ಸೋಮವಾರ, ಜುಲೈ 2, 2012

ಬೆಂಡೆ ಪುರಾಣ


ಇದೇನು ಬೆಂಡೆ ಪುರಾಣ ! ಎಂದು ಆಶ್ಚರ್ಯ ಪಡಬೇಡಿ. ನಾವು - ನೀವು ಹೆಚ್ಚಾಗಿ ಅಡುಗೆಗೆ ಬಳಸುವ ಬೆಂಡೆಕಾಯಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬೆಂಡೆಕಾಯಿಯನ್ನು ನೋಡಿದ ತತ್ಕ್ಷಣ ಮಹಿಳೆಯರ ಕೈ ಬೆರಳು ನೆನಪಿಗೆ ಬರುವವುದರಿಂದ ಬ್ರಿಟಿಷರು ಇದಕ್ಕೆ ‘ಲೇಡಿಸ್ ಫಿಂಗರ್’ ಎಂದು ಹೆಸರಿಟ್ಟಿದ್ದಾರೆ. ಸಸ್ಯ ಶಾಸ್ತ್ರದ ಪ್ರಕಾರ ಇದು ‘ಮಲ್ವೇಸಿ’ ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದೆ. ಇದು ದಕ್ಷಿಣ ಆಫ್ರಿಕಾ ಅಥವಾ ಏಷ್ಯಾ ಮೂಲದಿಂದ ಬಂದಿದೆ ಎನ್ನಲಾಗುತ್ತಿದೆ. ಸುಮಾರು 10 - 12ನೇ ಶತಮಾನಗಳಲ್ಲಿ ಅರಬ್ಬಿ ಜನಾಂಗದವರ ಸಂಚಾರದ ಮೂಲಕ ಮೆಡಿಟರೇನಿಯನ್ ರಾಷ್ಟ್ರಗಳಿಗೆ ಪಸರಿಸಿರಬೇಕು ಎಂದು ಪ್ರತೀತಿ. ಸುಮಾರು 16ನೇ ಶತಮಾನದ ಮೊದಲೇ ಇದು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿರಬೇಕು. ಆಫ್ರಿಕಾ, ಯುಎಸ್ಎ ಹಾಗೂ ಮೆಡಿಟರೇನಿಯನ್ ರಾಷ್ಟ್ರಗಳಲ್ಲಿ ಬೆಂಡೆ ‘ಓಕ್ರ’ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇದು ಉತ್ತರ ಆಫ್ರಿಕಾ ಖಂಡದ ಭಾಷ ವರ್ಗಕ್ಕೆ ಸೇರಿದ ಪದ. ಆ ಪ್ರದೇಶದ ಆದಿವಾಸಿಗಗಳು ತರಕಾರಿಯಾಗಿ ಇದನ್ನು ಬಳಸುತ್ತಿದ್ದರು.
ಪೌಷ್ಟಿಕಾಂಶ 
ಬೆಂಡೆಕಾಯಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ. ಆದರೆ ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮುಖ್ಯವಾಗಿ ಅದರಲ್ಲಿ ಪಿಷ್ಟ, ಸಾರಜನಕ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಮ್ಯಾಗ್ನೀಷಿಯಂ, ‘ಎ’ ಜೀವಸತ್ವ, ‘ಬಿ1’ ಜೀವಸತ್ವ, ‘ಬಿ2’ ಜೀವಸತ್ವ, ನಯಾಸಿನ್, ‘ಸಿ’ ಜೀವಸತ್ವ, ಪೊಟ್ಯಾಷಿಯಂ, ಆಕ್ಯಾಲಿಕ್ ಆಮ್ಲ,ಗಳಂತಹ ಪೌಷ್ಟಿಕಾಂಶಗಳಿವೆ.
ಔಷಧಿಯಾಗಿ ಬೆಂಡೆ
ಬೆಂಡೆ ಒಂದು ತಂಪು, ಪಿತ್ತ ಶಮನ ಹಾಗೂ ಉರಿಯನ್ನು ಕಡಿಮೆ ಮಾಡಬಲ್ಲ ಆಹಾರ. ಶೀತ, ಕೆಮ್ಮು ಇರುವವರು ಬೆಂಡೆಕಾಯಿಯೊಂದಿಗೆ ಶುಂಠಿ ಮತ್ತು ಮೆಣಸು ಸೇರಿಸಿ ಸೇವಿಸುವುದು ಉತ್ತಮ. ಬಲಿತ ಬೆಂಡೆಯನ್ನು ಎಸೆಯದೆ ತೊಳೆದು ಒಣಗಿಸಿಟ್ಟು, ದೊಸೆ ಹಿಟ್ಟಿನೊಂದಿಗೆ ಸೇರಿತಿರುವಿದರೆ ದೋಸೆ ಮೃದುವಾಗುವುದು. ಸ್ಥೂಲ ಕಾಯದವರಿಗೆ, ಮಧುಮೇಹಿಗಳಿಗೆ ಇದು ಉತ್ತಮ ತರಕಾರಿ. ಇದನ್ನು ತಿನ್ನುವುದರಿಂದ ಮಲವಿಸರ್ಜನೆ ಸುಲಭ. ಬೆಂಡೆಕಾಯಿಯಿಂದ ತಯಾರಿಸಿದ ಜ್ಯೂಸ್, ದಾಹವನ್ನು ಬಲುಬೇಗ ನಿವಾರಿಸುವುದು.
ಬೆಂಡೆ ಪದಾರ್ಥ
ಬೆಂಡೆಕಾಯಿಂದ ಹಲವಾರು ವಿಧವಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಪಲ್ಯ, ಸಂಬಾರು, ಬೆಂಡೆಗೊಜ್ಜು, ಬೆಂಡೆಕಾಯಿ ರಸಂ, ಬೆಂಡೆಕಾಯಿ ಸಾಸಿವೆ, ಬೆಂಡೆಕಾಯಿ ಫ್ರೈ, ಬೆಂಡೆ ಬಜೆ, ಬೆಂಡೆಕಾಯಿ ಬಾಳಕ, ಬೆಂಡೆ ಹುಳಿ ಇತ್ಯಾದಿ.
ಬೆಂಡೆ ಕೃಷಿ
ಬೆಂಡೆ ಕೃಷಿಗೆ ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಉತ್ತಮ. ಈ ಬೆಳೆಗೆ ಸರಿಯಾದ ಬಿಸಿಲು ಬೇಕು. ಇದು ಉಷ್ಣ ವಲಯದ ತರಕಾರಿ ಆದ್ದರಿಂದ ಕನಿಷ್ಟ 17 ಡಿಗ್ರಿ ಸೆ.ನಿಂದ 33 ಡಿಗ್ರಿ ಸೆ. ವರೆಗೆ ಉಷ್ಣತೆ ಇರುವ ಪ್ರದೇಶಗಳಲ್ಲಿ ಎಲ್ಲೆಡೆ ಬೆಳೆಯ ಬಹುದಾಗಿದೆ. ಬೆಂಡೆಯನ್ನು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದು. ಹೆಚ್ಚಾಗಿ ಜನವರಿ-ಫೆಬ್ರವರಿ ಹಾಗೂ ಜೂನ್-ಜುಲೈ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡಲಾಗುತ್ತದೆ.
ಕೊಯ್ಲು
ಬೆಂಡೆ ಗಿಡವಾಗಿ 40-45 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸಸಿ ಹೂ ಬಿಟ್ಟ ಅನಂತರ 3ರಿಂದ 7 ದಿನಗಳಲ್ಲಿ ಕಾಯಿಗಳು ಮೂಡುತ್ತವೆ. ನಾರಿಲ್ಲದ ಎಳೆಯ ಕಾಯಿಗಳನ್ನು 3-4 ದಿಗನಗಳಿಗೊಮ್ಮೆ ಕೊಯ್ಯಬಹುದು. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆಯ ಸಮಯ ಕೊಯ್ಲಿಗೆ ಸೂಕ್ತ. ಆಗಿಂದಾಗೆಗ್ಗೆ ಅನೇಕ ಬಾರಿ ಕೊಯ್ಲು ಮಾಡುವುದರಿ,ದ ಕಾಯಿಯ ಇಳುವರಿ ಹಾಗೂ ಗುಣಮಟ್ಟ ಹೆಚ್ಚುತ್ತದೆ. ಹಟ್ಟಿ ಗೊಬ್ಬರ ಅಥವಾ ಸಾವಯವ ಗೊಬ್ಬರಗಳನ್ನು ಬಲಸುವುದೇ ಉತ್ತಮ. ಇದರಿಂದ ಬಹುಕಾಲ ಕೊಯ್ಲುಲು ಸಾಧ್ಯ. ಇದಲ್ಲದೆ ಸುಡುಮಣ್ಣು ಅಥವಾ ಬೂದಿ, ಸೊಪ್ಪುನ್ನು ಗೊಬ್ಬರವಾಗಿ ಬಳಸಬಹುದು. ನೆಲಗಡಲೆ, ಕಹಿಬೇವಿನ ಹಿಂಡಿಯನ್ನು ನೀರಿನಲ್ಲಿ ನೆನೆಸಿ ಬೂದಿಯೊಂದಿಗೆ ಮಿಶ್ರಮಾಡಿ ಹಾಕಬಹುದು.
ರಕ್ಷಣೆ
ಕ್ರಿಮಿಕೀಟಗಳ, ರೋಗ ಬಾಧೆಗಳಿಂದ ಬೆಂಡೆ ಕೃಷಿಯನ್ನು ರಕ್ಷಿಸಲು ರಾಸಾಯನಿಕ ವಸ್ತುಗಳ ಸಿಂಪಡಣೆಗಿಂತ ಗೋಮೂತ್ರದ ಔಷಧವನ್ನು ತಯಾರಿಸಿ ಬಳಸಿದರೆ ಉತ್ತಮ.
 ಗೋಮೂತ್ರದ ಔಷಧ ತಯಾರಿ: ಒಂದು ಕೊಡ ನೀರಿಗೆ ಒಂದು ಕೇಜಿ ಹುಳಿ ಬೆಲ್ಲ, ಎರಡು ಲೀಟರ್ ಗೋಮೂತ್ರ ಮಿಶ್ರಮಾಡಿ ಒಂದು ದಿವಸ ಹಾಗೇ ಬಿಟ್ಟು ಮಾರನೇ ದಿನ ಗಿಡಗಳ ಮೇಲೆ, ಬುಡ ಹಾಗೂ ಸುತ್ತಲೂ ಸಿಂಪಡಿಸಬೇಕು. ತಿಂಗಳಲ್ಲಿ ಮೂರು ಬಾರಿ ಈ ರೀತಿ ಸಿಂಪಡಿಸುವುದರಿಂದ ಕೀಟ, ವಿವಿಧ ರೋಗಗಳಿಂದ ದೂರವಿರಬಹುದು.

1 ಕಾಮೆಂಟ್‌: