ಶುಕ್ರವಾರ, ಜೂನ್ 15, 2012

ಮೀಸೆ ಪುರಾಣ!


ಗಡ್ಡ, ಮೀಸೆಗಳು ಪುರುಷತ್ವದ ಲಕ್ಷಣ. ಗಂಡಸರ ಮೂಗು ಮತ್ತು ಬಾಯಿಯ ಮಧ್ಯದಲ್ಲಿ ಬೆಳೆಯುವ ಕೂದಲುಗಳ ಸಮೂಹಕ್ಕೆ ‘ಮೀಸೆ’facebook ಎಂದು ಕರೆಯುಲಾಗುತ್ತದೆ. ಗಂಡು ಮಕ್ಕಳು ಯವ್ವನಕ್ಕೆ ಕಾಲಿಡುತ್ತಿದ್ದಂತೆ ಅವರ ಮುಖದಲ್ಲಿ ಗಡ್ಡ, ಮೀಸೆ ಬೆಳೆಯಲಾರಂಭಿಸುತ್ತದೆ. ಗಂಡು ಮಕ್ಕಳು ಯುವಕರಾಗುತ್ತಿರುವುದರ ಸಂಕೇತ ಮೀಸೆ ಚಿಗುರುವುದು. ಬೆಳೆಯುತ್ತಿರುವ ಮಕ್ಕಳಿಗೆ ತಮ್ಮ ಅಪ್ಪನೇ ‘ರೋಲ್ ಮೊಡೆಲ್’ ಆದ್ದರಿಂದ ತಂದೆಯಂತೆ ಮೀಸೆ ಬಿಡಲು ಅಥವಾ ತೆಗೆಯಲು ಪ್ರಾರಂಭಿಸುತ್ತಾರೆ.
ಹಿಂದಿನ ಕಾಲದಲ್ಲಿ ಮೀಸೆ ಎಂಬುದು ಯಜಮಾನಿಕೆ, ಶ್ರೀಮಂತಿಕೆ, ಅಧಿಕಾರದ ಸಂಕೇತವಾಗಿತ್ತು. ರಾಜರು, ಮಂತ್ರಿಗಳು, ಸೇನಾ ಅಧಿಕಾರಿಗಳು, ಸೈನಿಕರು, ಪಾಳೇಗಾರರು, ಜಮೀದ್ದಾರರು, ಸಾಮಾಜದಲ್ಲಿರುವ ಗಣ್ಯವ್ಯಕ್ತಿಗಳು ತಮ್ಮಲ್ಲಿರುವ ಹಣ-ಅಂತಸ್ತು, ಅಧಿಕಾರಕ್ಕೆ ತಕ್ಕಂತೆ ಮೀಸೆ ಬೆಳೆಸಿಕೊಳ್ಳುತ್ತಿದ್ದರು. ಅಂಥವರ ಮೀಸೆ ನೋಡಿಯೇ ಸಮಾಜದಲ್ಲಿ ಅವರ ಸ್ಥಾನ-ಮಾನ ಹೇಗಿತ್ತು ಎಂಬುದನ್ನು ತಿಳಿಯಬಹುದಾಗಿತ್ತು. ಜಗಜಟ್ಟಿಗಳು, ಕುಸ್ತಿಪಟುಗಳು ಕೂಡ ಮೀಸೆ ಬೆಳೆಸುತ್ತಿದ್ದರು. ಜನಸಾಮಾನ್ಯರು ಹಿಂದಿನ ಕಾಲದಲ್ಲಿ ಮೀಸೆ ಇಟ್ಟುಕೊಳ್ಳತ್ತಿರಲಿಲ್ಲ.
ಹಿಂದೆ ಮೀಸೆಗೆ ಬಹಳಷ್ಟು ಗೌರವವಿತ್ತು. ಕೆಲವೊಂದು ಸಂದರ್ಭಗಳಲ್ಲಿ ಮೀಸೆಯನ್ನು ಉದ್ದೇಶಿಸಿ ಸವಾಲೆಸೆಯುತ್ತಿದ್ದರು. (ಉದಾಹರಣೆಗೆ ಮೀಸೆ ಇದ್ದಗಂಡಸಾದರೆ ಬಾರೋ) ಮೀಸೆ ತಮ್ಮ ಗೌರವದ ಸಂಕೇತ ಆದ್ದರಿಂದ ಬೆಟ್ ಕಟ್ಟಲು ಕೈಯಲ್ಲಿ ಹಣವಿಲ್ಲದಿದ್ದರೆ ‘ಸೋತ್ರೆ ಮೀಸೆ ಬೋಳಿಸುತ್ತೇನೆ’ ಅನ್ನುವವರೂ ಇದ್ದರು. ಕೆಲವೊಂದು ಸಂದರ್ಭಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಕ್ಕಾಗಿ, ಅವಮಾನ ಮಾಡುವುದಕ್ಕಾಗಿ ಮೀಸೆಯನ್ನು ಬಲಿಕೊಡುತ್ತಿದ್ದರು. ಅದು ಹೇಗೆಂದರೆ ಅರ್ಧ ಮೀಸೆ ಬೋಳಿಸಿ ಊರಿನಲ್ಲಿ ಮೆರವಣಿಗೆ ಮಾಡೋದು ಇತ್ಯಾದಿ.
 ಇಂದು ಕಾಲ ಬದಲಾಗಿದೆ. ಜನಸಾಮಾನ್ಯರು ಕೂಡ ಮೀಸೆ ಬೆಳೆಸುತ್ತಾರೆ. ಮೀಸೆಯಿಂದ ಆತ ಸ್ಥಿತಿವಂತ, ಗಣ್ಯವ್ಯಕ್ತಿ ಎಂದು ಗುರುತಿಸಲು ಸಾಧ್ಯವಿಲ್ಲ. ಹಿಂದಿನವರಂತೆ ದೊಡ್ಡಗಾತ್ರದ ಮೀಸೆಗಳು ಇಂದು ಇಲ್ಲವಾಗಿದೆ. ಬದಲಾಗಿ ಟ್ರಿಮ್ ಆದ ಸಣ್ಣ ಗಾತ್ರದ ಮೀಸೆಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬರುವ ಹಲವಾರು ಪಾತ್ರಗಳು ನಾನಾ ರೀತಿಯ ಮೀಸೆಗಳನ್ನು ಬೆಳೆಸಿಕೊಂಡಿರುತ್ತವೆ. ಅವುಗಳನ್ನು ನೋಡಿದ ಜನ ಮುಖ್ಯವಾಗಿ ಯುವಕರು ತಮ್ಮ ನೆಚ್ಚಿನ ಹೀರೋಗಳು ಬೆಳೆಸಿದಂತೆ ಮೀಸೆ ಬೆಳೆಸಿಕೊಳ್ಳುವವರೂ ಇದ್ದಾರೆ.
ಶ್ರೀಮಂತರು, ಅವರ ಮಕ್ಕಳು, ಸಮಾಜದಲ್ಲಿನ ಗಣ್ಯವ್ಯಕ್ತಿಗಳು, ಚಿತ್ರನಟರು, ಕ್ರಿಡಾಪಟುಗಳು ಹೆಚ್ಚಾಗಿ ಕ್ಲೀನ್ ಶೇವ್ ಮಾಡುವವರೆ ಅಧಿಕ. ಯಾಕೆಂದರೆ ಮೀಸೆ ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಮೀಸೆ ದಿನೇ ದಿನೇ ಬೆಳೆಯುತ್ತಿರುತ್ತದೆ. ವಾರಕ್ಕೆ 2 ಭಾರಿಯಾದರೂ ಅದನ್ನು ಟ್ರಿಮ್ ಮಾಡ್ಕೊಂಡರೆ ಮಾತ್ರ ಚೆನ್ನಾಗಿ ಕಾಣಿಸುತ್ತದೆ. ಟ್ರಿಮ್ ಮಾಡುವಾಗ ಅತಿಯಾ ಜಾಗೃತೆ ಅಗತ್ಯ. ಇತ್ತ ದಪ್ಪ-ಅತ್ತ ತೆಳು, ಅತ್ತ ಉದ್ದ- ಇತ್ತ ಗಿಡ್ಡ ಆದರೆ ಮತ್ತೆ ಸರಿಪಡಿಸುವುದು ತುಂಬಾ ಕಷ್ಟ. ಇಂತಹ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಬದಲು ಕ್ಲೀನ್ ಶೇವ್ ಮಾಡುವುದೇ ಉತ್ತಮ ಎನ್ನುವವರೇ ಇಂದು ಹೆಚ್ಚು. ಅಲ್ಲದೆ ವಯಸ್ಸಾದಂತೆ ಮೀಸೆ ಅರ್ಧ ಕಪ್ಪು- ಅರ್ಧ ಬಿಳಿ ಆಗುವುದಕ್ಕೆ ಮೊದಲೇ ಕ್ಲೀನ್ ಶೇವ್ ಮಾಡುವುದು ಒಳ್ಳೆಯದು ಎನ್ನೋರು ಇದ್ದಾರೆ.
ಮೀಸೆ ಇರುವವರಿಗೆ ಕೊಲವೊಂದು ವಿಶೇಷ ಹವ್ಯಾಸಗಳಿರುತ್ತವೆ. ಅವುಗಳೆಂದರೆ ಆಗ್ಗಾಗೆ ಕನ್ನಡಿಯಲ್ಲಿ ತಮ್ಮ ಮೀಸೆಯ ಚಂದ ನೋಡುತ್ತಾ, ಬಾಚುವುದು, ಮೀಸೆ ಮೇಲೆ ಕೈಯಾಡಿಸುತ್ತಿರುವುದು, ಮೀಸೆಯ ಒಂದು ತುದಿಯನ್ನು ಹಿಡಿದು ತಿರುವುದು, ಮೀಸೆಯನ್ನು ಎಳೆದು ಕಚ್ಚುತ್ತಿರುವುದು ಇತ್ಯಾದಿ. ಮೀಸೆ ಕೇವಲ ಮನುಷ್ಯರಿಗೆ ಮಾತ್ರ ಬರುವಂತದಲ್ಲ ಇತರ ಪ್ರಾಣಿಗಳಿಗೂ ಬರುತ್ತವೆ. ಮನುಷ್ಯರಲ್ಲಿ ಪುರುಷರಿಗೆ ಮಾತ್ರ ಮೀಸೆ ಬರುತ್ತದೆ. ಅಲ್ಲದೆ ಕೆಲವೊಂದು ನಪುಂಸಕರಿಗೂ ಮೀಸೆ ಇರುತ್ತದೆ. ಪ್ರಾಣಿಗಳಲ್ಲಿ ಗುಂಡು-ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲದಕ್ಕೂ ಮೀಸೆ ಬರುತ್ತವೆ.
ಮೀಸೆಗೆ ಸಂಬಂಧಿಸಿದಂತೆ ಹಲವಾರು ಗಾದೆ, ಹಾಡು, ಅಡುಮಾತು, ನುಡಿಮುತ್ತು ಇತ್ಯಾದಿಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ‘ಜಟ್ಟಿ ಬದ್ರೂ ಮೀಸೆಗೆ ಮಣ್ಣಾಗಿಲ್ಲ’, ‘ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ’, ‘ದೋಸೆ ತಿನ್ನುವಾಗ ಮೀಸೆ ಮುರಿದ ಹಾಗೆ’, ‘ರಾಜನಿಗೆ ಮೀಸೆ ಕೈಹೋದರೆ ಸಭೆ ಕಾಣುವುದಿಲ್ಲ’, ‘ಮೀಸೆ ಬಂದವನಿಗೆ ದೇಶ ಕಾಣಲ್ಲ’, ‘ಭಾಷೇನೂ ಇಲ್ಲ ಮೀಸೇನೂ ಇಲ್ಲ’, ‘ಮೀಸೆ ಚಿಗುರಿದಾಗ ನೆಲ ಕಾಣಲ್ಲ’, ‘ಮೀಸೆ ತುದಿಯಲ್ಲಿ ನಗು ನೋಡು’, ‘ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು....’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ....’, ‘ಮೀಸೆ ತಿರುವಿ ಕುಣಿದವರೆಲ್ಲ ಮಣ್ಣಾದರು ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು....’ ಮುಂತಾದವುಗಳು. ಮಲಯಾಳದಲ್ಲಿ ‘ಮೀಸೆ ಮಾಧವನ್’ ಎನ್ನುವ ಸಿನೆಮಾ ಕೂಡ ಬಂದಿದೆ. ಡಾ ವಿಷ್ಣುವರ್ಧನ್ ಅವರ ಯಜಮಾನ, ಸಿಂಹಾದ್ರಿಯ ಸಿಂಹ, ಸೂರ್ಯವಂಶ, ಆಪ್ತರಕ್ಷಕ ಮುಂತಾದ ಸಿನೆಮಾಗಳಲ್ಲಿ ನಾಯಕನ ಮೀಸೆ ಆಕರ್ಷಣೆಯ ಕೇಂದ್ರವಾಗಿತ್ತು. ಇತ್ತೀಚೆಗೆ ಬಂದ ವೀರಪರಂಪರೆ ಸಿನೆಮಾದಲ್ಲಿ ಅಂಬರೀಶ್ ಮೀಸೆ ಜನರ ಗಮನ ಸೆಳೆದಿತ್ತು.
ಮೀಸೆಯಿಂದಲೇ ಹೆಸರು ಪಡೆದವರು
ತಮ್ಮ ಮೀಸೆಯಿಂದಲೇ ಪ್ರಸಿದ್ಧರಾದವರು, ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದವರು ಹಲವಾರು ಮಂದಿ ಇದ್ದಾರೆ. ಮುಖ್ಯವಾಗಿ ಕಾಡುಗಳ್ಳ ವೀರಪ್ಪನ್, ನಕ್ಕೀರ ಗೋಪಾಲನ್, ಹಿಟ್ಲರ್, ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್, ಮಾಜಿ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ವೆಂಗ್ಸರ್ಕಾರ್, ಡೇವಿಡ್ ಬೂನ್, ಕ್ಲೈವ್ ಲಾಯ್ಡಿ ಹಾಗೂ ಮೀಸೆ-ಗಡ್ಡ ಮೂಲಕ ಬ್ರಿಜೇಶ್ ಪಟೇಲ್ ಮೊದಲಾದವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಹೋಮ್ಗಾರ್ಡ್ ಅಶೋಕ ಎನ್ನುವವರು ಕೂಡ ತಮ್ಮ ದೊಡ್ಡದಾದ ಮೀಸೆಯಿದಂಲೇ ಗುರುತಿಸಲ್ಪಟ್ಟವರು. ಹಲವಾರು ಜನ ಸಾಧು-ಸಂತರು ಕೂಡ ಉದ್ದವಾದ, ದೊಡ್ಡದಾದ ಮೀಸೆ ಬೆಳೆಸಿ ಜನರ ಗಮನ ಸೆಳೆದಿದ್ದಾರೆ. ಅತೀ ಉದ್ದನೆಯ ಮೀಸೆಯ ಸರದಾರ ಭಾರತದ ಬಜನ್ಸಿನ್ಹ ಜುಲಾಸಿನ್ಹ ಗುರ್ಜಾರ್. ಆತನ ಮೀಸೆ 12 ಅಡಿ ಉದ್ದ, 6 ಇಂಚು ದಪ್ಪ ಇತ್ತು. ಆತನಿಗೆ ಈ ರೀತಿಯಾಗಿ ಮೀಸೆ ಬೆಳೆಸಲು 22 ವರ್ಷ ಬೇಕಾಗಿದೆಯಂತೆ. ಇದು 2004ರಲ್ಲಿ ವಿಶ್ವದಾಖಲೆ ಎನಿಸಿತ್ತು. ಹಲವಾರು ಜನ ಸಾಹಸಿಗಳು ತಮ್ಮ ಉದ್ದನೆಯ ಮೀಸೆಯಿಂದ ಭಾರ ಎತ್ತುವುದು, ವಾಹನ ಎಳೆಯುವುದು ಇತ್ಯಾದಿ ಸಾಹಸ ಪ್ರದರ್ಶಿಸುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ.
ಮೀಸೆಯ ವಿವಿಧ ನಾಮ
ಜನರು ಮೀಸೆಯನ್ನು ಅದರ ಆಕಾರ, ಗಾತ್ರಕ್ಕೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಪ್ರಮುಖವಾಗಿ ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಕಡ್ಡಿ ಮೀಸೆ, ಹುರಿ ಮೀಸೆ, ಬೆಕ್ಕಿನ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆ ಮೀಸೆ, ಫಿಲ್ಟರ್ ಮೀಸೆ, ಇತ್ಯಾದಿ. ಊರುಗಳು ಬದಲಾದಂತೆ ಮೀಸೆಯ ಹೆಸರುಗಳಲ್ಲಿ ಹಲವಾರು ಬದಲಾವಣೆಗಳನ್ನು ನೋಡಬಹುದು. ಈಗ ಮೀಸೆ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಯಾರೂ ಏನೂ ಅನ್ನೋಲ್ಲ. ಮೀಸೆ ಇವತ್ತು ಬೋಳಿಸಿದ್ರೆ ಇನ್ನು ಮೂರು ದಿನಗಳಲ್ಲಿ ಬೆಳೆಯುತ್ತೆ ಆದ್ದರಿಂದ ಅದರ ಬಗ್ಗೆ ಯಾರೂ ಚಿಂತೆ ಮಾಡೋಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ