ಉಪಯೋಗಿಸಿದ ಯಾವುದೇ ಹಾಳೆ ಅಥವಾ ಖಾಲಿ ಕಾಗದವೇ ಇರಬಹುದು ಅದನ್ನು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಹಾಕಬೇಕೆಂದಿಲ್ಲ. ಬದಲಾಗಿ ವಿವಿಧ ರೀತಿಯಲ್ಲಿ ಕತ್ತರಿಸಿ ಅವುಗಲ್ಲಿ ಬೇರೆ ಬೇರೆ ಕಲಾಕೃತಿಗಳನ್ನು ರಚಿಸಬಹುದು. ಇದು ಭಾರತದ ಪುರಾತನ ಕಲಾಪ್ರಕಾರಗಳಲ್ಲಿ ಒಂದು. ಕಾಗದವನ್ನು ಚಿತ್ತಾಕರ್ಷಕವಾಗಿ ಕತ್ತರಿಸುವ ಈ ಕಲೆಗೆ ‘ಸಾಂಝಿ’ ಎನ್ನುತ್ತಾರೆ.ಸಾಂಝಿ ಕಲೆಯಲ್ಲಿ ಬಣ್ಣ, ಕುಂಚಗಳ ಹಂಗಿಲ್ಲದೆ ಕತ್ತರಿ, ಚಾಕುಗಳನ್ನು ಬಳಸಿ ಸುಂದರವಾದ ಆಕೃತಿಗಳನ್ನು ರಚಿಸಸಲಾಗುತ್ತದೆ. ಇದು ಕಲಾವಿದನ ಕೈಚಳಕ, ನೈಪುಣ್ಯಕ್ಕೆ ಸಾಕ್ಷಿ. ಇದರಲ್ಲಿ ಹೆಚ್ಚಿನ ದೈಹಿಕ ಶ್ರಮದ ಬಳಕೆಯಿಲ್ಲ. ಬದಲಾಗಿ ಕಲಾಗರನ ಸೃಜನಶೀಲ ಗುಣ, ಚಾಣಾಕ್ಷತನ ಹಾಗೂ ಚಾಕಚಕ್ಯತೆ ವ್ಯಕ್ತವಾಗುತ್ತದೆ.
ಭಕ್ತಿ ಮಾರ್ಗದ ಕೊಡುಗೆ
ಹಬ್ಬ ಹರಿದಿನಗಳ ಸಂದರ್ಭ ದೇವಾಲಯಗಳಲ್ಲಿ, ಕೆಲವು ಮನೆಗಳ ಮುಂದೆಯೂ ಇವುಗಳೇ ವಿಶೇಷ ಆಕರ್ಷಣೆ. ‘ಸಾಂಝಿ’ಯಲ್ಲಿ ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸುವ ಕಲಾಕೃತಿಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದರು. ಈ ಕಲೆ ಕೇವಲ ಉತ್ತರ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ದಕ್ಷಿಣದ ಕೇರಳ, ಕರ್ನಾಟಕಗಳಲ್ಲಿಯೂ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.ವಿದ್ಯಾವಂತರಾಗಿರಬೇಕಿಲ್ಲ
ಸಾಂಝಿ ಕಲಾವಿದರಾಗಲು ಯಾವುದೇ ಶಾಲೆ, ಕಾಲೇಜುಗಳಲ್ಲಿ ಓದಿರಬೇಕಿಲ್ಲ. ಇದು ವ್ಯಕ್ತಿಯ ಆಸಕ್ತಿ, ಚಿಂತನೆ ಮತ್ತು ಕೈಚಳಕವನ್ನು ಅವಲಂಭಿಸಿದೆ. ಎಂಥವರಿಗೂ ಇದನ್ನು ಸುಲಭವಾಗಿ ಅಭ್ಯಸಿಸಬಹುದು. ಈ ಕಲೆಯನ್ನು ಯಾವುದೇ ಒಂದು ವರ್ಗ ಅಥವಾ ಜನಾಂಗಕ್ಕೆ ಸೇರಿದವರೇ ಅಭಿವೃದ್ಧಿಪಡಿಸಿರುವುದಲ್ಲ. ಇದು ಜನಪದ ಕಲೆಯಾಗಿದ್ದು, ಒಬ್ಬರಿಂದೊಬ್ಬರಿಗೆ ಕಲಿಸಲ್ಪಟ್ಟು, ಮುಂದುವರಿದುಕೊಂಡು ಬಂದಿದೆ.ವಿವಿಧ ರಾಷ್ಟ್ರಗಳಲ್ಲಿ ‘ಸಾಂಝಿ’
ಕಲೆಯು ಆಯಾ ದೇಶಗಳ ಸಂಸ್ಕೃತಿಯ ಪ್ರತೀಕ. ಭಾರತದ ಜನಪದ ಕಲೆಯೆಂದೇ ಗುರುತಿಸಲ್ಪಟ್ಟಿರುವ ‘ಸಾಂಝಿ’ಯನ್ನು ಹೋಲುವ ಅನೇಕ ಕಲಾಪ್ರಕಾರಗಳು ಹಲವಾರು ದೇಶಗಳಲ್ಲಿ ಕಾಣಬಹುದು. ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿವೆ. ಚೀನಾ ಹಾಗೂ ಜಪಾನ್ಗಳಲ್ಲಿ ‘ಕಿರಿ-ಗಾಮಿ’, ‘ಕಿಪಿ-ಇ’, ‘ಮನ್-ಕಿರಿ’, ‘ಸೆನ್-ಶಿ’, ‘ಜಿಯಾನ್-ಝಿ’ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿವೆ. ಪೋಲ್ಯಾಂಡ್ನಲ್ಲಿ ‘ವಿಚಿನಾನಿಕಿ’, ಸ್ಪೇನ್ನಲ್ಲಿ ‘ಆಪೆಲ್ ಪಿಕಡೊ’ ಫ್ರಾನ್ಸ್ನಲ್ಲಿ ‘ಡೆಕೋಪರ್’, ಅಮೇರಿಕಾದಲ್ಲಿ ‘ಪೆಪಿಟೋಮನಿ’ ಎಂಬ ಹೆಸರಿನಲ್ಲಿ ಈ ಕಲೆ ಪ್ರಚಲಿತದಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ