ಭಾನುವಾರ, ಜೂನ್ 17, 2012

ಸ್ವಾತಂತ್ರ್ಯದ ತಪ್ಪು ಅರ್ಥೈಸುವಿಕೆ


ಸ್ವಾತಂತ್ರ್ಯವು ಸಂವಿಧಾನ ಮತ್ತು ಕಾನೂನಿನ ನಿರ್ಬಂಧಗಳನ್ನು ಹೊಂದಿದೆ ಹಾಗೂ ನ್ಯಾಯಾಂಗದ ರಕ್ಷಣೆಯನ್ನು ಹೊಂದಿದೆ. ಸ್ವಾತಂತ್ರ್ಯfacebook ಎಂದರೆ ಒಬ್ಬ ವ್ಯಕ್ತಿ ತನ್ನ ಹಕ್ಕುಗಳನ್ನು ಅನುಭವಿಸಿ, ಕರ್ತವ್ಯಗಳನ್ನು ನಿಭಾಯಿಸುವಾಗ ಇನ್ನೊಬ್ಬರ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ಗೌರವದಿಂದ ಕಾಣುವುದಾಗಿದೆ.
ಭಾರತದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಸಂವಿಧಾನದ 3ನೇ ಅಧ್ಯಾಯದಲ್ಲಿ 19ನೇ ವಿಯಿಂದ 22ನೇ ವಿಯವರೆಗೆ ಈ ಹಕ್ಕಿನ ಬಗ್ಗೆ ವಿವರಿಸಲಾಗಿದೆ. ಇದೊಂದು ಮೂಲಭೂತ ಹಕ್ಕು ಕೂಡಾ ಹೌದು. ಆದ್ಧರಿಂದ ನಾಗರಿಕರೆಲ್ಲರೂ ಈ ಹಕ್ಕಿನ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾದುದು ಅನಿವಾರ್ಯ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 63 ವರ್ಷಗಳೇ ಸಂದರೂ ಇಂದಿಗೂ ಸ್ವಾತಂತ್ರ್ಯ ಎಂಬ ಪದವನ್ನು ಸಮರ್ಪಕವಾಗಿ ಅರ್ಥೈಸಿಕೊಂಡವರ ಸಂಖ್ಯೆ ಬಹುವಿರಳ.
ವ್ಯಕ್ತಿಯು ತನ್ನ ಮನಸ್ಸಿಗೆ ತೋಚಿದ್ದನ್ನು ನಿರ್ಭಯವಾಗಿ ಮಾಡುವುದನ್ನು ಸ್ವಾತಂತ್ರ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ. ಆದರೆ ನನ್ನ ತೋಟದಲ್ಲಿ ಹೋಗಲು ನನಗೆ ಸ್ವಾತಂತ್ರ್ಯವಿದೆ ಎಂದು ಕೈ ಬೀಸಿಕೊಂಡು ಹೋದರೆ ನೋವಾಗುವುದು ನಮಗೆ. ವಾಸ್ತವವಾಗಿ ಒಬ್ಬ ವ್ಯಕ್ತಿಯು ತನಗನಿಸಿದಂತೆ ವರ್ತಿಸಲು ಸ್ವಾತಂತ್ರ್ಯವು ಅವಕಾಶ ಕೊಡುವುದಿಲ್ಲ, ಎಲ್ಲಾ ವಿಧದ ನಿರ್ಭಂದಗಳಿಂದ ಮುಕ್ತವಾದುದೆ ಸ್ವಾತಂತ್ರ್ಯ ಎಂದು ಅರ್ಥೈಸಲು ಸಾಧ್ಯವಿಲ್ಲ. ಅದನ್ನು ಸ್ವೇಚ್ಛೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಕವಿ ದಾ.ರಾ. ಬೇಂದ್ರೆ ಅವರು ತಮ್ಮ ಸ್ವಾತಂತ್ರ್ಯ ವರ್ಧಂತಿ ಎಂಬ ಕವಿತೆಯಲ್ಲಿ ‘‘ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರಾ’’ ಎಂದು ಹೇಳಿದ್ದಾರೆ. ಸ್ವೈರತ್ವ ಸಾಧನೆಗಾಗಿ ಈಗಿನ ಕೆಲವೊಂದು ರಾಜಕಾರಣಿಗಳು ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜಕೀಯದಲ್ಲಿ , ಸರಕಾರದ ಹುದ್ದೆಗಳಲ್ಲಿ ತಮ್ಮ ಸಂಬಂಧಿಕರಿಗೆ ಅವಕಾಶ ಒದಗಿಸಬೇಕೆಂದು ಪ್ರಯತ್ನಿಸುವುದು ಶೋಚನೀಯ ವಿಚಾರ.
ಸ್ವಾತಂತ್ರ್ಯದ ಮೂಲಭೂತ ಗರಿಷ್ಠತೆ ಕಾನೂನು. ಆದರೂ ಇಂದು ಸಮಾಜದಲ್ಲಿ ಸ್ವಾರ್ಥ, ಭ್ರಷ್ಟಾಚಾರ, ಸ್ವಾತಂತ್ರ್ಯದ ದುರ್ಬಳಕೆ ಇತ್ಯಾದಿ ಕಂಡುಬರಲು ಜನರಲ್ಲಿ ಅಜ್ಞಾನ, ನೈತಿಕ ಶಿಕ್ಷಣದ ಕೊರತೆ, ಅಹಂಕಾರಗಳೇ ಕಾರಣ. ಬೇಂದ್ರೆ ಅವರು ತಮ್ಮ ಇನ್ನೊಂದು ಕವನದಲ್ಲಿ ‘‘ಹಡೆದರಾಯ್ತೆ? ಪಡೆಯಬೇಕು ಪಡೆದವರಿಗೆ ಶಿಕ್ಷಣ’’ ಎಂದು ಹೇಳಿದ್ದಾರೆ. ಸ್ವಾತಂತ್ರ್ಯವು ಕೇವಲ ಕ್ರಮಬದ್ಧವಾದ ರಾಜ್ಯದಲ್ಲಿ ಮಾತ್ರ ಸಾಧ್ಯ. ಪ್ರೊ| ಶೀಲೆ ಅವರು ‘‘ಸ್ವಾತಂತ್ರ್ಯ ಎಂದರೆ ಎಲ್ಲೆ ಮೀರಿದ, ಸರಕಾರಕ್ಕೆ ವಿರೋಧವಾದುದು’’ ಎಂದಿದ್ದಾರೆ. ಸರಕಾರವನ್ನು ಟೀಕಿಸುವ ಸ್ವಾತಂತ್ರ್ಯ ಇದೆ ಎಂದು ಪ್ರತಿ ಪಕ್ಷದವರು ಪ್ರತಿಯೊಂದು ವಿಷಯಕ್ಕೂ ಆಡಳಿತ ಪಕ್ಷದವರನ್ನು ಟೀಕಿಸುತ್ತಾ, ಮುಷ್ಕರಗಳನ್ನು ನಡೆಸುತ್ತಾ, ಜನರ ಎದುರಿಗೆ ನಾವು ಒಳ್ಳೆಯವರೆಂದು ತೋರಿಸುತ್ತಾ, ಸ್ವಾರ್ಥಸಾಧನೆ ಮಾಡುವುದು ಸ್ವಾತಂತ್ರ್ಯದ ಅಪಾರ್ಥವಾಗುವುದು. ಬರ್ನರ ಪ್ರಕಾರ ‘‘ವ್ಯಕ್ತಿಯೊಬ್ಬನಿಗೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಹೊಂದಲು ಇರುವ ಅವಕಾಶವೆ ಸ್ವಾತಂತ್ರ್ಯ’’. ನನಗೆ ಸ್ವಾತಂತ್ರ್ಯವಿದೆ, ಸಾಮರ್ಥ್ಯವಿದೆ ಎಂದು ಭೂಗತ ದೊರೆಗಳಾಗಿ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವುದು, ಕಾನೂನು ಬಾಹೀರವಾಗಿರುತ್ತದೆ. ಮಹಾತ್ಮಾ ಗಾಂೀಜಿ ಅವರ ಪ್ರಕಾರ ‘‘ಸ್ವಾತಂತ್ರ್ಯವು ನಿರ್ಬಂಧಗಳ ಮುಕ್ತ ವಾತಾವರಣವಾಗಿರುವುದಿಲ್ಲ. ಆದರೆ ಅದು ಸ್ವಾತಂತ್ರ್ಯದ ಬೆಳವಣಿಗೆಯಲ್ಲಿರುತ್ತದೆ’’.
ಸಮಾಜದಲ್ಲಿ ಕೆಲವೊಂದು ಗಣ್ಯ ವ್ಯಕ್ತಿಗಳು ತಮ್ಮ ಮನೆಯಲ್ಲಿರುವ ಕೆಲಸದವರನ್ನು ಅಮಾನುಷವಾಗಿ ನೋಡಿಕೊಳ್ಳುವುದು, ಅವರ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೆ. ವಾಕ್ ಸ್ವಾತಂತ್ರ್ಯ ಇದೆ ಎಂದು ಮನ ಬಂದಂತೆ ಮಾತನಾಡುವ ಹಾಗಿಲ್ಲ. ಜನರು ಬೌದ್ಧಿಕ ಮತ್ತು ಪ್ರಯೋಗಾತ್ಮಕ ಸ್ವಾತಂತ್ರ್ಯವಿದೆ ಎಂದು ತಾನು ಹೊಂದಿರುವ ವಿಚಾರಧಾರೆಗಳನ್ನು ಇನ್ನೊಬ್ಬರ ಮೇಲೆ ಮಲತ್ಕಾರವಾಗಿ ಹೇರಲು ಸಾಧ್ಯವಿಲ್ಲ. ನಮಗೆ ಆಸ್ತಿಯ ಹಕ್ಕು ಇದೆ ಎಂದು ಅಕ್ರಮವಾಗಿ, ಕಾನೂನು ಬಾಹೀರವಾಗಿ ಆಸ್ತಿಯನ್ನು ಸಂಪಾದಿಸುವ ಹಾಗಿಲ್ಲ. ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಸ್ವಾತಂತ್ರ್ಯವಿದೆ. ಆದರೆ ಅಲ್ಲಿನ ಕಾನೂನು ನಿಯಮಗಳಿಗೆ ಬದ್ಧರಾಗಿರಬೇಕು. ನಮಗೆ ಸ್ವಾತಂತ್ರ್ಯವಿದೆ ಎಂದು ಎಷ್ಟೋ ಹೊತ್ತಿಗೆ ತರಗತಿಗೆ ಬರುವುದು ಹೋಗುವುದು, ಮಾಡಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ್ಯವಿದೆ ಎಂದು ನಮ್ಮ ಮನೆಯ ಟಿ.ವಿ., ರೇಡಿಯೋ ಅಥವಾ ಡಿವಿಡಿ ಇತ್ಯಾದಿಗಳನ್ನು ಗಟ್ಟಿಯಾಗಿ ಕೇಳುವಂತೆ ಇಟ್ಟರೆ ಅದರಿಂದ ಪಕ್ಕದ ಮನೆಯವರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗತ್ತದೆ. ಅದ್ದರಿಂದ ನಾವು ಸ್ವಾತಂತ್ರ್ಯ ಅನುಭವಿಸುವಾಗ ಎಚ್ಚರವಹಿಸಬೇಕಾದುದು ಅತ್ಯಗತ್ಯ. ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಇವು ಪರಸ್ಪರ ಪೂರಕವಾಗಿದ್ದರೆ ಅದು ಸರಿಯಾದ ಅರ್ಥ. ಒಂದಕೊಂದು ಮಾರಕವಾಗಿದ್ದರೆ ಅದು ಅಪಾರ್ಥ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ