ಓಯ್, ಮಾರಾಯ್ರೆ ಈಗಿನ ಯುವಜನತೆಗೆ ಮದುವೆ ಬೇಡವಂತೆ! ಮದುವೆ ಅಂದರೆ ಅವರಿಗೆ ಯಾವಗ ವಿಚ್ಛೇದನ ಅಗುತ್ತೋ ಅಂತ ಭಾರೀ ಹೆದರಿಕೆ. ಮದುವೆಯಾದರೆ ಹೊಣೆಗಾರಿಕೆಯ ಸುಳಿಯಲ್ಲಿ ಸಿಕ್ಕಿ ಎಂಜಾಯ್ಮೆಂಟ್ ನಶಿಸಿ ಹೋಗುತ್ತದೆಯಂತೆ. ಹಾಗಂತ ನಾನು ಹೇಳ್ತಿಲ್ಲ. ವಿದೇಶದಲ್ಲಿ ನಡೆದ ಸಮೀಕ್ಷೆಯೊಂದು ತಿಳಿಸಿದೆ.
ಜನ್ಮ ಜನ್ಮಗಳ ಅನುಬಂಧ...
‘ಮದುವೆ’ ಎನ್ನುವುದು ಜನ್ಮ ಜನ್ಮಗಳ ಅನುಬಂಧ. ಅದು ಸ್ವರ್ಗದಲ್ಲಿಯೇ ನಿರ್ಧರಿತವಾಗಿರುತ್ತದೆ. ಯಾವ ಗಂಡಿಗೆ, ಯಾವ ಹೆಣ್ಣು ಜೋಡಿ ಎಂಬುದನ್ನು ದೇವರು ಮೊದಲೇ ನಿಶ್ಚಯಿಸಿರುತ್ತಾರೆ. ಒಮ್ಮೆ ಮದುವೆಯಾದರೆ ಮುಗಿಯಿತು. ಮತ್ತೆ ಆ ಜೋಡಿಗಳು ಜೀವನ ಪೂರ್ತಿ ಒಟ್ಟಾಗಿರಬೇಕು (ಜೋಡಿಗಳ ಮಧ್ಯೆ ಹೊಂದಾಣಿಕೆಯಾಗದಿದ್ದರು ಒಗ್ಗೂಡಿ ಬಾಳಬೇಕು) ಎಂಬುದು ನಮ್ಮ ಹಿಂದಿನವರ ಅಭಿಮತ. ಈಗ ಕಾಲ ಬದಲಾಗಿದೆ. ಈ ತಾಂತ್ರಿಕ ಶಕೆಯಲ್ಲಿ ಯಾರು, ಯಾರನ್ನು ಬೇಕಾದರೂ (ಹೆಣ್ಣು -ಗಂಡಿಗೆ ಒಪ್ಪಿಗೆಯಾದವರು) ಮದುವೆಯಾಗಬಹುದು. ಅಲ್ಲದೆ ಮದುವೆಯಾದ ಜೋಡಿಗಳ ಮಧ್ಯೆ ಹೊಂದಾಣಿಕೆ ಸರಿಯಾಗುತ್ತಿಲ್ಲವೆಂದಾದರೆ ಮದುವೆಯಿಂದ ಮುಕ್ತಿ (ವಿಚ್ಛೇದನ) ಪಡೆಯುವ ಅವಕಾಶವು ಇದೆ.
ಈ ಅವಕಾಶದ ಸದುಪಯೋಗವೊ ಅಥವಾ ದುರುಪಯೋಗವೊ ಗೊತ್ತಿಲ್ಲ. ಆದರೆ ವಿಚ್ಛೇದಗಳ ಸಂಖ್ಯೆಯಂತೂ ನಮ್ಮ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರಿಂದ ಇಂದಿನ ಯುವಕ - ಯುವತಿಯರು ಮದುವೆ ಎಂದರೆ ಮಾರುದೂರು ಓಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಪರಿಯಾಯ ಮಾರ್ಗೋಪಾಯವನ್ನು ಯುವಜನತೆ ಕಂಡುಕೊಂಡಂತಿದೆ. ಅದುವೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇಂದು ಯುವಜನತೆ ನಡೆಸುವ ‘ಸಹಜೀವನ’ (ಲಿವಿಂಗ್ ಟುಗೆದರ್) ಕ್ರಮ. ಕೇವಲ ವಿಚ್ಛೆದನ ಭೀತಿಯೊಂದೆ ಇದಕ್ಕೆ ಕಾರಣವಲ್ಲ, ಸಾಂಸಾರಿಕ ಜೀವನ, ಮಕ್ಕಳ ಲಾಲನೆ-ಪೋಷಣೆ, ಹಿರಿಯ ನೋಡಿಕೊಳ್ಳುವ ಜವಾಬ್ದಾರಿ ಇತ್ಯಾದಿ ಹೊಣೆಗಾರಿಕೆಗಳಿಂದ ನುಣುಚಿಕೊಂಡು, ಮೋಜು - ಮಸ್ತಿಯಲ್ಲಿ ಹಾಯಾಗಿರಲು ಬಯಸುವುದು ಕೂಡ ಇದಕ್ಕೆ ಪ್ರೇರಣೆಯಾಗಿದೆ.
ಸಮೀಕ್ಷೆ
ಕಾರ್ನೆಲ್ ವಿಶ್ವವಿದ್ಯನಿಲಯ ಮತ್ತು ಓಕ್ಲಹ್ಯಾಮ್ ವಿಶ್ವವಿದ್ಯಾನಿಲಯ ಈ ಜಂಟಿ ಸಮೀಕ್ಷೆಯನ್ನು ನಡೆಸಿದ್ದು, ಸಮಾಜದ ವಿವಿಧ ಸ್ತರದ ಯುವ ಜನತೆ ಅದರಲ್ಲೂ, ಲಿವಿಂಗ್ ಟುಗೆದರ್ನಲ್ಲಿರುವ ಯುವ ಜೋಡಿಗಳನ್ನು ಇದಕ್ಕೊಳಪಡಿಸಿತು.
ಲಿವಿಂಗ್ ಟುಗೆದರ್ನತ್ತ ಒಲವು
ಸಮೀಕ್ಷೆಗೊಳಗಾದ ಯುವಜನತೆಯಲ್ಲಿ ಮೂರನೇ ಎರಡು ಭಾಗ ಮದುವೆ ಬಳಿಕ ವಿಚ್ಛೇದನವಾಗುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಒಂದು ವೇಳೆ ವಿಚ್ಛೇದನವಾದರೆ, ನಮ್ಮ ಒಟ್ಟಾರೆ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ, ಆರ್ಥಿಕ, ಕಾನೂನು, ಮಾನಸಿಕ ತಳಮಳಗಳಿಗೆಲ್ಲ ಅದೇ ದೊಡ್ಡ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಶೇ.67ರಷ್ಟು ಮಂದಿ ವಿಚ್ಛೇದನ ಭೀತಿ ಹೊರಹಾಕಿದ್ದಾರೆ. ಇನ್ನು ಮಧ್ಯಮ ವರ್ಗದ ಹೆಚ್ಚಿನ ಜನತೆ ಮದುವೆಯಾಗಲು ಒಲವು ತೋರಿದ್ದಾರಂತೆ. ಮದುವೆಗೂ ಮುನ್ನ ‘ಲಿವಿಂಗ್ ಟುಗೆದರ್’ ಇತ್ಯಾದಿ ಎಲ್ಲ, ಪರಸ್ಪರ ಅರಿಯಲು ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕಡಿಮೆ ಆದಾಯದ ಮಹಿಳೆಯರ ಅಭಿಪ್ರಾಯವೇ ಬೇರೆ. ಮದುವೆ ಎಂದರೆ ಅದೊಂದು ಬಂಧನವಿದ್ದಂತೆ. ಒಂದು ವೇಳೆ ತಪ್ಪುಗಳನೇದರೂ ಸಂಭವಿಸಿದಲ್ಲಿ, ಅವಘಡವೇ ಆಗಿಬಿಡುತ್ತದೆ. ಅಲ್ಲದೇ ಜವಾಬ್ದಾರಿಯೂ ಹೆಚ್ಚು ಎಂದು ಹೇಳಿದ್ದಾರೆ.
ದುಡಿಮೆ ನಡೆಸುವ, ಲಿವಿಂಗ್ ಟುಗೆದರ್ನಲ್ಲಿರುವ ಯುವ ಜನತೆ ಪ್ರಕಾರ ಮದುವೆ ಎಂದರೆ ಕೇವಲ ಒಂದು ತುಂಡು ಕಾಗದ. ಈಗಿದ್ದ ವ್ಯವಸ್ಥೆಗೇ ಒಂದು ಪ್ರತ್ಯೇಕ ಗುರುತು ನೀಡಿದಂತೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ವಿಚ್ಛೇದನದ ಭಯ ಒಂದು ಕಡೆಯಾದರೆ, ಮದುವೆಗೆ ಮುನ್ನ ಯುವಜನತೆ ಲಿವಿಂಗ್ ಟುಗೆದರ್ ಬಗ್ಗೆ ಹೆಚ್ಚಿನ ಒಲವು ಹೊಂದಿರುವುದು ವ್ಯಕ್ತವಾಗಿದೆ ಎನ್ನುತ್ತಿದೆ ಈ ಸಮೀಕ್ಷೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ