ಮಂಗಳವಾರ, ಮೇ 8, 2012

ಬೇಸಗೆ ಶಿಬಿರ ಮಕ್ಕಳಿಗಿದು ಪ್ರೇರಕ


ಎಪ್ರೀಲ್-ಮೇ ತಿಂಗಳುಗಳೆಂದರೆ ಚಿಣ್ಣರಿಗೆ ಬೇಸಗೆ ರಜೆಯ ಮಜಾ. ಅಂತಹ ಚಿಣ್ಣರನ್ನು ಸೆಳೆಯಲು ವಿವಿಧೆಡೆಗಳಲ್ಲಿಂದು ರಜಾ ಶಿಬಿರ, ಬೇಸಗೆ ಶಿಬಿರಗಳು ತಲೆಯೆತ್ತತೊಡಗಿವೆ. ಹೌದು, ಹಿಂದಿನ ಕಾಲದಲ್ಲಿ ಬೇಸಗೆ ರಜೆ ಬಂತೆಂದರೆ ಹೆತ್ತವರಿಗೆ, ಪೋಷಕರಿಗೆ ತಲೆ ನೋವು. ತುಂಟ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂಬುದು. ಆದರೆ ಈಗ ಕಾಲ ಹಾಗಿಲ್ಲ. ರಜೆಯಲ್ಲೂ ಮಕ್ಕಳು ಸದಾ ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳ ಬಹುದಾದಂತಹ ಶಿಬಿರಗಳನ್ನು ಅಲ್ಲಲ್ಲಿ ಆಯೋಜಿಸುತ್ತಿರುವುದನ್ನು ಕಾಣಬಹುದು. ವಿವಿಧ ಸಂಘ-ಸಂಸ್ಥೆಗಳು ಇಂದು ಬೇಸಗೆ ಶಿಬಿರಗಳನ್ನು ಉಚಿತವಾಗಿ ಏರ್ಪಡಿಸುತ್ತಿವೆ. ಇದು ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳಿಗೂ ಶಿಬಿರಗಳ ಪ್ರಯೋಜನ ಪಡೆಯಲು ಸಹಕಾರಿ.
ವಿದೇಶಿ ಕಲ್ಪನೆ
ಬೇಸಗೆ ಶಿಬಿರ ಮೂಲತಃ ವಿದೇಶಿ ಕಲ್ಪನೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದ ‘ಸಮ್ಮರ್ ಕ್ಯಾಂಪ್’, ಸಮ್ಮರ್ ಕೋರ್ಸ್ ನಮ್ಮಲ್ಲಿ ಬೇಸಗೆ ಶಿಬಿರದ ಸ್ವರೂಪ ಪಡೆದುಕೊಂಡಿದೆ. ಹಿಂದೆ ಪಟ್ಟಣಗಳಲ್ಲಿ ಮಾತ್ರ ಇದ್ದ ಇಂತಹ ಶಿಬಿರಗಳು ಇಂದು ಹಳ್ಳಿಗಳಿಗೂ ವ್ಯಾಪಿಸಿದೆ.
ಬೇಸಗೆ ಶಿಬಿರಗಳಲ್ಲಿ ಏನಿದೆ ?
ಶಾಲೆಗಳಿಗೆ ಬೇಸಗೆ ರಜೆ ಇರುವ ಸಂದರ್ಭ ತಜ್ಞ ತರಬೇತುದಾರರಿಂದ ಆಸಕ್ತ ಮಕ್ಕಳಿಗೆ ಶಿಬಿರಗಳ ಮೂಲಕ ಪಠ್ಯೇತರ ಚಟುವಟಿಕೆಗಳ ಬಗ್ಗೆ ಕಲಿಸಿ ಕೊಡಲಾಗುತ್ತದೆ. ಮೈಂಡ್ ಫ್ರೆಶ್ ಗೇಮ್ಸ್, ವಿವಿಧ ಕಲೆ, ಸಂಸ್ಕೃತಿಯ ಪರಿಚಯಿಸಲಾಗುವುದು. ಇದರಿಂದ ಮಕ್ಕಳ ಮನಸ್ಸು ಸದಾ ಉಲ್ಲಾಸ, ಉತ್ಸಾಹದಿಂದ ಚಿಮ್ಮುವುದು. ಬೇಸಗೆ ಶಿಬಿರಗಳಲ್ಲಿ ವಿವಿಧ ಕಡೆಗಳಿಂದ ಬಂದ ಮಕ್ಕಳು ಕಲೆ ಸಾಂಸ್ಕೃತಿಕ ಚಟುವಟಿಕೆ, ಆಟೋಟ ಸ್ಪರ್ಧೆಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಾರೆ. ಇದರಿಂದ ಮುಖ, ವಿಷಯಗಳ ಪರಿಚಯವಾಗುತ್ತದೆ. ತನ್ನಷ್ಟಕ್ಕೇ ಇರುತ್ತಿದ್ದ ಮಕ್ಕಳು ಕೂಡ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವರು. ಇಂತಹ ಶಿಬಿರಗಳು ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಕಂಡುಕೊಳ್ಳಲು ಸಾಧ್ಯ.
 ಶಿಬಿರಗಳಿಂದ ನಾಯಕತ್ವದ ಗುಣ, ಎಲ್ಲರೊಂದಿಗೆ ಬೆರೆತು ಬಾಳುವ ಸ್ವಭಾವ ಮಕ್ಕಳಲ್ಲಿ ಹುಟ್ಟಿಕೊಳ್ಳುತ್ತದೆ. ಸಭಾಕಂಪನ ದೂರವಾಗುತ್ತದೆ. ಇದು ಮಕ್ಕಳ ಚಿಂತನಾ ಶೈಲಿಯನ್ನು ಬದಲಿಸಿ, ಹೊಸತನಕ್ಕೆ ಕಾರಣವಾಗುವುದು. ಇದು ಚಿಣ್ಣರ ಮನಸ್ಸಿಗೆ ಮನೋರಂಜನೆ ಹಾಗೂ ಮತ್ತಷ್ಟು ಚುರುಕುತನ ನೀಡುತ್ತದೆ.
ಉದ್ದೇಶ
ಮಕ್ಕಳಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸದಭಿರುಚಿ ಹುಟ್ಟಿಸವುದು, ಮನೋವಿಕಾಸಕ್ಕೆ ಸಹಕಾರಿಯಾಗುವುದು ಬೇಸಗೆ ಶಿಬಿರಗಳ ಮುಖ್ಯ ಉದ್ದೇಶ. ವರ್ಷವಿಡೀ ಒಂದೋರೀತಿಯ ಶಿಕ್ಷಣ ಕ್ರಮದಿಂದ ವಿದ್ಯಾರ್ಥಿಗಳು ಹೊರಬರಲಿ. ಅವರಿಗೆ ಸ್ವಲ್ಪ ಫ್ರೀನೆಸ್ ದೊರೆಯಲಿ ಎಂದು ಬೇಸಗೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಈ ರಜೆಯ ಸಮಯವನ್ನು ಮಕ್ಕಳು ವೀಡಿಯೋಗೇಮ್, ಟಿ.ವಿ., ಕಂಪ್ಯೂಟರ್ಗಳ ಮುಂದೆಯೆ ಕಳೆಯದಂತೆ ಮಾಡುವುದು, ಮನಸ್ಸಿಗೆ ಮತ್ತಷ್ಟು ಚುರುಕುತನ ನೀಡುವುದು ಬೇಸಗೆ ಶಿಬಿರಗಳ ಗುರಿಯಾಗಿದೆ. ಮಕ್ಕಳು ಆಟವಾಡುತ್ತಾ ಕಲಿಯುವಂತಾಗಲು ಇಂತಹ ಶಿಬಿರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಆಯೋಜಿಸದೆ ಪರಿಸರದ ಮಡಿಲಲ್ಲಿ ಏರ್ಪಡಿಸಲಾಗುತ್ತದೆ. ಇದರಿಂದ ಪ್ರಕೃತಿಯೊಂದಿಗಿನ ಮಕ್ಕಳ ಭಾಂದವ್ಯವು ವೃದ್ಧಿಸುವುದು. ಜೀವನಾಸುಭವವನ್ನು ಹೆಚ್ಚಿಸುತ್ತಾ, ಮಕ್ಕಳ ಮಾನಸಿಕ ಜಡತ್ವವನ್ನು ದೂರೀಕರಿಸಿ, ನಿರಂತರ ಕ್ರೀಯಾಶೀಲರನ್ನಾಗಿಸುವುದೇ ಇಂತಹ ಶಿಬಿರಗಳ ಧ್ಯೇಯ.
ವಿಭಿನ್ನ ರೀತಿಯ ಶಿಬಿರ
ಮಕ್ಕಳಿಂದ ಮಕ್ಕಳಿಗೆ ಅಭಿರುಚಿ, ಆಸಕ್ತಿಗಳಲ್ಲಿ ಭಿನ್ನತೆ ಇದೆ. ಹಾಗಿಯೇ ಇಂದು ವಿವಿಧ ರೀತಿಯ ಬೇಸಗೆ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಹೆತ್ತವರು ತಮ್ಮ ಮಕ್ಕಳ ಬಯಕೆಗಳಿಗೆ ಅನುಗುಣವಾದ ಶಿಬಿರಗಳಿಗೆ ಅವರನ್ನು ಸೇರಿಸಬಹುದು. ಸಾಂಸ್ಕೃತಿಕ ಚಟುವಟಿಕೆ, ಸಾಹಸ ಕ್ರೀಡೆ, ಕರಕುಶಲ ವಸ್ತುಗಳ ತಯಾರಿ, ಚಿತ್ರಕಲೆ, ವ್ಯಕ್ತಿತ್ವ ವಿಕಸನ, ನಾಯಕತ್ವ ಶಿಬಿರಗಳು ಇತ್ಯಾದಿ ಬೇರೆಬೇರೆ ವಿದಧ ಬೇಸಗೆ ಶಿಬಿರಗಳನ್ನು ಆಯೋಜಿಸುವುದು ಸಾಮಾನ್ಯವಾಗಿದೆ.
ಎಚ್ಚರ: ಮನೋವಿಕಾಸಕ್ಕೆ ಸಹಕಾರಿಯಾಗುವ, ಕ್ರಿಯಾಶೀಲ ಗುಣವನ್ನು ವೃದ್ಧಿಸುವ ಬೇಸಗೆ ಶಿಬಿರಗಳಾದರೆ ಮಕ್ಕಳ ಬೆಳವಣಿಗೆಗೆ ಪೂರಕ. ಆದರೆ ಇಂದು ಎಲ್ಲಾ ವಿಭಾಗಗಳಲ್ಲೂ ವ್ಯಾಪಾರೀ ದೃಷ್ಟಿಕೋನ ಬೇರೂರಿ ಇರುವುದರಿಂದ ಇಲ್ಲಿಯೂ ಅಂತಹ ಚಾಳಿ ಮುಂದುವರಿದಿದೆಯೇ? ಎಂಬ ಬಗ್ಗೆ ತಮ್ಮ ಮಕ್ಕಳನ್ನು ಕ್ಯಾಂಪ್ಗಳಿಗೆ ಸೇರಿಸುವ ಮೊದಲೇ ಎಚ್ಚರಿಕೆವಹಿಸುವುದು ಉತ್ತಮ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ