ಭಾನುವಾರ, ಜೂನ್ 17, 2012

ಅಪರೂಪದ ಮುಳುಗು ತಜ್ಞ ಬಾಳೆಯಡ ಪ್ರಕಾಶ್


ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ ಎನ್ನುವುದು ಅಕ್ಷರಶಃ ಸತ್ಯ. ಕೆಲವರ ಪ್ರತಿಭೆಗಳು ಪ್ರಚಾರಕ್ಕಾಗಿ ಅಗತ್ಯಕ್ಕಿಂತಲೂ ವೈಭವೀಕರಣಗೊಂಡು ಸಮಾಜದಲ್ಲಿ ಸಾಕಾರಗೊಂಡರೆ, ಇನ್ನು ಪ್ರಚಾರವನ್ನೂ ಬಯಸದೆ, ಫಲಾಪೇಕ್ಷೆಗೂ ಆಸೆಪಡದೆ ತಮ್ಮ ಪ್ರತಿಭೆಗಳನ್ನು ತಮ್ಮ ಮನಸ್ಸಂತೋಷಕ್ಕಾಗಿ ಮಾತ್ರ ರೂಢಿಸಿಕೊಂಡು ಮೌನವಾಗಿ ಸಾಧನೆ ಮಾಡುತ್ತಾ ಎಲೆಮರೆಯ ಕಾಯಿಯಂತೆ ಉಳಿಯುವವರು ಇನ್ನೊಂದು ವರ್ಗ. ಅಂತಹ ಎಲೆಮರೆಯ ಕಾಯಿಯಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಡದೆ ತಮ್ಮದೇ ಆದ ಶೈಲಿಯಲ್ಲಿ ಮೌನವಾಗಿ ಸಮಾಜ ಸೇವೆಯಲ್ಲಿ ನಿರತರಾಗಿರುವವರೆಂದರೆ ಬಾಳೆಯಡ ಪ್ರಕಾಶ್.facebook
ಸಮೀಪದ ಅಜ್ಜಿಮುಟ್ಟ ಗ್ರಾಮದ ಬಾಳೆಯಡ ಕುಟುಂಬಕ್ಕೆ ಸೇರಿದ ಇವರ ನಿವಾಸ ಕಾವೇರಿ ನದಿ ತೀರದಲ್ಲಿ ಇರುವ ಕಾರಣದಿಂದಲೊ ಏನೋ ಈಜು ಬಾಲ್ಯದಿಂದಲೇ ಕರಗತ. ಈಜು ಎಂದರೆ ಇವರಿಗೆ ಬಲು ಅಚ್ಚುಮೆಚ್ಚು. ಮೀನಿನಷ್ಟೇ ಸಲೀಸು ಕೂಡ.
ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿ ಪ್ರವಾಹದಲ್ಲಿ ಆಚೆ-ಈಚೆ ನದಿ ದಾಟುವ ಸಾಹಸಿ. ಆಳದ ನೀರಿನಲ್ಲಿ ಹಲವು ನಿಮಿಷಗಳವರೆಗೆ ಮುಳುಗಿ ಮೇಲೇಳುವ ಎದೆಗಾರಿಕೆಯೂ ಇವರಿಗೆ ರೂಢಿಯಾಗಿದೆ. ಇವರು ಸ್ವಲ್ಪಮಟ್ಟಿಗೆ ಗುರುತಿಸಿಕೊಳ್ಳಲು ಕಾರಣವಾಗಿದ್ದು ಸಹ ಈ ಈಜುವಿಕೆ ಮತ್ತು ಮುಳುಗುವಿಕೆಯೆ. ಬೇಸಗೆಯಾಗಲಿ, ಮಳೆಗಾಲವಾಗಲಿ, ಚಳಿಯಾಗಲಿ ನಾಪೋಕ್ಲು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನದಿ, ಕೆರೆಗಳಲ್ಲಿ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಸಂಭವಿಸಿದರೆ, ಶವ ಮೇಲೆತ್ತುವ ಕಾಯಕಕ್ಕೆ ಬಾಳೆಯಡ ಪ್ರಕಾಶ್ ಹಾಜರು. ಯಾವುದೇ ಫಲಾಪೇಕ್ಷೆ ಪಡದೆ ನಿಷ್ಕಳಂಕ ಮನೋಭಾವದಿಂದ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಶ್ ಅವರಿಗೆ ಈಗ 43ರ ಹರೆಯ. ತಮ್ಮ 18ನೇ ವರ್ಷದಿಂದ 43 ವರ್ಷ ಪ್ರಾಯದವರೆಗಿನ ಅವಧಿಯಲ್ಲಿ ಅವರು ನದಿ, ಕೆರೆ ಹಾಗೂ ಬಾವಿಗಳಿಂದ ಮೇಲೆತ್ತಿರುವ ಒಟ್ಟು ಶವಗಳ ಸಂಖ್ಯೆ 42. ಇವರಿಗೆ ಶವ ಮೇಲೆತ್ತುವ ಕೆಲಸವೆಂದರೆ ನೀರು ಕುಡಿದಷ್ಟೇ ಸಲೀಸು. ಯಾವುದೇ ಅಂಜಿಕೆಯಿಲ್ಲದೆ ಈ ಕೆಲಸದಲ್ಲಿ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡಿರುವ ತೃಪ್ತಿ ಅವರದು.
ಈ ಕುರಿತು ಅವರ ಅಭಿಪ್ರಾಯ ಬಯಸಿದಾಗ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡ ಅವರು, ನದಿ, ಕೆರೆ ಹಾಗೂ ಬಾವಿಗೆ ಬಿದ್ದು ಸಂಭವಿಸುವ ಆಕಸ್ಮಿಕ ಅಥವಾ ಆತ್ಮಹತ್ಯೆಯಂತಹ ಸಾವು ಪ್ರಕರಣಗಳಲ್ಲಿ ಅವರ ಕುಟುಂಬಗಳು ನೋವು, ಆಘಾತ ಅನುಭವಿಸುತ್ತಿದ್ದರೆ, ಅವರ ಕುಟುಂಬ ವರ್ಗದವರಿಗೆ ಯಾವ ಸಾಂತ್ವನವೂ ಸಮಾಧಾನ ನೀಡದು. ಆಗ ನೀಡುವ ನೆರವಷ್ಟೆ ಕೊಂಚ ಸಮಾಧಾನ ತಂದೀತು. ನೀರಿನಿಂದೆತ್ತಿ ಶವವನ್ನು ದಡ ಸೇರಿಸಿ ನೆರವಾಗಲು ತಮಗೆ ಯಾವ ಹಿಂಜರಿಕೆ ಇಲ್ಲ; ಇದಕ್ಕಾಗಿ ಯಾವ ನಿರೀಕ್ಷೆಯನ್ನೂ ಇರಿಸಿಕೊಳ್ಳುತ್ತಿಲ್ಲ ಎನ್ನುತ್ತಾರವರು. ಅದನ್ನು ಯಾವ ಅಂಜಿಕೆ ಇಲ್ಲದೆ ನಿರ್ವಹಿಸುತ್ತಿರುವುದಾಗಿ ಪತ್ರಿಕೆಯೊಂದಿಗೆ ಹೇಳಿಕೊಂಡ ಅವರು, ನೊಂದವರಿಗೆ ನೆರವು ನೀಡಿದ ತೃಪ್ತಿ ಮಾತ್ರ ನನ್ನದು ಎನ್ನುತ್ತಾರೆ. ಹಲವು ಸಂದರ್ಭಗಳಲ್ಲಿ ಶವ ತೆಗೆಯಲು ಎರಡರಿಂದ ಮೂರು ಗಂಟೆಗಳವರೆಗೂ ನದಿ, ಕೆರೆಗಳಲ್ಲಿ ತಡಕಾಡಿದ ಪ್ರಸಂಗಗಳನ್ನು ಸ್ಮರಿಸಿಕೊಳ್ಳುವ ಅವರು, ಆದರೆ ಎಲ್ಲ ಪ್ರಕರಣಗಳಲ್ಲೂ ಯಶಸ್ವಿಯಾಗಿರುವ ಹೆಚ್ಚುಗಾರಿಕೆ ತಮ್ಮದು ಎನ್ನುತ್ತಾರೆ.
ಬಾಳೆಯಡ ದಿವಂಗತ ಲಕ್ಷ್ಮಣ ಹಾಗೂ ಚೋಂದವ್ವ ದಂಪತಿಯ ಪುತ್ರರಾಗಿರುವ ಪ್ರಕಾಶ್, ಸಣ್ಣ ಕಾಫಿ ಬೆಳೆಗಾರರೂ ಹೌದು. ಮಳೆಗಾಲದಲ್ಲಿ ಕೃಷಿಗೆ ಅನುಕೂಲವಾಗುವ ಕೊಡೆಯಾಗಿ ಬಳಕೆಯಾಗುವ ಗೊರಗು ಹೆಣೆಯುವಿಕೆಯನ್ನೂ ಬಲ್ಲರು. ಬಡಗಿ ಕಲೆಯಲ್ಲೂ ಪರಿಣತಿ ಇರುವ ಇವರು ಕೃಷಿ ಪರಿಕರಗಳನ್ನು ಸ್ವತಃ ತಯಾರಿಸಿಕೊಳ್ಳಬಲ್ಲರು. ತಮ್ಮ ಪತ್ನಿಯ ಪ್ರೋತ್ಸಾಹವೂ ತಮ್ಮಲ್ಲೆ ಕಾಯಕದ ಬೆನ್ನಿಗಿದೆ ಎನ್ನುವ ಇವರದು ಪತ್ನಿ, ಇಬ್ಬರು ಪುತ್ರರ ಪುಟ್ಟ ಕುಟುಂಬ. ಪ್ರಸ್ತುತ 17 ಮತ್ತು 16ರ ಹರೆಯದ ಮಕ್ಕಳಿಬ್ಬರಿಗೂ 4 ವರ್ಷ ವಾಗಿದ್ದಾಗಲೇ ಈಜು ಕಲಿಸಿದ್ದಾರೆ. ಪ್ರಶಸ್ತಿ- ಗೌರವ ಇವರ ಸಾಹಸ, ಸಾಧನೆ ಮತ್ತು ಧೈರ್ಯಕ್ಕೆ ಅವರಿಗೆ ಈಗಾಗಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಲಭಿಸಿದೆ. ವಿರಾಜಪೇಟೆ ಕೊಡವ ಸಮಾಜವೂ ಇವರ ಸಾಧನೆಯನ್ನು ಗುರುತಿಸಿ ಸಮ್ಮಾನಿಸಿದೆ.

ಸ್ವಾತಂತ್ರ್ಯದ ತಪ್ಪು ಅರ್ಥೈಸುವಿಕೆ


ಸ್ವಾತಂತ್ರ್ಯವು ಸಂವಿಧಾನ ಮತ್ತು ಕಾನೂನಿನ ನಿರ್ಬಂಧಗಳನ್ನು ಹೊಂದಿದೆ ಹಾಗೂ ನ್ಯಾಯಾಂಗದ ರಕ್ಷಣೆಯನ್ನು ಹೊಂದಿದೆ. ಸ್ವಾತಂತ್ರ್ಯfacebook ಎಂದರೆ ಒಬ್ಬ ವ್ಯಕ್ತಿ ತನ್ನ ಹಕ್ಕುಗಳನ್ನು ಅನುಭವಿಸಿ, ಕರ್ತವ್ಯಗಳನ್ನು ನಿಭಾಯಿಸುವಾಗ ಇನ್ನೊಬ್ಬರ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ಗೌರವದಿಂದ ಕಾಣುವುದಾಗಿದೆ.
ಭಾರತದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಸಂವಿಧಾನದ 3ನೇ ಅಧ್ಯಾಯದಲ್ಲಿ 19ನೇ ವಿಯಿಂದ 22ನೇ ವಿಯವರೆಗೆ ಈ ಹಕ್ಕಿನ ಬಗ್ಗೆ ವಿವರಿಸಲಾಗಿದೆ. ಇದೊಂದು ಮೂಲಭೂತ ಹಕ್ಕು ಕೂಡಾ ಹೌದು. ಆದ್ಧರಿಂದ ನಾಗರಿಕರೆಲ್ಲರೂ ಈ ಹಕ್ಕಿನ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾದುದು ಅನಿವಾರ್ಯ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 63 ವರ್ಷಗಳೇ ಸಂದರೂ ಇಂದಿಗೂ ಸ್ವಾತಂತ್ರ್ಯ ಎಂಬ ಪದವನ್ನು ಸಮರ್ಪಕವಾಗಿ ಅರ್ಥೈಸಿಕೊಂಡವರ ಸಂಖ್ಯೆ ಬಹುವಿರಳ.
ವ್ಯಕ್ತಿಯು ತನ್ನ ಮನಸ್ಸಿಗೆ ತೋಚಿದ್ದನ್ನು ನಿರ್ಭಯವಾಗಿ ಮಾಡುವುದನ್ನು ಸ್ವಾತಂತ್ರ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ. ಆದರೆ ನನ್ನ ತೋಟದಲ್ಲಿ ಹೋಗಲು ನನಗೆ ಸ್ವಾತಂತ್ರ್ಯವಿದೆ ಎಂದು ಕೈ ಬೀಸಿಕೊಂಡು ಹೋದರೆ ನೋವಾಗುವುದು ನಮಗೆ. ವಾಸ್ತವವಾಗಿ ಒಬ್ಬ ವ್ಯಕ್ತಿಯು ತನಗನಿಸಿದಂತೆ ವರ್ತಿಸಲು ಸ್ವಾತಂತ್ರ್ಯವು ಅವಕಾಶ ಕೊಡುವುದಿಲ್ಲ, ಎಲ್ಲಾ ವಿಧದ ನಿರ್ಭಂದಗಳಿಂದ ಮುಕ್ತವಾದುದೆ ಸ್ವಾತಂತ್ರ್ಯ ಎಂದು ಅರ್ಥೈಸಲು ಸಾಧ್ಯವಿಲ್ಲ. ಅದನ್ನು ಸ್ವೇಚ್ಛೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಕವಿ ದಾ.ರಾ. ಬೇಂದ್ರೆ ಅವರು ತಮ್ಮ ಸ್ವಾತಂತ್ರ್ಯ ವರ್ಧಂತಿ ಎಂಬ ಕವಿತೆಯಲ್ಲಿ ‘‘ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರಾ’’ ಎಂದು ಹೇಳಿದ್ದಾರೆ. ಸ್ವೈರತ್ವ ಸಾಧನೆಗಾಗಿ ಈಗಿನ ಕೆಲವೊಂದು ರಾಜಕಾರಣಿಗಳು ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜಕೀಯದಲ್ಲಿ , ಸರಕಾರದ ಹುದ್ದೆಗಳಲ್ಲಿ ತಮ್ಮ ಸಂಬಂಧಿಕರಿಗೆ ಅವಕಾಶ ಒದಗಿಸಬೇಕೆಂದು ಪ್ರಯತ್ನಿಸುವುದು ಶೋಚನೀಯ ವಿಚಾರ.
ಸ್ವಾತಂತ್ರ್ಯದ ಮೂಲಭೂತ ಗರಿಷ್ಠತೆ ಕಾನೂನು. ಆದರೂ ಇಂದು ಸಮಾಜದಲ್ಲಿ ಸ್ವಾರ್ಥ, ಭ್ರಷ್ಟಾಚಾರ, ಸ್ವಾತಂತ್ರ್ಯದ ದುರ್ಬಳಕೆ ಇತ್ಯಾದಿ ಕಂಡುಬರಲು ಜನರಲ್ಲಿ ಅಜ್ಞಾನ, ನೈತಿಕ ಶಿಕ್ಷಣದ ಕೊರತೆ, ಅಹಂಕಾರಗಳೇ ಕಾರಣ. ಬೇಂದ್ರೆ ಅವರು ತಮ್ಮ ಇನ್ನೊಂದು ಕವನದಲ್ಲಿ ‘‘ಹಡೆದರಾಯ್ತೆ? ಪಡೆಯಬೇಕು ಪಡೆದವರಿಗೆ ಶಿಕ್ಷಣ’’ ಎಂದು ಹೇಳಿದ್ದಾರೆ. ಸ್ವಾತಂತ್ರ್ಯವು ಕೇವಲ ಕ್ರಮಬದ್ಧವಾದ ರಾಜ್ಯದಲ್ಲಿ ಮಾತ್ರ ಸಾಧ್ಯ. ಪ್ರೊ| ಶೀಲೆ ಅವರು ‘‘ಸ್ವಾತಂತ್ರ್ಯ ಎಂದರೆ ಎಲ್ಲೆ ಮೀರಿದ, ಸರಕಾರಕ್ಕೆ ವಿರೋಧವಾದುದು’’ ಎಂದಿದ್ದಾರೆ. ಸರಕಾರವನ್ನು ಟೀಕಿಸುವ ಸ್ವಾತಂತ್ರ್ಯ ಇದೆ ಎಂದು ಪ್ರತಿ ಪಕ್ಷದವರು ಪ್ರತಿಯೊಂದು ವಿಷಯಕ್ಕೂ ಆಡಳಿತ ಪಕ್ಷದವರನ್ನು ಟೀಕಿಸುತ್ತಾ, ಮುಷ್ಕರಗಳನ್ನು ನಡೆಸುತ್ತಾ, ಜನರ ಎದುರಿಗೆ ನಾವು ಒಳ್ಳೆಯವರೆಂದು ತೋರಿಸುತ್ತಾ, ಸ್ವಾರ್ಥಸಾಧನೆ ಮಾಡುವುದು ಸ್ವಾತಂತ್ರ್ಯದ ಅಪಾರ್ಥವಾಗುವುದು. ಬರ್ನರ ಪ್ರಕಾರ ‘‘ವ್ಯಕ್ತಿಯೊಬ್ಬನಿಗೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಹೊಂದಲು ಇರುವ ಅವಕಾಶವೆ ಸ್ವಾತಂತ್ರ್ಯ’’. ನನಗೆ ಸ್ವಾತಂತ್ರ್ಯವಿದೆ, ಸಾಮರ್ಥ್ಯವಿದೆ ಎಂದು ಭೂಗತ ದೊರೆಗಳಾಗಿ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವುದು, ಕಾನೂನು ಬಾಹೀರವಾಗಿರುತ್ತದೆ. ಮಹಾತ್ಮಾ ಗಾಂೀಜಿ ಅವರ ಪ್ರಕಾರ ‘‘ಸ್ವಾತಂತ್ರ್ಯವು ನಿರ್ಬಂಧಗಳ ಮುಕ್ತ ವಾತಾವರಣವಾಗಿರುವುದಿಲ್ಲ. ಆದರೆ ಅದು ಸ್ವಾತಂತ್ರ್ಯದ ಬೆಳವಣಿಗೆಯಲ್ಲಿರುತ್ತದೆ’’.
ಸಮಾಜದಲ್ಲಿ ಕೆಲವೊಂದು ಗಣ್ಯ ವ್ಯಕ್ತಿಗಳು ತಮ್ಮ ಮನೆಯಲ್ಲಿರುವ ಕೆಲಸದವರನ್ನು ಅಮಾನುಷವಾಗಿ ನೋಡಿಕೊಳ್ಳುವುದು, ಅವರ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೆ. ವಾಕ್ ಸ್ವಾತಂತ್ರ್ಯ ಇದೆ ಎಂದು ಮನ ಬಂದಂತೆ ಮಾತನಾಡುವ ಹಾಗಿಲ್ಲ. ಜನರು ಬೌದ್ಧಿಕ ಮತ್ತು ಪ್ರಯೋಗಾತ್ಮಕ ಸ್ವಾತಂತ್ರ್ಯವಿದೆ ಎಂದು ತಾನು ಹೊಂದಿರುವ ವಿಚಾರಧಾರೆಗಳನ್ನು ಇನ್ನೊಬ್ಬರ ಮೇಲೆ ಮಲತ್ಕಾರವಾಗಿ ಹೇರಲು ಸಾಧ್ಯವಿಲ್ಲ. ನಮಗೆ ಆಸ್ತಿಯ ಹಕ್ಕು ಇದೆ ಎಂದು ಅಕ್ರಮವಾಗಿ, ಕಾನೂನು ಬಾಹೀರವಾಗಿ ಆಸ್ತಿಯನ್ನು ಸಂಪಾದಿಸುವ ಹಾಗಿಲ್ಲ. ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಸ್ವಾತಂತ್ರ್ಯವಿದೆ. ಆದರೆ ಅಲ್ಲಿನ ಕಾನೂನು ನಿಯಮಗಳಿಗೆ ಬದ್ಧರಾಗಿರಬೇಕು. ನಮಗೆ ಸ್ವಾತಂತ್ರ್ಯವಿದೆ ಎಂದು ಎಷ್ಟೋ ಹೊತ್ತಿಗೆ ತರಗತಿಗೆ ಬರುವುದು ಹೋಗುವುದು, ಮಾಡಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ್ಯವಿದೆ ಎಂದು ನಮ್ಮ ಮನೆಯ ಟಿ.ವಿ., ರೇಡಿಯೋ ಅಥವಾ ಡಿವಿಡಿ ಇತ್ಯಾದಿಗಳನ್ನು ಗಟ್ಟಿಯಾಗಿ ಕೇಳುವಂತೆ ಇಟ್ಟರೆ ಅದರಿಂದ ಪಕ್ಕದ ಮನೆಯವರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗತ್ತದೆ. ಅದ್ದರಿಂದ ನಾವು ಸ್ವಾತಂತ್ರ್ಯ ಅನುಭವಿಸುವಾಗ ಎಚ್ಚರವಹಿಸಬೇಕಾದುದು ಅತ್ಯಗತ್ಯ. ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಇವು ಪರಸ್ಪರ ಪೂರಕವಾಗಿದ್ದರೆ ಅದು ಸರಿಯಾದ ಅರ್ಥ. ಒಂದಕೊಂದು ಮಾರಕವಾಗಿದ್ದರೆ ಅದು ಅಪಾರ್ಥ.

ಶುಕ್ರವಾರ, ಜೂನ್ 15, 2012

‘ಅಜ್ಜನ ಕೋಲಿದು ನನ್ನಯ ಕುದುರೆ..........’

facebook
ಅಜ್ಜನ ಕೋಲಿದು
ನನ್ನಯ ಕುದುರೆ ॥
ಹೆಜ್ಜೆಗೆ ಹೆಜ್ಜೆಗೆ
ಕುಣಿಯುವ ಕುದುರೆ ॥
ಹೌದು ಹಳ್ಳಿಗಳಲ್ಲಿ facebookಹಿಂದೆ ಅಜ್ಜನ ಊರುಗೋಲನ್ನು ಚಿಕ್ಕ ಮಕ್ಕಳು ಹಿಡಿದು ಹೀಗೆ ಹಾಡುತ್ತಾ ಕುಣಿಯುತ್ತಿದ್ದರು. ಇದು ಇಂದು ವಿರಳವಾಗಿದೆ. ದೇಹವನ್ನು ಸಂಬಾಳಿಸಿಕೊಂಡು ನಡೆದಾಡಲು ಕಷ್ಟ ಪಡುವ ವೃದ್ಧರು ಬಳಸುವ ಊರುಗೋಲು ಮಕ್ಕಳ ಆಟದ ಪರಿಕರವೂ ಆಗಿತ್ತು. ಆಧುನಿಕತೆಯ ಪ್ರಭಾವದಿಂದ ಇಂತಹ ಸರಳ ಆಟಿಕೆಗಳ ಬಾಳಕೆ ಇಲ್ಲವಾಗಿದೆ.
   ಹಿಂದಿನ ಕಾಲದಲ್ಲಿ ಅಜ್ಜ ಅಥವಾ ಅಜ್ಜಿ ಊರುಗೋಲನ್ನು ಕೈಯಿಂದ ಎಲ್ಲಿ ಇಡುತ್ತಾರೆ ಎಂದೇ ಮೊಮ್ಮಕ್ಕಳು ಹೊಂಚು ಹಾಕುತ್ತಿದ್ದರು. ಅವರು ಕೈಯಿಂದ ಬಿಟ್ಟ ತತ್ಕ್ಷಣವೆ ಮಕ್ಕಳ ಮಧ್ಯೆ ಊರುಗೋಲಿಗಾಗಿ ದೊಡ್ಡ ಸಂಗ್ರಾಮವೇ ಸಡೆಯುತ್ತಿತ್ತು. ಆಗ ಮಧ್ಯಸ್ತಿಕೆ ವಹಿಸಲು ಅಜ್ಜ ಅಥವಾ ಅಜ್ಜಿಯೇ ಬರಬೇಕಾಗುತ್ತಿತ್ತು.
ಊರುಗೋಲು ಬಳಕೆ
ಊರುಗೋಲನ್ನು ಹಲವಾರು ಕಾರಣಗಳಿಂದ ಬಳಸುತ್ತಿದ್ದರು. ಮುಖ್ಯವಾಗಿ ವೃದ್ಧರು, ಅಂಗವಿಕಲರು ನಡೆದಾಡಲು ಊರುಗೋಲಿನ ಸಹಾಯ ಪಡೆಯುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಊರಿನ ಪ್ರಮುಖರು ಊರುಗೋಲನ್ನ ಬಳಸುತ್ತಿದ್ದರು. ಉದಾಹರಣೆಗೆ: ಪಟೇಲರು, ಗುತ್ತಿನ ಮನೆಯ ಯಜಮಾನರು, ಧನವಂತರು, ಗುರಿಕಾರರು, ಜೋಯಿಸರು. ಊರುಗೋಲು ಬಳಸುವುದು ಒಂದು ಶ್ರೀಮಂತಿಕೆಯ ಸಂಕೇತವು ಆಗಿತ್ತು. ಕಲವರು ಶೋಕಿಗಾಗಿ (ಚಂದಕ್ಕಾಗಿ) ಬಲಸುತ್ತಿದ್ದರು. ಕಾವಲುಗಾರರು ರಕ್ಷಣೆಗಾಗಿ ಊರುಗೋಲನ್ನು ಉಪಯೋಗಿಸುತ್ತಿದ್ದರು.
ವೈವಿಧ್ಯ ಊರುಗೋಲುಗಳು
ಬಡವರು ಸಾಮನ್ಯ ಮರದ ಕೊಂಬೆ ಅಥವಾ ಬಿದಿರಿನ ಕೋಲುಗಳನ್ನು ಊರುಗೋಲಾಗಿ ಬಳಸುತ್ತಾರೆ. ಮಧ್ಯಮ ವರ್ಗದ ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಮರದ ಕೋಲು ಅಥವಾ ಬೆತ್ತಗಳನ್ನು ಊರುಗೋಲಾಗಿ ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಹೆಚ್ಚು ವಿಶೇಷವೇನೂ ಇರುವುದಿಲ್ಲ. ಹಿಂದೆ ಅಂಗವಿಕಲರು ಸಹ ಸಾಮಾನ್ಯ ಮರದ ಊರುಗೋಲುಗಳನ್ನೇ ಬಳಸುತ್ತಿದ್ದರು. ಶ್ರೀಮಂತರು, ಶೋಕಿಗಾಗಿ ಊರುಗೋಲು ಹಿಡಿಯುವವರು ಮಾತ್ರ ಬೆಲೆ ಬಾಳುವ ಬೆತ್ತಗಳನ್ನು ತಂದು, ಬಹಳ ನಾಜೂಕಾಗಿ ಕೆಲವೊಂದು ಕೆತ್ತನೆಗಳನ್ನು ಮಾಡಿ, ಬೇರೆ ಬೇರೆ ಲೋಹಗಳಿಂದ ಬೆತ್ತದ ಎರಡೂ ತುದಿಗಳಿಗೆ ಕಟ್ಟಗಳನ್ನು ಹಾಕಿ ಬಳಸುತ್ತಿದ್ದರು. ಬೆತ್ತವನ್ನು ನೆಲಕ್ಕೆ ಉರುವ ಭಾಗಕ್ಕೆ ಸಾಮಾನ್ಯವಾಗಿ ತಾಮ್ರ, ಕಂಚು, ಕಬ್ಬಿಣ ಇತ್ಯಾದಿ ಲೋಹಗಳಿಂದ ಕಟ್ಟ ಹಾಕುತ್ತಿದ್ದರು. ಕೈಯಲ್ಲಿ ಹಿಡಿಯುವ ಭಾಗಕ್ಕೆ ಚಿನ್ನ, ಬೆಳ್ಳಿ, ತಾಮ್ರ, ಕಂಚು ಇತ್ಯಾದಿ ಲೋಹಗಳಿಂದ ಕೆಲವೊಂದು ಪ್ರಾಣಿಗಳ ಮುಖವನ್ನು ಹೋಲುವ ಆಕರ್ಷಕವಾದ ಕಟ್ಟವನ್ನು ಹಾಕಲಾಗುತ್ತಿತ್ತು. ನಾಯಿ, ಮೀನು, ಸಿಂಹ, ಹುಲಿ, ಬಸವ, ಕುದುರೆ ಇತ್ಯಾದಿಗಳ ಮುಖಗಳನ್ನು ಹೋಲುವ ಕಟ್ಟಗಳನ್ನು ಲೋಹಗಳಲ್ಲಿ ಬಹಳ ನಾಜೂಕಾಗಿ ಕೆತ್ತಿ ಬಳಸುತ್ತಿದ್ದರು. ಹಾವು, ಮನುಷ್ಯನ ತಲೆ ಬುರುಡೆಯ ಆಕಾರದ ಕಟ್ಟಗಳು ಭಯ ಹುಟ್ಟಿಸುವಂತಿವೆ. ಅಲ್ಲದೆ ಮರದಲ್ಲಿಯೂ ಪ್ರಾಣಿಗಳ ಮುಖಗಳನ್ನು ಕೆತ್ತಿ ಉಪಯೋಗಿಸುತ್ತಿದ್ದರು. ಹೀಗೆ ಬೆಲೆ ಬಾಳುವ ಊರುಗೋಲು ಬಳಸುವರು ಇದರಿಂದ ಸಮಾಜದಲ್ಲಿ ತಮ್ಮ ಘನತೆ, ಗೌರವ, ಸ್ಥಾನ -ಮಾನ ವೃದ್ಧಿಯಾಗುತ್ತದೆ ಎಂದು ನಂಬಿದ್ದರು. ಅಂಥವರು ನಾಗರ ಬೆತ್ತವನ್ನು ಹೆಚ್ಚಾಗಿ ಬಳಸುತ್ತಿದ್ದರು. ನಾಗರ ಬೆತ್ತದ ಬಗ್ಗೆ ಕತೆಗಾರ ಸೇಡಿಯಾಪು ಕೃಷ್ಣ ಭಟ್ಟರು ಮನೋಜ್ಞವಾದ ಕಥೆಯೊಂದನ್ನು ಬರೆದಿದ್ದಾರೆ.





ಆಧುನಿಕ ಊರುಗೋಲು
ಇಂದು ಕಾಲ ಬದಲಾಗಿದೆ. ಊರುಗೋಲು ಶ್ರೀಮಂತಿಕೆಯ ಸಂಕೇತ ಎಂಬ ಭಾವನೆ ಇಲ್ಲವಾಗಿದೆ. ವೃದ್ಧರು, ಅಂಗವಿಕಲರು ಇಂದು ಮರದ ಊರುಗೋಲುಗಳನ್ನು ಬಳಕೆ ಮಾಡುವುದು ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಮಾತ್ರ ಅದನ್ನು ನೋಡಬುಹುದು. ಪಟ್ಟಣಗಳಲ್ಲಿ ಮರದ ಊರುಗೋಲುಗಳ ಸ್ಥಾನವನ್ನು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳಿಂದ ತಯಾರಿಸಿದ ಊರುಗೋಲುಗಳು ಆಕ್ರಮಿಸಿಗೊಂಡಿವೆ. ಹಗುರವಾದ, ಕೈಯಲ್ಲಿ ಹಿಡಿಯಲು ಆರಾಮದಾಯಕವಾದ, ವಾಹನಗಳಲ್ಲಿ ಸಂಚರಿಸುವ ವೇಳೆ ಮಡಚಿ ಚೀಲದಲ್ಲಿ ಕೊಂಡ್ಯೊವಂತಹ ಊರುಗೋಲುಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಹೀಗೆ ಊರುಗೋಲು ಬಳಕೆ, ತಯಾರಿಗೆ ಬಳಸುವ ವಸ್ತು ಮತ್ತು ಜನರಲ್ಲಿನ ವ್ಯತ್ಯಾಸ, ವಿವಿಧತೆಗಳನ್ನು ಗುರುತಿಸ ಬಹುದಾಗಿದೆ.
ಊರುಗೋಲು ತಯಾರಿಗೆ ಬೇರೆ ಬೇರೆ ವಿಧದ, ಗಟ್ಟಿಯಾದ, ತುಂಬಾ ಸಮಯ ಬಾಳಿಕೆ ಬರುವ ಮರಗಳನ್ನು ಬಳಸುತ್ತಾರೆ. ಮುಖ್ಯವಾಗಿ ಮಂದಾರ, ನಾಗರ ಬೆತ್ತ, ಕೆಲವೊಂದು ಜಾತಿಯ ಬಿದಿರುಗಳು, ಪೇರಳೆ, ತೇಗ, ಸಾಗುವಾನಿ, ಕುಂಟಾಲ ಇತ್ಯಾದಿ.

ಕುಂದುತಿದೆ ಜನ್ಮ ಭೂಮಿ ಬಗೆಗಿನ ಗೌರವ

‘‘ಅಪಿ ಸ್ವರ್ಣ ಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ
  ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’’ 
ಈ ಮಾತನ್ನು ರಾಮಾಯಣದಲ್ಲಿ ಹೇಳಲಾಗಿದೆ. ರಾವಣನನ್ನು ಶ್ರೀರಾಮನು ಸೋಲಿಸಿದ ಅನಂತರ ಲಕ್ಷ್ಮಣನು ಅಣ್ಣನಾದ ಶ್ರೀರಾಮನಲ್ಲಿ ನಾವು ಈ ಲಂಕೆಯಲ್ಲಿಯೇ ಉಳಿಯೋಣ. ಅಯೋಧ್ಯೆಯನ್ನು ನೋಡಿಕೋಳ್ಳಲು ಭರತನಿದ್ದಾನೆ. ನಾವು ಗೆದ್ದ ಈ ರಾಜ್ಚ ಈಗ ಅರಾಜಕವಾಗಿದೆ. ಆದ್ದರಿಂದ ನೀನು ಇಲ್ಲಿಯ ಅರಸನಾಗು ಎಂದು ಕೇಳಿಕೊಂಡಾಗ ಶ್ರೀರಾಮನು ಲಕ್ಷ್ಮಣನಿಗೆ ‘‘ಈ ಲಂಕೆಯು ಸಂಪತದ್ಭರಿತವಾಗಿದ್ದರೂ ಸ್ವರ್ಣಮಯೀಯಾದರೂ ನನ್ನ ಪಾಲಿಗೆ ಶ್ರೇಷ್ಠವೆನಿಸದು. ಯಾಕೆಂದರೆ ಅಯೋಧ್ಯೆಯಲ್ಲಿ ನನ್ನ ಜನನಿ ಇದ್ದಾಳೆ. ಮಾತ್ರವಲ್ಲ ಅದು ನನ್ನ ಜನ್ಮ ಭೂಮಿ ಇವೆರಡು ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಇಲ್ಲಿ ತಾಯಿ ಮತ್ತು ತಾಯಿ ನೆಲದ ಬಗೆಗಿನ ಶ್ರೀರಾಮನ ಅಭಿಮಾನ, ಗೌರವನ್ನು ಕಾಣಬಹುದು.
   ನಮ್ಮ ದೇಶದ ಸಂಸ್ಕೃತಿಯಲ್ಲಿ ತಾಯಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಎಂಬ ಮಾತಿದೆ. ತಾಯ್ತನಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಮಾನ್ಯತೆ ಇದೆ. ಹೊತ್ತು-ಹೆತ್ತು, ಸಾಕಿ-ಸಲಹಿದ ತಾಯಿ ವಾತ್ಸಲ್ಯಮಯಿ. ತಾಯಿಯ ತ್ಯಾಗ, ಔದಾರ್ಯ, ಪ್ರೀತಿ ಅಮೋಘ. ಅಂತೆಯೇ ನಮಗೆ ಆಸರೆ ನೀಡುವ ನಾಡು ಕೂಡಾ ತಾಯಿಗೆ ಸಮಾನ. ಆಶ್ರಯ ನೆಲೆಯಾದ ನಾಡು ಜೀವನ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ಕೇಂದ್ರ ಬಿಂದು. ಹೆತ್ತ ತಾಯಿ ಮಡಿಲಿನಲ್ಲಿ ಬೆಳೆಯುವ ಜೀವನ ಸ್ವರ್ಗಕ್ಕೆ ಮಿಗಿಲು. ತಾಯಿ ಸ್ಥಾನ ವಿಶ್ವದಲೇ ಹಿರಿದು. ಆದುದರಿಂದಲೇ ಒಬ್ಬಳು ಆದರ್ಶ ತಾಯಿಯು ನೂರು ಜನ ಗುರುಗಳಿಂತ ಶ್ರೇಷ್ಠಳು ಎಂದು ಬೈಬಲ್ನಲ್ಲಿ ಹೇಳಲಾಗಿದೆ.
ಯಾವ ನೆಲದ ಗಂಧಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷ ಧಾರೆ ಲಿಸಿ ಚಿಗುರು ತಂದಿತೋ 
ಅದೇ ಎನ್ನ ಜನ್ಮ ಭೂಮಿ, ಅದೇ ಎನ್ನ ಪುಣ್ಯ ಭೂಮಿ ॥
    ಇದು ಕವಿಯ ಜನ್ಮ ಭೂಮಿಯ ಬಗೆಗಿನ ಅಭಿಮಾನ, ಪ್ರೀತಿ, ಗೌರವದ ಸಂಕೇತವಾಗಿದೆ. ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ಭಾವನೆಯೇ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಿಗೆ ಸೂರ್ತಿ ದಾಯಕವಾದುದಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಮರಣ ದಂಡನೆಗೆ ಗುರಿಯಾದ ಭಾರತದ ಕ್ರಾಂತಿಕಾರಿ ತರುಣ ಭಗತ್ ಸಿಂಗ್ ತನ್ನ ಜೀವನದ ಕೊನೆಯ ಕ್ಷಣದಲ್ಲಿ ‘‘ಆಶ್ರಯ ನೀಡಿದ ಈ ಭೂಮಿಗಾಗಿ ಜೀವ ತೊರೆಯಲು ಸಂತೋಷವಾಗುತ್ತಿದೆ. ಇದನ್ನು ನೋಡಲು ನೀವು ಪುಣ್ಯವಂತರು’’ ಎಂದು ಬ್ರಿಟಿಷ್ ಅಕಾರಿಗಳಿಗೆ ಹೇಳಿದ ಮಾತು ಜನ್ಮ ಭೂಮಿ ಪರಕೀಯರ ಬಂಧನದಲ್ಲಿರುವಾಗ ನಾವು ಅದರ ವಿರುದ್ಧ ಹೋರಾಡಿ ಸಾಯುವುದೇ ಮೇಲು ಎಂಬುದನ್ನು ಸೂಚಿಸುತ್ತದೆ. 
ಅಭಿಮಾನ ಶೂನ್ಯ 
ಇಂದು ಜನರಲ್ಲಿ ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಶೂನ್ಯವಾಗಿ ತಾಯಿಯನ್ನು ಕಡೆಗಣಿಸುವ, ಗೌರವಿಸದಿರುವ ಮನೋಭಾವನೆ ಬೆಳೆಯುತ್ತಿದೆ. ಜನ್ಮ ಭೂಮಿ ಬಗ್ಗೆ ತ್ಸಾರ ಭಾವನೆ ಹೆಚ್ಚುತ್ತಿದೆ. ಇದರಿಂದ ಜನ ಇಂದು ವಿದೇಶಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವೂ ಇದೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಬೌದ್ಧಿಕ, ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೆ ಹೊರತು, ನೈತಿಕ ವಿಕಾಸದ ಕಡೆ ಗಮನ ಹರಿಸಿಲ್ಲ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ, ದೃಢವಾಗಿದ್ದು, ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿತು. ಸಮಾಧಾನಕರವಾಗಿ, ಶಾಂತಿಯುತವಾಗಿ ಪರಿಹರಿಸಬೇಕು. ಇದು ಮಾನವ ಧರ್ಮದ ಗುಣವಾಗಿದೆ. ಮಾನವ ಧರ್ಮ ಅಥವಾ ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅಗತ್ಯವಿದೆ. ನೈತಿಕ ಶಿಕ್ಷಣದ ಕೊರತೆಯಿಂದಾಗಿ ಇಂದು ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಜನರಲ್ಲಿ ಕುಂದುತ್ತಿದೆ. 
  ಈ ಆಧುನಿಕ ಯುಗದಲ್ಲಿ ‘‘ಉದರ ನಿಮಿತ್ತಂ ಬಹುಕೃತ ವೇಷಂ’’ ಎಂಬಂತೆ ಉದ್ಯೋಗದ ನಿಮಿತ್ತವಾಗಿ ಎಲ್ಲೇ ಇದ್ದರೂ ತಾಯಿ ಮತ್ತು ತಾಯಿ ನೆಲದ ಬಗೆಗಿನ ಅಭಿಮಾನ, ಪ್ರೀತಿ, ಗೌರವವನ್ನು ಬಿಟ್ಟು ಬಿಡಬಾರದು. ಯಾಕೆಂದರೆ ನಮ್ಮ ಜನ್ಮಕ್ಕೆ ಕಾರಣರಾದ ತಾಯಿ ಮತ್ತು ಜನ್ಮ ಭೂಮಿಯು ಇಲ್ಲದಿದ್ದರೆ ನಾವು ಹುಟ್ಟುತ್ತಲೇ ಇರಲಿಲ್ಲ. ತಾಯಿಯ ಎದೆಯ ಹಾಲನ್ನು ಕುಡಿದು, ತಾಯ್ನೆಡಿನ ನೀರು, ಗಾಳಿ, ಬೆಳಕು, ಮಣ್ಣಿನ ಸತ್ವ ಹೀರಿ ಬೆಳೆದ ವ್ಯಕ್ತಿಗೆ ನೆಲದ ಋಣ ತೀರಿಸುವ ಗುರುತರವಾದ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ. ಆ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಸಭ್ಯರ ಲಕ್ಷಣವಲ್ಲ. ಇದರ ಬದಲು ಜನ್ಮ ಭೂಮಿಯಲ್ಲೇ ನೆಲೆಸಿ ಜನ ಸೇವಾ ಕಾರ್ಯದಲ್ಲಿ ನಿರತರಾದರೆ ಈ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದಂತಾಗುತ್ತದೆ.

ಮೀಸೆ ಪುರಾಣ!


ಗಡ್ಡ, ಮೀಸೆಗಳು ಪುರುಷತ್ವದ ಲಕ್ಷಣ. ಗಂಡಸರ ಮೂಗು ಮತ್ತು ಬಾಯಿಯ ಮಧ್ಯದಲ್ಲಿ ಬೆಳೆಯುವ ಕೂದಲುಗಳ ಸಮೂಹಕ್ಕೆ ‘ಮೀಸೆ’facebook ಎಂದು ಕರೆಯುಲಾಗುತ್ತದೆ. ಗಂಡು ಮಕ್ಕಳು ಯವ್ವನಕ್ಕೆ ಕಾಲಿಡುತ್ತಿದ್ದಂತೆ ಅವರ ಮುಖದಲ್ಲಿ ಗಡ್ಡ, ಮೀಸೆ ಬೆಳೆಯಲಾರಂಭಿಸುತ್ತದೆ. ಗಂಡು ಮಕ್ಕಳು ಯುವಕರಾಗುತ್ತಿರುವುದರ ಸಂಕೇತ ಮೀಸೆ ಚಿಗುರುವುದು. ಬೆಳೆಯುತ್ತಿರುವ ಮಕ್ಕಳಿಗೆ ತಮ್ಮ ಅಪ್ಪನೇ ‘ರೋಲ್ ಮೊಡೆಲ್’ ಆದ್ದರಿಂದ ತಂದೆಯಂತೆ ಮೀಸೆ ಬಿಡಲು ಅಥವಾ ತೆಗೆಯಲು ಪ್ರಾರಂಭಿಸುತ್ತಾರೆ.
ಹಿಂದಿನ ಕಾಲದಲ್ಲಿ ಮೀಸೆ ಎಂಬುದು ಯಜಮಾನಿಕೆ, ಶ್ರೀಮಂತಿಕೆ, ಅಧಿಕಾರದ ಸಂಕೇತವಾಗಿತ್ತು. ರಾಜರು, ಮಂತ್ರಿಗಳು, ಸೇನಾ ಅಧಿಕಾರಿಗಳು, ಸೈನಿಕರು, ಪಾಳೇಗಾರರು, ಜಮೀದ್ದಾರರು, ಸಾಮಾಜದಲ್ಲಿರುವ ಗಣ್ಯವ್ಯಕ್ತಿಗಳು ತಮ್ಮಲ್ಲಿರುವ ಹಣ-ಅಂತಸ್ತು, ಅಧಿಕಾರಕ್ಕೆ ತಕ್ಕಂತೆ ಮೀಸೆ ಬೆಳೆಸಿಕೊಳ್ಳುತ್ತಿದ್ದರು. ಅಂಥವರ ಮೀಸೆ ನೋಡಿಯೇ ಸಮಾಜದಲ್ಲಿ ಅವರ ಸ್ಥಾನ-ಮಾನ ಹೇಗಿತ್ತು ಎಂಬುದನ್ನು ತಿಳಿಯಬಹುದಾಗಿತ್ತು. ಜಗಜಟ್ಟಿಗಳು, ಕುಸ್ತಿಪಟುಗಳು ಕೂಡ ಮೀಸೆ ಬೆಳೆಸುತ್ತಿದ್ದರು. ಜನಸಾಮಾನ್ಯರು ಹಿಂದಿನ ಕಾಲದಲ್ಲಿ ಮೀಸೆ ಇಟ್ಟುಕೊಳ್ಳತ್ತಿರಲಿಲ್ಲ.
ಹಿಂದೆ ಮೀಸೆಗೆ ಬಹಳಷ್ಟು ಗೌರವವಿತ್ತು. ಕೆಲವೊಂದು ಸಂದರ್ಭಗಳಲ್ಲಿ ಮೀಸೆಯನ್ನು ಉದ್ದೇಶಿಸಿ ಸವಾಲೆಸೆಯುತ್ತಿದ್ದರು. (ಉದಾಹರಣೆಗೆ ಮೀಸೆ ಇದ್ದಗಂಡಸಾದರೆ ಬಾರೋ) ಮೀಸೆ ತಮ್ಮ ಗೌರವದ ಸಂಕೇತ ಆದ್ದರಿಂದ ಬೆಟ್ ಕಟ್ಟಲು ಕೈಯಲ್ಲಿ ಹಣವಿಲ್ಲದಿದ್ದರೆ ‘ಸೋತ್ರೆ ಮೀಸೆ ಬೋಳಿಸುತ್ತೇನೆ’ ಅನ್ನುವವರೂ ಇದ್ದರು. ಕೆಲವೊಂದು ಸಂದರ್ಭಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಕ್ಕಾಗಿ, ಅವಮಾನ ಮಾಡುವುದಕ್ಕಾಗಿ ಮೀಸೆಯನ್ನು ಬಲಿಕೊಡುತ್ತಿದ್ದರು. ಅದು ಹೇಗೆಂದರೆ ಅರ್ಧ ಮೀಸೆ ಬೋಳಿಸಿ ಊರಿನಲ್ಲಿ ಮೆರವಣಿಗೆ ಮಾಡೋದು ಇತ್ಯಾದಿ.
 ಇಂದು ಕಾಲ ಬದಲಾಗಿದೆ. ಜನಸಾಮಾನ್ಯರು ಕೂಡ ಮೀಸೆ ಬೆಳೆಸುತ್ತಾರೆ. ಮೀಸೆಯಿಂದ ಆತ ಸ್ಥಿತಿವಂತ, ಗಣ್ಯವ್ಯಕ್ತಿ ಎಂದು ಗುರುತಿಸಲು ಸಾಧ್ಯವಿಲ್ಲ. ಹಿಂದಿನವರಂತೆ ದೊಡ್ಡಗಾತ್ರದ ಮೀಸೆಗಳು ಇಂದು ಇಲ್ಲವಾಗಿದೆ. ಬದಲಾಗಿ ಟ್ರಿಮ್ ಆದ ಸಣ್ಣ ಗಾತ್ರದ ಮೀಸೆಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬರುವ ಹಲವಾರು ಪಾತ್ರಗಳು ನಾನಾ ರೀತಿಯ ಮೀಸೆಗಳನ್ನು ಬೆಳೆಸಿಕೊಂಡಿರುತ್ತವೆ. ಅವುಗಳನ್ನು ನೋಡಿದ ಜನ ಮುಖ್ಯವಾಗಿ ಯುವಕರು ತಮ್ಮ ನೆಚ್ಚಿನ ಹೀರೋಗಳು ಬೆಳೆಸಿದಂತೆ ಮೀಸೆ ಬೆಳೆಸಿಕೊಳ್ಳುವವರೂ ಇದ್ದಾರೆ.
ಶ್ರೀಮಂತರು, ಅವರ ಮಕ್ಕಳು, ಸಮಾಜದಲ್ಲಿನ ಗಣ್ಯವ್ಯಕ್ತಿಗಳು, ಚಿತ್ರನಟರು, ಕ್ರಿಡಾಪಟುಗಳು ಹೆಚ್ಚಾಗಿ ಕ್ಲೀನ್ ಶೇವ್ ಮಾಡುವವರೆ ಅಧಿಕ. ಯಾಕೆಂದರೆ ಮೀಸೆ ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಮೀಸೆ ದಿನೇ ದಿನೇ ಬೆಳೆಯುತ್ತಿರುತ್ತದೆ. ವಾರಕ್ಕೆ 2 ಭಾರಿಯಾದರೂ ಅದನ್ನು ಟ್ರಿಮ್ ಮಾಡ್ಕೊಂಡರೆ ಮಾತ್ರ ಚೆನ್ನಾಗಿ ಕಾಣಿಸುತ್ತದೆ. ಟ್ರಿಮ್ ಮಾಡುವಾಗ ಅತಿಯಾ ಜಾಗೃತೆ ಅಗತ್ಯ. ಇತ್ತ ದಪ್ಪ-ಅತ್ತ ತೆಳು, ಅತ್ತ ಉದ್ದ- ಇತ್ತ ಗಿಡ್ಡ ಆದರೆ ಮತ್ತೆ ಸರಿಪಡಿಸುವುದು ತುಂಬಾ ಕಷ್ಟ. ಇಂತಹ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಬದಲು ಕ್ಲೀನ್ ಶೇವ್ ಮಾಡುವುದೇ ಉತ್ತಮ ಎನ್ನುವವರೇ ಇಂದು ಹೆಚ್ಚು. ಅಲ್ಲದೆ ವಯಸ್ಸಾದಂತೆ ಮೀಸೆ ಅರ್ಧ ಕಪ್ಪು- ಅರ್ಧ ಬಿಳಿ ಆಗುವುದಕ್ಕೆ ಮೊದಲೇ ಕ್ಲೀನ್ ಶೇವ್ ಮಾಡುವುದು ಒಳ್ಳೆಯದು ಎನ್ನೋರು ಇದ್ದಾರೆ.
ಮೀಸೆ ಇರುವವರಿಗೆ ಕೊಲವೊಂದು ವಿಶೇಷ ಹವ್ಯಾಸಗಳಿರುತ್ತವೆ. ಅವುಗಳೆಂದರೆ ಆಗ್ಗಾಗೆ ಕನ್ನಡಿಯಲ್ಲಿ ತಮ್ಮ ಮೀಸೆಯ ಚಂದ ನೋಡುತ್ತಾ, ಬಾಚುವುದು, ಮೀಸೆ ಮೇಲೆ ಕೈಯಾಡಿಸುತ್ತಿರುವುದು, ಮೀಸೆಯ ಒಂದು ತುದಿಯನ್ನು ಹಿಡಿದು ತಿರುವುದು, ಮೀಸೆಯನ್ನು ಎಳೆದು ಕಚ್ಚುತ್ತಿರುವುದು ಇತ್ಯಾದಿ. ಮೀಸೆ ಕೇವಲ ಮನುಷ್ಯರಿಗೆ ಮಾತ್ರ ಬರುವಂತದಲ್ಲ ಇತರ ಪ್ರಾಣಿಗಳಿಗೂ ಬರುತ್ತವೆ. ಮನುಷ್ಯರಲ್ಲಿ ಪುರುಷರಿಗೆ ಮಾತ್ರ ಮೀಸೆ ಬರುತ್ತದೆ. ಅಲ್ಲದೆ ಕೆಲವೊಂದು ನಪುಂಸಕರಿಗೂ ಮೀಸೆ ಇರುತ್ತದೆ. ಪ್ರಾಣಿಗಳಲ್ಲಿ ಗುಂಡು-ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲದಕ್ಕೂ ಮೀಸೆ ಬರುತ್ತವೆ.
ಮೀಸೆಗೆ ಸಂಬಂಧಿಸಿದಂತೆ ಹಲವಾರು ಗಾದೆ, ಹಾಡು, ಅಡುಮಾತು, ನುಡಿಮುತ್ತು ಇತ್ಯಾದಿಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ‘ಜಟ್ಟಿ ಬದ್ರೂ ಮೀಸೆಗೆ ಮಣ್ಣಾಗಿಲ್ಲ’, ‘ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ’, ‘ದೋಸೆ ತಿನ್ನುವಾಗ ಮೀಸೆ ಮುರಿದ ಹಾಗೆ’, ‘ರಾಜನಿಗೆ ಮೀಸೆ ಕೈಹೋದರೆ ಸಭೆ ಕಾಣುವುದಿಲ್ಲ’, ‘ಮೀಸೆ ಬಂದವನಿಗೆ ದೇಶ ಕಾಣಲ್ಲ’, ‘ಭಾಷೇನೂ ಇಲ್ಲ ಮೀಸೇನೂ ಇಲ್ಲ’, ‘ಮೀಸೆ ಚಿಗುರಿದಾಗ ನೆಲ ಕಾಣಲ್ಲ’, ‘ಮೀಸೆ ತುದಿಯಲ್ಲಿ ನಗು ನೋಡು’, ‘ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು....’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ....’, ‘ಮೀಸೆ ತಿರುವಿ ಕುಣಿದವರೆಲ್ಲ ಮಣ್ಣಾದರು ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು....’ ಮುಂತಾದವುಗಳು. ಮಲಯಾಳದಲ್ಲಿ ‘ಮೀಸೆ ಮಾಧವನ್’ ಎನ್ನುವ ಸಿನೆಮಾ ಕೂಡ ಬಂದಿದೆ. ಡಾ ವಿಷ್ಣುವರ್ಧನ್ ಅವರ ಯಜಮಾನ, ಸಿಂಹಾದ್ರಿಯ ಸಿಂಹ, ಸೂರ್ಯವಂಶ, ಆಪ್ತರಕ್ಷಕ ಮುಂತಾದ ಸಿನೆಮಾಗಳಲ್ಲಿ ನಾಯಕನ ಮೀಸೆ ಆಕರ್ಷಣೆಯ ಕೇಂದ್ರವಾಗಿತ್ತು. ಇತ್ತೀಚೆಗೆ ಬಂದ ವೀರಪರಂಪರೆ ಸಿನೆಮಾದಲ್ಲಿ ಅಂಬರೀಶ್ ಮೀಸೆ ಜನರ ಗಮನ ಸೆಳೆದಿತ್ತು.
ಮೀಸೆಯಿಂದಲೇ ಹೆಸರು ಪಡೆದವರು
ತಮ್ಮ ಮೀಸೆಯಿಂದಲೇ ಪ್ರಸಿದ್ಧರಾದವರು, ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದವರು ಹಲವಾರು ಮಂದಿ ಇದ್ದಾರೆ. ಮುಖ್ಯವಾಗಿ ಕಾಡುಗಳ್ಳ ವೀರಪ್ಪನ್, ನಕ್ಕೀರ ಗೋಪಾಲನ್, ಹಿಟ್ಲರ್, ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್, ಮಾಜಿ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ವೆಂಗ್ಸರ್ಕಾರ್, ಡೇವಿಡ್ ಬೂನ್, ಕ್ಲೈವ್ ಲಾಯ್ಡಿ ಹಾಗೂ ಮೀಸೆ-ಗಡ್ಡ ಮೂಲಕ ಬ್ರಿಜೇಶ್ ಪಟೇಲ್ ಮೊದಲಾದವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಹೋಮ್ಗಾರ್ಡ್ ಅಶೋಕ ಎನ್ನುವವರು ಕೂಡ ತಮ್ಮ ದೊಡ್ಡದಾದ ಮೀಸೆಯಿದಂಲೇ ಗುರುತಿಸಲ್ಪಟ್ಟವರು. ಹಲವಾರು ಜನ ಸಾಧು-ಸಂತರು ಕೂಡ ಉದ್ದವಾದ, ದೊಡ್ಡದಾದ ಮೀಸೆ ಬೆಳೆಸಿ ಜನರ ಗಮನ ಸೆಳೆದಿದ್ದಾರೆ. ಅತೀ ಉದ್ದನೆಯ ಮೀಸೆಯ ಸರದಾರ ಭಾರತದ ಬಜನ್ಸಿನ್ಹ ಜುಲಾಸಿನ್ಹ ಗುರ್ಜಾರ್. ಆತನ ಮೀಸೆ 12 ಅಡಿ ಉದ್ದ, 6 ಇಂಚು ದಪ್ಪ ಇತ್ತು. ಆತನಿಗೆ ಈ ರೀತಿಯಾಗಿ ಮೀಸೆ ಬೆಳೆಸಲು 22 ವರ್ಷ ಬೇಕಾಗಿದೆಯಂತೆ. ಇದು 2004ರಲ್ಲಿ ವಿಶ್ವದಾಖಲೆ ಎನಿಸಿತ್ತು. ಹಲವಾರು ಜನ ಸಾಹಸಿಗಳು ತಮ್ಮ ಉದ್ದನೆಯ ಮೀಸೆಯಿಂದ ಭಾರ ಎತ್ತುವುದು, ವಾಹನ ಎಳೆಯುವುದು ಇತ್ಯಾದಿ ಸಾಹಸ ಪ್ರದರ್ಶಿಸುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ.
ಮೀಸೆಯ ವಿವಿಧ ನಾಮ
ಜನರು ಮೀಸೆಯನ್ನು ಅದರ ಆಕಾರ, ಗಾತ್ರಕ್ಕೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಪ್ರಮುಖವಾಗಿ ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಕಡ್ಡಿ ಮೀಸೆ, ಹುರಿ ಮೀಸೆ, ಬೆಕ್ಕಿನ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆ ಮೀಸೆ, ಫಿಲ್ಟರ್ ಮೀಸೆ, ಇತ್ಯಾದಿ. ಊರುಗಳು ಬದಲಾದಂತೆ ಮೀಸೆಯ ಹೆಸರುಗಳಲ್ಲಿ ಹಲವಾರು ಬದಲಾವಣೆಗಳನ್ನು ನೋಡಬಹುದು. ಈಗ ಮೀಸೆ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಯಾರೂ ಏನೂ ಅನ್ನೋಲ್ಲ. ಮೀಸೆ ಇವತ್ತು ಬೋಳಿಸಿದ್ರೆ ಇನ್ನು ಮೂರು ದಿನಗಳಲ್ಲಿ ಬೆಳೆಯುತ್ತೆ ಆದ್ದರಿಂದ ಅದರ ಬಗ್ಗೆ ಯಾರೂ ಚಿಂತೆ ಮಾಡೋಲ್ಲ.

ಭಾನುವಾರ, ಜೂನ್ 10, 2012

 ಮೋಡಗಳ ಮರೆಯಿಂದ ರವಿತೇಜ ಹೊರಬಂದ....
facebook

ವೈವಿಧ್ಯಮಯ ನಾಣ್ಯ-ನೋಟುಗಳ ಸಂಗ್ರಹ


ಬಾಳಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಆರೋಗ್ಯಕರ ಸಂಗತಿ. ಇದರಿಂದ ನಮ್ಮ ಜ್ಞಾನ ಭಂಡಾರವು ವೃದ್ಧಿಸುವುದು ಹಾಗೂ ಸದಾ ಚಟುವಟಿಕೆಯಿಂದಿರಲು ಸಾಧ್ಯ. ಕತೆ, ಕಾದಂಬರಿ, ಲೇಖನ ಇತಾದಿ ಪುಸ್ತಕಗಳನ್ನು ಓದುವ, ಸಾಂಪ್ರದಾಯಿಕ, ಜನಪದ ಕಲೆ ಹಾಗೂ ಸಿನೆಮಾಗಳನ್ನು ವೀಕ್ಷಿಸುವ ಹವ್ಯಾಸ ಇರುವವರನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಅಂಚೆ ಚೀಟಿ, ಹಳೆ ಕಾಲದ ಹಾಗೂ ದೇಶ -ವಿದೇಶಗಳ ನಾಣ್ಯ, ಪತ್ರಿಕೆ, ಪುಸ್ತಕ, ಪಾತ್ರೆ ಸಾಮಾನು ಇತ್ಯಾದಿಗಳನ್ನು ಸಂಗ್ರಹಿಸುವ ಹವ್ಯಾಸದವರು ವಿರಳ. ಅಂಥವರಲ್ಲಿ ವಿವಿಧ ರೀತಿಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವ ಚೇತನಡ್ಕ ಶ್ರೀಕೃಷ್ಣ facebookಭಟ್ಟರು ಒಬ್ಬರು.
ಅವರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಚೇತನಡ್ಕ ನಿವಾಸಿ. ಸಮಾರು 5-6 ವರ್ಷಗಳಿಂದ ಈ ಹವ್ಯಾಸವನ್ನು ರೂಢಿಸಿಕೊಂಡಿರುವ ಭಟ್ಟರಿಗೆ ಸ್ನೇಹಿತ ತಲಶ್ಯೇರಿಯ ರಾಜನ್ ಅವರೇ ಪ್ರೇರಣೆಯಂತೆ. ರಾಜನ್ ಅವರಿಗೂ ನಾಣ್ಯ ಸಂಗ್ರಹಿಸುವ ಹವ್ಯಾಸವಿದ್ದು, ಅವರು ತಮ್ಮಲ್ಲಿರುವ ಕೆಲವೊಂದು ಅಪರೂಪದ ನಾಣ್ಯ, ನೋಟುಗಳನ್ನು ಭಟ್ಟರಿಗೆ ನೀಡುತ್ತಿದ್ದರಂತೆ. ಶ್ರೀಕೃಷ್ಣ ಭಟ್ಟರ ಕೈಯಲ್ಲಿ ಅಂಥಹ ನಾಣ್ಯಗಳನ್ನು ಕಂಡ ಅವರ ಪತ್ನಿ ರಾಜೇಶ್ವರಿ ಅವರು ಅವುಗಳನ್ನು ಸಂಗ್ರಹಿಸುವಂತೆ ಒತ್ತಾಯಿಸಿ, ಪ್ರೋತ್ಸಾಹಿಸಿದರ ಪರಿಣಾಮ ಭಟ್ಟರಲ್ಲಿ ಇಂಥಹಾ ಹವ್ಯಾಸವೊಂದು ಬೆಳೆಯಲು ಕಾರಣವಾಯಿತು.
  ಅವರು ಮೂಲತಃ ಕೃಷಿಕರಾಗಿದ್ದು, ಸಂಜೆಯ ಬಿಡುವಿನ ವೇಳೆ ಹೋದಲ್ಲಿ ಸಿಕ್ಕಿದ ವಿವಿಧ ರೀತಿಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಸಂಗ್ರಹದಲ್ಲಿ ಹಿಂದಿನ ಅರಸರ ಕಾಲದ ವಿವಿಧ ಹಾಗೂ ದೇಶ -ವಿದೇಶಗಳ ನಾಣ್ಯ ಮತ್ತು ನೋಟುಗಳನ್ನು ನೋಡಬಹುದು.
ವಿವಿಧ ರೀತಿಯ ಸಂಗ್ರಹ
ಸಮಾರು 200ಕ್ಕೂ ಅಧಿಕ ರಾಷ್ಟ್ರಗಳ ವೈವಿಧ್ಯಮಯ ನಾಣ್ಯ, ನೋಟುಗಳು ಭಟ್ಟರ ಸಂಗ್ರಹದಲ್ಲಿವೆ. ಅದರಲ್ಲಿ ಪ್ರಮುಖವಾಗಿ ವಿದೇಶಗಳಾದ ಇಂಗ್ಲೆಂಡ್, ಇಟೆಲಿ, ಆಸ್ಟ್ರೇಲಿಯಾ, ಸಿಂಗಾಪುರ, ಫಿಲಿಪ್ಪೇನ್ಸ್, ಕೆನೆಡಾ, ಡಿಗಿ ಚೌಟ, ಶ್ರೀಲಂಕಾ, ಚೀನಾ. ಅಮೆರಿಕಾ, ಟರ್ಕಿ, ಯುನೈಟೆಡ್ ಅರಬ್, ಯುನೈಟೆಡ್ ಎಮಿರೇಟ್ಸ್, ದುಬಾ, ಥೈಲ್ಯಾಂಡ್, ನೆದರ್ಲ್ಯಾಂಡ್, ಮಸ್ಕತ್, ಲೆಬನಾನ್, ಥೈವಾನ್, ಬೆಲ್ಜಿಯಂ, ಮಾಲ್ಡಿವ್ಸ್, ಹಾಂಕ್ಕಾೀಂಗ್, ಸ್ವೀಡನ್, ಚಿಲಿ, ಅರ್ಜೆಂಟಿನಾ, ಮಲೇಷಿಯಾ, ಮೊಜಾಂಬಿಕ್, ಡಚ್, ಪೋರ್ಚ್ಗಲ್, ನೇಪಾಳ, ಪಾಕಿಸ್ತಾನ, ಇರಾನ್ ಇತ್ಯಾದಿ. ಇವುಗಳಲ್ಲದೆ ಭಾರತದಲ್ಲಿ ಹಿಂದೆ ಅರಸರ ಕಾಲದಲ್ಲಿ ಬಳಕೆಯಲ್ಲಿದ್ದ ಹಲವಾರು ನಾಣ್ಯಗಳನ್ನು ಅವರ ಸಂಗ್ರಹದಲ್ಲಿ ಕಾಣಬಹುದು. ಮುಖ್ಯವಾಗಿ ಕ್ರಿ. ಶ. 1616ರಲ್ಲಿ ಈಸ್ಟ್ಇಂಡಿಯಾ ಕಂಪೆನಿಯು ಭಾರತದಲ್ಲಿ ಜಾರಿಗೆ ತಂದ ಲಕ್ಷ್ಮೀ ಮತ್ತು ಗಣಪತಿಯ ಚಿತ್ರದ ನಾಣ್ಯಗಳು, ಟಿಪ್ಪು ಸುಲ್ತಾನನ ಕಾಲದ ನಾಣ್ಯಗಳು, ಹನುಮಂತ, ಶ್ರೀರಾಮ, ಲಕ್ಷ್ಮಣ, ಸೀತೆಯರ ಚಿತ್ರವಿರುವ ನಾಣ್ಯ, ಒಟ್ಟೆ ಮುಕ್ಕಾಲು (ನಾಣ್ಯದ ಮಧ್ಯ ಭಾಗದಲ್ಲಿ ತೂತು ಇರುವ), 1 ಪೈಸೆ, ಬೆಳ್ಳಿ, ತಾಮ್ರದ ನಾಣ್ಯಗಳು, ಶ್ರೀಕೃಷ್ಣದೇವರಾಯನ ಕಾಲದ ಪಣ, ಗದ್ಯಾಣ, ತಿರವಾಂಕೂರು ಅರಸರ ಕಾಲದ ಒಂದು, ಎರಡು, ನಾಲ್ಕು, ಎಂಟು ಕಾಸು ಇತ್ಯಾದಿ ನಾಣ್ಯಗಳನ್ನು ನೋಡಬಹುದು.
  ಇವುಗಳಲ್ಲದೆ ಈಗ ಚಲಾವಣೆಯಲ್ಲಿ ಇಲ್ಲದ ದೇಶ -ವಿದೇಶಗಳ 1, 2, 5, 10, 20, 50, 100, 500, 1,000, 2,000ದ ಬೇರೆ ಬೇರೆ ನೋಟುಗಳ ಸಂಗ್ರಹವು ಇದೆ. ಜಗತ್ತಿನ ಪ್ರಮುಖ ನಾಯಕರ ಭಾವಚಿತ್ರವಿರುವ ಹಲವಾರು ನೋಟುಗಳು ಭಟ್ಟರ ಸಂಹಗ್ರಣೆಯಲ್ಲಿ ಕಾಣಬಹುದು. ಉದಾಹರಣೆಗೆ ಗಾಂೀಜಿ, ಬ್ರಿಟಿಷ್ ರಾಣಿ, ಸದ್ದಾಂ ಹುಸೇನ್.
ರಕ್ಷಣೆ 
ಪ್ಲಾಸ್ಟಿಕ್ ಕವರ್ಗಳನ್ನು ತಂದು ಅವುಗಳ ಮಧ್ಯದಲ್ಲಿ ನಾಣ್ಯ, ನೋಟುಗಳನ್ನು ಅಚ್ಚುಕಟ್ಟಾಗಿ, ಪ್ರತ್ಯೇಕ ಸಾಲುಗಳಲ್ಲಿ ಇರಿಸಿ ಅವುಗಳ ಸ್ಥಾನಪಲ್ಲಟವಾಗದಂತೆ ಬಂದಿಸಲಾಗುತ್ತದೆ. ಹೀಗೆ ಬಂದಿಸಿದ ನಾಣ್ಯ, ನೋಟುಗಳ ಪಕ್ಕದಲ್ಲಿ ಅದು ಯಾವ ದೇಶದ್ದು ಎಂದು ಭಟ್ಟರು ಗುರುತಿಸಿದ್ದಾರೆ. ಆಲ್ಬಂ ಮಾಡಿ ಸಂಗ್ರಹಿಸಿಟ್ಟಿರುವುದರಿಂದ ಅವು ಬಹು ಕಾಲ ಬಾಳಿಕೆ ಬರುವುದಲ್ಲದೆ ವೀಕ್ಷಕರಿಗೂ ಬಹುಬೇಗನೆ ನಾಣ್ಯಗಳನ್ನು ಗುರುತಿಸಬಹದಾಗಿದೆ.
ಪ್ರದರ್ಶನ
ವಿವಿಧೆಗಳಲ್ಲಿ ಪ್ರದರ್ಶನಕ್ಕೆ ಇಡುವುದು, ಅದರಿಂದ ಪ್ರಚಾರ ದೊರೆಯುವುದು ಇವುಗಳ ಬಗ್ಗೆ ಭಟ್ಟರಿಗೆ ಆಸಕ್ತಿ ಇಲ್ಲ. ಕೆಲವೊಂದು ಬಾರಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ಮತ್ತು ಪ್ರೈಮೆರಿ ಸ್ಕೂಲ್ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು ಅಷ್ಟೆ. ಅದು ಭಾವ, ಸಾಹಿತಿ ಬಾಲಮಧುರಕಾನನ ಅವರ ಒತ್ತಾಯಕ್ಕೆ. ಇಂಥಹ ಅಪರೂಪದ ನಾಣ್ಯ, ನೋಟುಗಳಿಗೆ ಅದರ ಮುಖ ಬೆಲೆಗಿಂತಲೂ ಅಕ ಮೌಲ್ಯ ನೀಡಬೇಕಿರುವುದರಿಂದ ಅವುಗಳ ಬಗ್ಗೆ ಹೆಚ್ಚು ನಿಗಾವಹಿಸ ಬೇಕಾಗುತ್ತದೆ. ಇದಕ್ಕಾಗಿಯೇ ಭಟ್ಟರು ಪ್ರದರ್ಶನಕ್ಕೆ ಇಡಲು ಹಿದೇಟು ಹಾಕುತ್ತಾರೆ.
ಉದ್ದೇಶ
ಹಿಂದಿನ ಕಾಲದ ನಾಣ್ಯ, ನೋಟುಗಳ ಬಗ್ಗೆ ಇಂದಿನ ಮಕ್ಕಳಿಗೆ ಹಾಗೂ ಮುಂದಿನವರಿಗೆ ಮಾಹಿತಿ ಒದಗಿಸುವುದು ಶ್ರೀಕೃಷ್ಣ ಭಟ್ಟರ ಸಂಗ್ರಹದ ಮುಖ್ಯ ಉದ್ದೇಶ. ವಿವಿಧ ದೇಶಗಳಲ್ಲಿ ಬಳಸುತ್ತಿದ್ದ ಮತ್ತು ಬಳಕೆಯಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆಯಲು ಇದು ಸಹಕಾರಿ. ಅಪರೂಪದ ವಸ್ತುಗಳ ಸಂಗ್ರಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಇಂಥಹಾ ಸಂಗ್ರಹಣಾ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು ಇದರ ಮುಖ್ಯ ಗುರಿಯಾಗಿದೆ.