ಬುಧವಾರ, ಮೇ 9, 2012

ಬಲು ಅಪರೂಪ ಈ ‘ಮುಳ್ಳಣ್ಣು’


ಕಾಡಿನಲ್ಲಿ ದೊರೆಯುವ ವಿವಿಧ ಹಣ್ಣುಗಳಲ್ಲಿ ‘ಮುಳ್ಳಣ್ಣು’ ಒಂದು. ಮುಳ್ಳಿನ ಮರವೊಂದರಲ್ಲಿ ಬೆಳೆಯುವ ಹಣ್ಣಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ.
ವಿವಿಧೆಡೆಗಳಲ್ಲಿ ಇದನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮುಖ್ಯವಾಗಿ ‘ಚಪ್ಳಂಗಾಯಿ’, ‘ಜಬ್ರಿಕಾಯಿ’, ‘ಚಪ್ಲಿಂಗ’, ‘ಅಪ್ಪಿಕಾಯಿ’, ‘ಮುಳ್ಳುಸಂಪಿಗೆ ಹಣ್ಣು’, ‘ಅಬ್ಲುಂಕ’, ‘ಜವಳಿ ಹಣ್ಣು’, ‘ಆರ್ಬೀಜ ಹಣ್ಣು’, ‘ಆರ್ಬೂಜ’ ಇತ್ಯಾದಿ.


 ಕುಂಟಾಲ, ನೇರಳೆ, ಚೂರಿ, ಞಣಿಲು, ಕೇಪುಳ ಇತ್ಯಾದಿ ಹಣ್ಣುಗಳಂತೆ ಇದನ್ನು ಹಳ್ಳಿಗರು ತಿನ್ನುತ್ತಾರೆ. ಈ ಹಣ್ಣು ಹುಳಿ, ಚೋಗರು, ಸಿಹಿಯ ಮಿಶ್ರಣದಂತೆ ಇರುವುದರಿಂದ ತಿನ್ನಲು ಬಲು ರುಚಿ. ಆದರೆ ಇದನ್ನು ಅತಿಯಾಗಿ ತಿಂದರೆ ನೆತ್ತಿಗೆಂಡೆ, ಅಜೀರ್ಣದಂತಹ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ತಿನ್ನುವಾಗ ಜಾಗೃತೆ ಅಗತ್ಯ.
ಇದು ಕಾಣಲು ಕಾಫಿ ಹಣ್ಣಿನಂತಿದೆ. ಆದರೆ ಇದರೊಳಗೆ ಚಿಕ್ಕ ಬೀಜಗಳಿವೆ. ಚಳಿಗಾಲ ಮತ್ತು ಬೇಸಗೆ ಕಾಲದ ಮೊದಲದಿನಗಳಲ್ಲಿ ಈ ಹಣ್ಣು ಸಿಗುತ್ತವೆ. ಕಾಡುಗಳ ನಾಶದಿಂದಾಗಿ ಇಂದು ಮುಳ್ಳುಣ್ಣಿನ ಮರ ಬಹಳ ಅಪರೂಪವಾಗಿದೆ.
ಉಪ್ಪಿನಕಾಯಿ
ಹಿಂದಿನ ಕಾಲದಲ್ಲಿ ಇದನ್ನು ಬಳಸಿ ಹಳ್ಳಿಗಲ್ಲಿ ಉಪ್ಪಿನಕಾಯಿ ತಯಾರಿಸುತ್ತಿದ್ದರು. ಚಪ್ಳಂಗಾಯಿ ಎಳತು ಮಿಡಿಯಾಗಿರುವಾಗ ಕೊಯ್ದು ತಂದು ನೀರಿನಲ್ಲಿ ಹಾಕಿ ಕುದಿಸಬೇಕು. ಅನಂತರ ಒಂದು ದಿನ ಕಾಲ ಉಪ್ಪು ನೀರಿನಲ್ಲಿ ನೆನೆ ಹಾಕಿ. ಬಳಿಕ ಮೆಣಸು ಸಾಸಿವೆ, ಅರಶಿಣಗಳನ್ನು ಅರೆದು ಮಿಶ್ರಮಾಡಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಮಿಡಿಯಾಗಿರುವಾಗ ಇದರಲ್ಲಿ ಚೊಗರು, ಹುಳಿಗಳು ಅತಿಯಾಗಿರುವುದರಿಂದ ಉಪ್ಪಿನಕಾಯಿ ಹಾಕಲು ಬಹು ಉತ್ತಮ. ಕರಂಡೆ ಕಾಯಿ, ನೆಲ್ಲಿಕಾಯಿಯಂತೆ ಇದನ್ನು ಸುಮಾರು ಒಂದು - ಒಂದೂವರೆ ವರ್ಷದ ವರೆಗೆ ಉಪಯೋಗಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ