರೈಕೆಗಳನ್ನು ಮಾತ್ರ ಬರೆಯುವವರು ಒಂದು ವಿಧ. ಮತ್ತೆ ಕೆಲವರು ಆಟೋಗ್ರಾಫ್ ನೀಡಿದ ವ್ಯಕ್ತಿಯೊಂದಿಗಿನ ತನ್ನ ಒಡನಾಟ, ಸಂಬಂಧ, ಒಟ್ಟಿಗೆ ಮಾಡಿದ ಕೆಲವೊಂದು ಚೇಷ್ಟೆ ಇತ್ಯಾದಿಗಳ ಬಗ್ಗೆ ಪುಟಗಟ್ಟಲೆ ಬರೆಯುವುದು ಹಾಗೂ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸುವವರು ಇದ್ದಾರೆ.
ಮೊಬೈಲ್, ಅಂತರ್ಜಾಲದ ಮೊಡಿ
ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ದೂರವಾಣಿ, ಅಂತರ್ಜಾಲದಂತಹ ಅತ್ಯಾಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ವಿದ್ಯಾರ್ಥಿಗಳು ಶಾಲಾ -ಕಾಲೇಜುಗಳಿಗೆೆ ವಿದಾಯ ಹೇಳಿದರೂ ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ನಿಕಟ ಸಂಪರ್ಕದಿಂದಿರಲು ಸಾಧ್ಯವಿದೆ. ಇದರಿಂದ ಹಿಂದಿನ ಕಾಲದಂತೆ ಆಟೋಗ್ರಾಫ್ ಬಿಡಿಸಿ ಅನಂತರವಷ್ಟೇ ಸಹಪಾಠಿಗಳ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇಂದಿಲ್ಲ. ಹಾಗಾಗಿ ಆಟೋಗ್ರಾಫ್ ಬರೆಯಿಸುವುದು, ಬರೆಯುವುದು ಇಂದೊಂದು ಫ್ಯಾಶನ್ ಆಗಿದೆ.
ಫೇಸ್ ಬುಕ್, ಆರ್ಕುಟ್ ಗೂಗಲ್ ಪ್ಲಸ್, ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ತಾಣಗಳ ಕ್ರೇಜಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಶಾಲಾ - ಕಾಲೇಜು ಬಿಟ್ಟರೂ ಸಹ ನಿರಂತರ ಸಂಪರ್ಕ ಸಾಧ್ಯವಾಗಿದೆ. ಇದರಿಂದ ಅವರಿಗೆ ಅಗಲುವಿಕೆ ಭಾವ ಅನುಭವಕ್ಕೆ ಬರುವುದಿಲ್ಲ. ಇದು ಕೂಡ ಶಾಲಾ - ಕಾಲೇಜುಗಳಲ್ಲಿ ಆಟೋಗ್ರಾಫ್ ಬಳಕೆ ಕಡಿಮೆಯಾಗಲು ಕಾರಣ ಎನ್ನಬಹುದು.
ಶಾಲಾ - ಕಾಲೇಜು ಜೀವನದಲ್ಲಿ ವಿದಾಯದ ದಿನಗಳೆಂದೇ ಗುರುತಿಸಲ್ಪಟ್ಟಿರುವುದು ಏಳು, ಹತ್ತನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ಕೊನೆಯ ವರ್ಷ. ಏಳು, ಹತ್ತನೇ ತರಗತಿ, ಪಿಯುಸಿ ಕೊನೆಯ ವರ್ಷದ ವಿದ್ಯಾರ್ಥಿಗಳಲ್ಲಿ ಆಟೋಗ್ರಾಫ್ ಕ್ರೇಜಿ ಈ ವರ್ಷವೂ ಜೋರಾಗಿದೆ. ಆದರೆ ಇಂದು ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಇದು ಅಷ್ಟಾಗಿ ಕಂಡುಬರುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ